Advertisement

ದ.ಕ.: 3 ಸಾವಿಗೆ ಡೆಂಗ್ಯೂ ಕಾರಣ ದೃಢ

01:50 AM Jul 23, 2019 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ 15 ದಿನಗಳಲ್ಲಿ ನಾಲ್ವರು ಬಲಿಯಾಗಿದ್ದು, ಮೂವರ ಸಾವಿಗೆ ಡೆಂಗ್ಯೂ ಕಾರಣ ಎಂಬುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡಬದಲ್ಲಿ 3 ವಾರಗಳ ಹಿಂದೆ ಮೃತಪಟ್ಟ ವೀಣಾ ನಾಯಕ್‌, ಜಪ್ಪು ಮಾರುಕಟ್ಟೆ ಬಳಿಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಮತ್ತು ರವಿ ವಾರ ತಡರಾತ್ರಿ ಮೃತಪಟ್ಟ ಪತ್ರಕರ್ತ ನಾಗೇಶ್‌ ಸಾವಿಗೆ ಡೆಂಗ್ಯೂ ಕಾರಣ ಎಂಬುದು ಗೊತ್ತಾಗಿದೆ. ಬಾಲಕ ಕೃಷ್‌ನ ಸಾವಿಗೆ ಕಾರಣ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ ಎಂದರು.

ಇಂದು 75,000 ರೂ.ದಂಡ ಸಂಗ್ರಹ
ನಿರ್ಮಾಣ ಹಂತದ ಕಟ್ಟಡಗಳು ಸೊಳ್ಳೆ ಉತ್ಪತ್ತಿ ತಾಣವಾಗಿದ್ದರೆ ಗುತ್ತಿಗೆದಾರರು, ಮಾಲಕರಿಗೆ ದಂಡ ವಿಧಿಸುವ ಪ್ರಕ್ರಿಯೆ ರವಿವಾರದಿಂದ ಆರಂಭವಾಗಿದ್ದು, ಸೋಮವಾರ 75,000 ರೂ. ದಂಡ ವಸೂಲು ಮಾಡಲಾಗಿದೆ. ಒಟ್ಟು 15 ಕಡೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ರವಿವಾರವೂ 8 ಕಟ್ಟಡಗಳಿಗೆ ದಂಡ ವಿಧಿಸಿ, 85,000 ರೂ. ವಸೂಲು ಮಾಡ ಲಾಗಿತ್ತು. ಸೋಮವಾರ ಸುಮಾರು 6 ಕಟ್ಟಡಗಳಿಗೆ ದಂಡ ವಿಧಿಸಲಾಗಿದೆ ಎಂದು ಮನಪಾ ಆಯುಕ್ತರು ಮಹಮ್ಮದ್‌ ನಝೀರ್‌ ತಿಳಿಸಿದ್ದಾರೆ.

ಜ್ವರ ಬಾಧಿತರೆಲ್ಲ ತಪಾಸಣೆ ಮಾಡಬೇಕಿಲ್ಲ
ಮಲೇರಿಯಾ, ಡೆಂಗ್ಯೂ ಚಿಕಿತ್ಸಾ ತಜ್ಞ ಡಾ| ಶ್ರೀನಿವಾಸ ಕಕ್ಕಿಲಾಯ ಮಾತನಾಡಿ, ಜ್ವರ ಬಾಧಿತರೆಲ್ಲರೂ ಡೆಂಗ್ಯೂ ತಪಾಸಣೆ ಮಾಡುವ ಅಗತ್ಯವಿಲ್ಲ. ಜ್ವರ ಬಂದ ಬಳಿಕ ಅದರಲ್ಲೂ ವಿಶೇಷವಾಗಿ ತಲೆ ನೋವು, ಮೈಮೇಲೆ ರಕ್ತದ ತಡಿಕೆ, ಕೀಲು ನೋವು ಮೊದಲಾದ ತೀವ್ರ ತೆರನಾದ ಸಮಸ್ಯೆಗಳು ಇಲ್ಲದಿದ್ದರೆ ಎನ್‌ಎಸ್‌1 ಪರೀಕ್ಷೆ ಮಾಡಬೇಕಾಗಿಲ್ಲ ಎಂದು ಮಾಹಿತಿ ನೀಡಿದರು.

