Advertisement

ಸೊಳ್ಳೆ ನಿಯಂತ್ರಿಸಿದರೆ ಡೆಂಘೀ ತಡೆ ಸಾಧ್ಯ

01:15 PM May 17, 2019 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಮಾನವ ಸಮೂಹಕ್ಕೆ ಮಾರಕ ರೋಗವಾಗಿ ಪರಿಣಮಿಸಿರುವ ಡೆಂಘೀ ಜ್ವರ ನಿಯಂತ್ರಣ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸೊಳ್ಳೆಗಳ ನಿಯಂತ್ರಣದಿಂದ ಮಾತ್ರ ಸಾಂಕ್ರಮಿಕ ರೋಗಗಳಾದ ಡೆಂಘೀ ಹಾಗೂ ಮಲೇರಿಯಾ ರೋಗಗಳನ್ನು ತಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ರವಿಶಂಕರ್‌ ತಿಳಿಸಿದರು.

Advertisement

ನಗರದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ಪ್ರಯುಕ್ತ ಗುರುವಾರ ಜಿಲ್ಲಾಡಳಿತ, ಜಿಪಂ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸ್ವಚ್ಛತೆ ಕಾಪಾಡಿ: ಎಲ್ಲಿ ಹೆಚ್ಚು ಅನೈರ್ಮಲ್ಯ ಇರುತ್ತದೆಯೇ ಅಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಡೆಂಘೀ ಹಾಗೂ ಮಲೇರಿಯಾ ಜ್ವರ ನಿಯಂತ್ರಿಸಬೇಕಾದರೆ ನೀರಿನ ತೊಟ್ಟಿ, ಹಳೆಯ ಟೈರು, ಮಣ್ಣಿನ ಮಡಿಕೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ತೆರೆದ ನೀರಿನ ತೊಟ್ಟಿ, ಡ್ರಂ, ಬ್ಯಾರಲ್, ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ಖಾಲಿಮಾಡಿ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು. ಮಣ್ಣಿನ ಮಡಕೆ, ಚರಂಡಿ ಟೈರ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದರು.

ನೀರು ನಿಲ್ಲದಂತೆ ನೋಡಿಕೊಳ್ಳಿ: ಡೆಂಘೀ ಜ್ವರವು ವೈರಸ್‌ನಿಂದ ಬರುವ ಕಾಯಿಲೆ ಈಡೀಸ್‌ ಮತ್ತು ಈಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಹೆಚ್ಚು ಕಡಿಯುತ್ತವೆ. ಆದ್ದರಿಂದ ಸೊಳ್ಳೆಗಳ ಸಂತತಿ ತಡೆಗಟ್ಟಲು ಸಾರ್ವಜನಿಕರು ತಮ್ಮ ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

Advertisement

ಯಾವುದೇ ಜ್ವರ ಬಂದರೂ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ಡೆಂಘೀ ಜ್ವರ ರೋಗಕ್ಕೆ ತುತ್ತಾದವರು ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಭಾಗದಲ್ಲಿ ತೀವ್ರನೋವು, ಕೀಲು ನೋವು ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿಯ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜನ ಜಾಗೃತಿ ಜಾಥಾ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಜನ ಜಾಗೃತಿ ಜಾಥಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಜನರಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ಅರಿವು ಮೂಡಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಬು ರೆಡ್ಡಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಜುಂಜಣ್ಣ, ತಾಲೂಕು ಆರೋಗ್ಯಾಧಿಕಾರಿ ಹರೀಶ್‌ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಜನವರಿ 2019ರಿಂದ ಮೇ 15 ವರೆಗೆ ಜಿಲ್ಲೆಯಲ್ಲಿ ಒಟ್ಟು 3 ಡೆಂಘಿ ಪ್ರಕರಣಗಳಲ್ಲಿ 1 ಹೊರಗಡೆ ಜಿಲ್ಲೆಯಾ ಗಿದ್ದು, 2 ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರದಿಯಾಗಿವೆ. ಮಲೇರಿಯಾ 2 ಪ್ರಕರಣಗಳಲ್ಲಿ ಎರಡು ಸಹ ಹೊರ ಜಿಲ್ಲೆಯದ್ದಾಗಿವೆ. ಜಿಲ್ಲೆಯಲ್ಲಿ ಇದು ವರೆಗೂ 7 ಚಿಕ್ಯೂನ್‌ಗುನ್ಯ, 2 ಮೆದುಳು ಜ್ವರ ಪ್ರಕರಣಗಳು ಮಾತ್ರ ಕಂಡುಬಂದಿವೆ.
● ಡಾ.ಪ್ರಕಾಶ್‌ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next