Advertisement

ಡೆಂಗ್ಯೂ: ಹೊಸದಾಗಿ 26 ಪ್ರಕರಣಗಳು ಪತ್ತೆ!

01:53 AM Jul 22, 2019 | Sriram |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಮತ್ತೆ ಶಂಕಿತ 26 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಮೂರು ಪ್ರಕರಣ ದೃಢಪಟ್ಟಿವೆ. ಉಳಿದಂತೆ 23 ಪ್ರಕರಣಗಳ ವರದಿಗಳು ಇನ್ನಷ್ಟೇ ಬರಬೇಕಾಗಿದೆ. ಇದರಲ್ಲಿ ಮಂಗಳೂರಿನಲ್ಲಿ ಗರಿಷ್ಠ 21 ಪ್ರಕರಣಗಳು ಪತ್ತೆಯಾಗಿವೆ.

Advertisement

ನಗರದ ತ್ಯಾಜ್ಯ ಸಂಗ್ರಹ ಗುತ್ತಿಗೆ ಸಂಸ್ಥೆಯ ಸಿಬಂದಿ ಯೋರ್ವರು ಖಾಸಗಿ ಆಸ್ಪತ್ರೆಯಲ್ಲಿ ಜ್ವರದಿಂದ ಮೃತಪಟ್ಟಿ ದ್ದಾರೆ. ಆದರೆ ಅವರು ಡೆಂಗ್ಯೂವಿನಿಂದ ಮೃತಪಟ್ಟಿಲ್ಲ ಎಂಬುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಡೆಂಗ್ಯೂ ರೋಗ ನಿಯಂತ್ರಣ ಅಂಗವಾಗಿ ರವಿವಾರ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಡೆಂಗ್ಯೂ ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ. ಪ್ರದೇಶಗಳನ್ನು ಗ್ರಿಡ್‌ 1 ಎಂದು ಪರಿಗಣಿಸಿ ವ್ಯವಸ್ಥಿತವಾಗಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು.250ಕ್ಕೂ ಅಧಿಕ ಸಿಬಂದಿ, ಸ್ವಯಂಸೇವಕರು, ಅಧಿಕಾರಿಗಳು ಭಾಗವಹಿಸಿದರು. ಈ ಪ್ರದೇಶಗಳ ಮನೆ, ಉದ್ದಿಮೆ, ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆನಡೆಸಲಾಯಿತು. ರೋಗ ನಿಯಂತ್ರಣ, ಸೊಳ್ಳೆ ಉತ್ಪತ್ತಿ ತಾಣಗಳಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಲಾಯಿತು.

ನಿರ್ದಾಕ್ಷಿಣ್ಯ ದಂಡ ವಿಧಿಸಲು ಡಿ.ಸಿ. ಸೂಚನೆ
ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ ವಸೂಲು ಮಾಡುವಂತೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಸೂಚನೆ ನೀಡಿದ್ದಾರೆ.

ಅವರು ರವಿವಾರ ಸಂಜೆ ತಮ್ಮ ಕಚೇರಿಯಲ್ಲಿ ಡೆಂಗ್ಯೂ ರೋಗ ನಿಯಂತ್ರಣ ಕಾರ್ಯಗಳ ಪರಿಶೀಲನೆ ನಡೆಸಿ, ಮಂಗಳೂರು ನಗರದಲ್ಲಿನ ಎಲ್ಲ ಮನೆ, ಅಂಗಡಿ, ಉದ್ದಿಮೆ ಸಂಸ್ಥೆ, ಮಾರುಕಟ್ಟೆ, ಅಪಾರ್ಟ್‌ಮೆಂಟ್, ಫ್ಲ್ಯಾಟ್, ಸರಕಾರಿ ಕಟ್ಟಡ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ತಪಾಸಣೆ ನಡೆಸಬೇಕು. ಯಾವುದೇ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿರುವುದು ಕಂಡು ಬಂದರೆ ಅಂತಹ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ದೊಡ್ಡ ಮೊತ್ತದ ದಂಡ ವಿಧಿಸಿ ವಸೂಲಿ ಮಾಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement

85,000 ರೂ. ದಂಡ
ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ- ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ರವಿವಾರ ಸ್ವಚ್ಛತೆ ಕಾಪಾಡಿ ಕೊಳ್ಳದ ವಿವಿಧ ಖಾಸಗಿ ಕಟ್ಟಡ ಸೇರಿದಂತೆ ಇತರ ಕಟ್ಟಡಗಳ ಮಾಲಕರಿಗೆ ಸ್ಥಳದಲ್ಲೇ 85, 000 ರೂ. ದಂಡ ವಿಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next