Advertisement

ಡೆಂಗ್ಯೂ ಬಂದ 3-4 ದಿನ ಜ್ವರ ನಿಲ್ಲದಾಗ ಪ್ಲೇಟ್‌ಲೆಟ್‌ ಪರೀಕ್ಷೆ ಮಾಡಬೇಕಾಗುತ್ತದೆ. ಮೈಮೇಲೆ ನವಿರಾದ ಕೆಂಪು ಬಣ್ಣದ ತಡಿಕೆ ಸಾಮಾನ್ಯ. ಇದು ಡೆಂಗ್ಯೂನ ಪ್ರಮುಖ ಲಕ್ಷಣ ಎಂದವರು ತಿಳಿಸಿದರು. ಮನಪಾ ಹಿರಿಯ ಅಧಿಕಾರಿ ಗಾಯತ್ರಿ ನಾಯಕ್‌ ಉಪಸ್ಥಿತರಿದ್ದರು.

ಮೆಡಿಕಲ್‌ ಕಾಲೇಜುಗಳ ಸಹಕಾರ
ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಜಿಲ್ಲೆಯ ವೈದ್ಯಕೀಯ ಕಾಲೇಜುಗಳು ಮುಂದೆ ಬಂದಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಅಗತ್ಯ ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ.

ರೋಗದ ತೀವ್ರತೆ ಆಧಾರದಲ್ಲಿ ಬಾಧಿತ ಪ್ರದೇಶಗಳನ್ನು ಗ್ರಿಡ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಮೆಡಿಕಲ್‌ ಕಾಲೇಜಿಗೂ ಒಂದೊಂದು ಗ್ರಿಡ್‌ ಹಂಚಲಾಗುವುದು. ಕಾಲೇಜಿನ ತಂಡಗಳು ಆಯಾ ಗ್ರಿಡ್‌ಗೆ ಭೇಟಿ ನೀಡಿ ಮನೆ, ಕಟ್ಟಡ, ವ್ಯಾಪಾರ ಸಂಸ್ಥೆ, ಸಾರ್ವಜನಿಕ ಸ್ಥಳಗಳನ್ನು ಪರಿಶೀಲಿಸಬೇಕು. ಸೊಳ್ಳೆ ಉತ್ಪನ್ನ ತಾಣಗಳ ನಾಶಪಡಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪತ್ರಕರ್ತ ನಾಗೇಶ್‌ ಪಡು ಸಾವು

ಖಾಸಗಿ ಸುದ್ದಿ ವಾಹಿನಿಯೊಂದರ ಕೆಮರಾಮನ್‌, ನೀರುಮಾರ್ಗ ಸಮೀಪದ ನಾಗೇಶ್‌ ಪಡು (35) ಅವರು ಡೆಂಗ್ಯೂ ಜ್ವರದಿಂದಾಗಿ ರವಿವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ತೀವ್ರ ಜ್ವರದ ಹಿನ್ನೆಲೆಯಲ್ಲಿ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡೆಂಗ್ಯೂ ಜ್ವರಕ್ಕಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ತಡರಾತ್ರಿ ಅವರು ಕೊನೆಯುಸಿರೆಳೆದರು.

ಮೂಲತಃ ನೀರುಮಾರ್ಗದ ಸಮೀಪದ ಪಡು ನಿವಾಸಿಯಾದ ನಾಗೇಶ್‌ ತಾಯಿ, ಪತ್ನಿ, ಐದು ವರ್ಷದ ಪುತ್ರಿಯನ್ನು ಅಗಲಿದ್ದಾರೆ.

ಉತ್ತಮ ಆಟಗಾರನೂ ಆಗಿದ್ದ ನಾಗೇಶ್‌ ಪಡು ಇತ್ತೀಚೆಗೆ ಡೆಂಗ್ಯೂ ಸಮಸ್ಯೆಯಿಂದ ನಲುಗುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ವೀಡಿಯೋ ಚಿತ್ರೀಕರಣ ನಡೆಸಿದ್ದರು. ಇದೇ ಸಂದರ್ಭ ಅವರಿಗೆ ಡೆಂಗ್ಯೂ ಸೊಳ್ಳೆ ಕಡಿದಿರಬಹುದು ಎನ್ನಲಾಗುತ್ತಿದೆ.

30 ಮಂದಿ ದಾಖಲು
ದ.ಕ. ಜಿಲ್ಲೆಯಲ್ಲಿ ಸೋಮವಾರ 30 ಡೆಂಗ್ಯೂ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ 22 ಮಂದಿ ಜಿಲ್ಲೆ ಯವರಾದರೆ, 8 ಮಂದಿ ಹೊರಗಿನವರು. ಜು.18ರಿಂದ ಇಲ್ಲಿಯವರೆಗೆ ಒಟ್ಟು 136 ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ. ಈ ಪೈಕಿ 17 ಮಂದಿ ಇತರ ಜಿಲ್ಲೆಯವರು.

Advertisement

Udayavani is now on Telegram. Click here to join our channel and stay updated with the latest news.

Next