ಬೆಂಗಳೂರು: ನಗರದಲ್ಲಿ ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಳವಾಗಿದೆ. ಈ ಹಿನ್ನೆಲೆ ಡೆಂಘೀ, ಚಿಕೂನ್‌ಗುನ್ಯಾ ಹೆಚ್ಚಳವಾಗುವ ಆತಂಕ ಎದುರಾಗಿದೆ.
ಈ ಹಿನ್ನೆಲೆ ಸಾರ್ವಜನಿಕರು ಸ್ವತ್ಛತೆ ಬಗ್ಗೆ ಕ್ರಮಕೈಗೊಳ್ಳಲು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಜತೆಗೆ ಸ್ವತ್ಛತೆ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದು, ಸರಳ ಸೂತ್ರವನ್ನು ಪಾಲಿಸುವ ಮೂಲಕ ಸೊಳ್ಳೆಗಳಿಂದ ದೂರ ಉಳಿಯಲು ಸಲಹೆ ನೀಡಲಾಗುತ್ತಿದೆ. ಸತತ ಮಳೆಯಿಂದ ರಸ್ತೆಗುಂಡಿಗಳು, ತೆರೆದ ಪ್ರದೇಶ, ತ್ಯಾಜ್ಯ ಕಾಲುವೆಗಳು ದೀರ್ಘ ಕಾಲ ನೀರು ನಿಂತಿರುತ್ತದೆ. ಇಂತಹ ಪ್ರದೇಶದಲ್ಲಿ ಸೊಳ್ಳೆಗಳು ಹೆಚ್ಚಳವಾಗುತ್ತದೆ.
ಜತೆಗೆ ಮನೆಗಳಲ್ಲಿ ಸಂಗ್ರಹಿಸಿಟ್ಟ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಳವಾಗಿದೆ. ಈಗಾಗಲೇ ಸೊಳ್ಳೆಗಳ ತಾಣಗಳನ್ನು ಗುರುತಿಸಿ ಲಾರ್ವಾ ನಾಶಕ ಔಷಧಗಳಾದ ಲಾರ್ವಿಸೈಡಲ್ ಔಷಧಿ ಸಿಂಪಡಿಸಿ ಸೊಳ್ಳೆಗಳ ಉತ್ಪತ್ತಿಯನ್ನು ನಾಶಪಡಿಸಲು, ಜನರಲ್ಲಿ ಜಾಗೃತಿ ಮೂಡಿಸಲು ಕಳೆದ ವಾರ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು.
ಈ ಹಿನ್ನೆಲೆ ಫಾಗಿಂಗ್ ಸಿಬ್ಬಂದಿ ವಾರ್ಡ್‌ಗಳಲ್ಲಿ ಸಂಚರಿಸಿ ಸೊಳ್ಳೆ ತಾಣಗಳನ್ನು ನಾಶಪಡಿಸುತ್ತಿದ್ದಾರೆ. ಜತೆಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಆರೋಗ್ಯ ಸಹಾಯಕಿಯರು ಮನೆ ಮನೆ ಭೇಟಿ ನೀಡಿ ಈಗಾಗಲೇ ಸಂಗ್ರಹಿಸಿಟ್ಟ ನೀರನ್ನು ತೆರವು ಮಾಡಲು ಸೂಚನೆ ನೀಡುತ್ತಿದ್ದಾರೆ. ಸೊಳ್ಳೆಗಳ ಬಗ್ಗೆ ಜಾಗೃತಿ ಮೂಡಿಸಿ ಸೊಳ್ಳೆ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳನ್ನು ವಿವರಿಸುತ್ತಿದ್ದಾರೆ.
ಬಿಬಿಎಂಪಿ ಯಾವ ವಲಯದಲ್ಲಿ ಹೆಚ್ಚು ಪ್ರಕರಣಗಳು: ಪೂರ್ವ, ಮಹಾದೇವ ಪುರ, ಯಲಹಂಕ ಹಾಗೂ ದಕ್ಷಿಣ ವಲಯದಲ್ಲಿ ಡೆಂಘೀ ಪ್ರಕರಣಗಳು, ಪೂರ್ವ ಮತ್ತು ದಕ್ಷಿಣ ವಲಯದಲ್ಲಿ ಚಿಕನ್‌ಗುನ್ಯಾ ಪ್ರಕರಣಗಳು ಹೆಚ್ಚಿವೆ. ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಮತ್ತು ಚಿಕನ್‌ಗುನ್ಯಾ ಪ್ರಕರಣಗಳು ಅರ್ಧಕ್ಕರ್ಧದಷ್ಟು ಕಡಿಮೆ ಇವೆ. ನಗರದ ಹೊರವಲಯಗಳಿ ಮಾತ್ರ ಪ್ರಕರಣಗಳು ಹೆಚ್ಚಿವೆ ಎನ್ನುತ್ತಾರೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು.
ಡೆಂಘೀ ಜ್ವರದ ಲಕ್ಷಣಗಳು: ಜ್ವರ, ತಲೆನೋವು, ಶೀತ, ಗಂಟಲು ನೋವು,ವಾಂತಿ, ಹೊಟ್ಟೆನೋವು, ನಿಶಕ್ತಿ, ಮೈ ಕೈ ನೋವು, ಅತಿಸಾರ ಭೇದಿ, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.