Advertisement

ಸ್ವಚ್ಛತೆಯಿಂದ ಡೆಂಘೀ ನಿಯಂತ್ರಣ ಸಾಧ್ಯ: ಬಿಇಒ ಮಜ್ಜಗಿ

05:53 PM Jul 30, 2022 | Team Udayavani |

ನರಗುಂದ: ದೇಶದ ಭಾವಿ ಪ್ರಜೆಗಳಾದ ಇಂದಿನ ಮಕ್ಕಳಿಗೆ ಈಗಿನಿಂದಲೇ ಪರಿಸರ ಬಗ್ಗೆ ಕಾಳಜಿ ಮೂಡಿಸಬೇಕಾಗಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್‌. ಮಜ್ಜಗಿ ಹೇಳಿದರು.

Advertisement

ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಡೆಂಘೀ ವಿರೋಧಿ ಮಾಸಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಡೆಂಘೀ ನಿಯಂತ್ರಣದಲ್ಲಿ ಪರಿಸರ ಸ್ವಚ್ಛತೆ ಹಾಗೂ ನನ್ನ ಪಾತ್ರ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರದಿಂದ ಆಗುವ ಹಾನಿಯಿಂದ ಹತ್ತು ಹಲವು ರೋಗ ರುಜಿನಗಳು ಹರಡಿ ಆರೋಗ್ಯವಂತ ಸಮಾಜ ಹಾಳು ಮಾಡುತ್ತಿವೆ. ಅದಕ್ಕಾಗಿ ಮಕ್ಕಳಲ್ಲಿ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ ಅವರಿಗೆ ಸೊಳ್ಳೆಗಳಿಂದ ಹರಡುವ ಡೆಂಘೀ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಈರಣ್ಣ ಚಲ್ಮಿ ಇವರು ಮಾತನಾಡಿ, ಡೆಂಘೀ ಜ್ವರ ಈಡೀಸ್‌ ಈಜಿಪ್ಟೆ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಡೆಂಘೀ ವಿರೋಧಿ ಮಾಸಾಚರಣೆ ಮಾಡಿ ಸಾರ್ವಜನಿಕರಲ್ಲಿ, ಮಕ್ಕಳಲ್ಲಿ ಅರಿವು ಮೂಡಿಸಲು ಚಿತ್ರ ಬಿಡುಸುವ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಸ್ವಚ್ಛ ನೀರಿನಲ್ಲೇ ಸೊಳ್ಳೆಗಳು ಸಂತಾನೊತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ನಿಯಂತ್ರಣ ಮಾಡುವ ಕುರಿತು ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಸೊಳ್ಳೆಗಳ ಜೀವನ ಚಕ್ರ, ಸೊಳ್ಳೆಗಳ ಸಂತಾನ ಅಭಿವೃದ್ಧಿ ಮಾಡುವ ವಿಧಾನ, ಸೊಳ್ಳೆ ಕಡಿತದಿಂದ ಹರಡುವ ರೋಗಗಳು, ಅವುಗಳ ಲಕ್ಷಣ, ಸೊಳ್ಳೆಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ತಿಳಿಸಿದರು.

Advertisement

ರಕ್ಷಣಾ ಕಾರ್ಯ: ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಮನೆಗಳಲ್ಲಿ ಮಾರುಕಟ್ಟೆಗಳಲ್ಲಿ ಸಿಗುವ ಸೊಳ್ಳೆಯ ಬತ್ತಿ, ಬ್ಯಾಟ್‌, ಲಿಕ್ವಡ್‌, ಸೊಳ್ಳೆ ಪರದೇ ಬಳಸುವುದು. ಮನೆಗಳಲ್ಲಿ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಗ್ಯಾಲರಿ ಅಳವಡಿಸುವುದು. ಮೈತುಂಬಾ ಬಟ್ಟೆ ಧರಿಸುವುದು, ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕುವುದು. ಘನತ್ಯಾಜ್ಯ ವಸ್ತುಗಳ ಸರಿಯಾದ ವಿಲೇವಾರಿ ಮಾಡಬೇಕು. ಡೆಂಘೀ ಲಕ್ಷಣಗಳು: ತೀವ್ರ ಜ್ವರ, ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸ ಖಂಡ, ಕೀಲುಗಳಲ್ಲಿ ವಿಪರಿತ ನೋವು, ರಕ್ತಸ್ರಾವ ಕಂಡು ಬಂದರೆ ಆರೋಗ್ಯ ಇಲಾಖೆ ಸಿಬ್ಬಂದಿ ಅಥವಾ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಡೆಂಘೀ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್‌.ಆರ್‌. ನಿಡಗುಂದಿ, ಶಾಲೆಯ ಶಿಕ್ಷಕರಾದ ಎಸ್‌.ಐ. ಅಂಕಲಿ, ಎಸ್‌. ಎಸ್‌. ತಳವಾರ, ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಎಫ್‌. ಕುಂಬಾರ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಾಗರಾಜ ವಿಠ್ಠಪ್ಪನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next