ಹಾಸನ: ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ರೈಲುಗಳ ಸಂಚಾರ ಪುನಾರಂಭವಾಗುತ್ತಿವೆ. ಆ ನಿಟ್ಟಿನಲ್ಲಿ ಬೆಂಗಳೂರು – ಹಾಸನ ನಡುವೆ ಏ.8ರಿಂದ ಡೆಮು ರೈಲು ಸಂಚಾರ ಆರಂಭವಾಗಲಿದೆ.
ಬೆಂಗಳೂರು ಸಿಟಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ( ಮೆಜೆಸ್ಟಿಕ್)ದಿಂದಲೇ ಡೆಮು ರೈಲು ಸಂಚಾರ ಆರಂಭಿಸಲಿದೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಿಸಿ, ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಕೊರೊನಾ ಮೊದಲ ಅಲೆ ಪೂರ್ವದಲ್ಲಿ ಡೆಮು ರೈಲು ಯಶವಂತಪುರ – ಹಾಸನ ನಡುವೆ ಸಂಚರಿಸುತ್ತಿತ್ತು. ಕೊರೊನಾ ನಿಯಂತ್ರಣದ ಹಿನ್ನೆಲೆ ರೈಲುಗಳ ಸಂಚಾರ ಸ್ಥಗಿತವಾಗಿದ್ದ ಸಂದರ್ಭದಲ್ಲಿ ಈ ಡೆಮು ರೈಲು ಸಂಚಾರವೂ ಸ್ಥಗಿತವಾಗಿತ್ತು. ಆದರೆ ಈಗ ಯಶವಂತಪುರ ನಿಲ್ದಾಣದಿಂದ ಹೊರಡುವ ಬದಲು ಡೆಮು ರೈಲು ಮೆಜೆಸ್ಟಿಕ್ ರೈಲು ನಿಲ್ದಾಣದಿಂದಲೇ ಸಂಚಾರ ಆರಂಭಿಸಲಿದೆ. ಇದರಿಂದ, ಪ್ರಯಾಣಿಕರಿಗೆ ಇನ್ನೂ ಹೆಚ್ಚು ಅನುಕೂಲವಾಗಲಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳ ಆಗುವ ನಿರೀಕ್ಷೆಯಿದೆ.
ವೇಳಾಪಟ್ಟಿ ವಿವರ: ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನ ಸಂಚರಿಸುವ ಈ ರೈಲು ಪ್ರತಿದಿನ ಬೆಳಿಗ್ಗೆ 9.45 ಕ್ಕೆ ಬೆಂಗಳೂರು ಸಿಟಿ ( ಮೆಜೆಸ್ಟಿಕ್) ರೈಲು ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ ರೈಲು ನಿಲ್ದಾಣಕ್ಕೆ 9.57 ಗಂಟೆಗೆ ಬರಲಿದೆ. ಅಲ್ಲಿ 3 ನಿಮಿಷ ನಿಲುಗಡೆ ಆಗಲಿದೆ. ನಂತರ, ಅಲ್ಲಿಂದ 9.59ಕ್ಕೆ ಹೊರಟು ಕುಣಿಗಲ್ ನಿಲ್ದಾಣಕ್ಕೆ 11.05ಕ್ಕೆ ಶ್ರವಣಬೆಳಗೊಳ ನಿಲ್ದಾಣಕ್ಕೆ 12.30ಕ್ಕೆ ಚನ್ನರಾಯ ಪಟ್ಟಣ ರೈಲು ನಿಲ್ದಾಣಕ್ಕೆ 12.45ಕ್ಕೆ ತಲುಪಲಿದೆ. ಅಲ್ಲಿಂದ ಹೊರಟು ಹಾಸನ ರೈಲು ನಿಲ್ದಾಣಕ್ಕೆ 1.45ಕ್ಕೆ ಬಂದು ಸೇರಲಿದೆ. ಹಾಸನ ರೈಲು ನಿಲ್ದಾಣದಲ್ಲಿ ಸುಮಾರು ಅರ್ಧಗಂಟೆ ನಿಲುಗಡೆ ನಂತರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿಗೆ ಹೊರಡುವ ಡೆಮು ರೈಲು ಚನ್ನರಾಯಪಟ್ಟಣಕ್ಕೆ 2.57ಕ್ಕೆ ತಲುಪಲಿದೆ. ಅಲ್ಲಿಂದ ಹೊರಟು ಶ್ರವಣಬೆಳಗೊಳ ನಿಲ್ದಾಣಕ್ಕೆ 3.10ಕ್ಕೆ ಕುಣಿಗಲ್ ನಿಲ್ದಾಣಕ್ಕೆ 4.12ಕ್ಕೆ, ಯಶವಂತಪುರ ನಿಲ್ದಾಣಕ್ಕೆ 5.30ಕ್ಕೆ ಬೆಂಗಳೂರು ಸಿಟಿ ನಿಲ್ದಾಣಕ್ಕೆ ಸಂಜೆ 6 ಗಂಟೆಗೆ ರೈಲು ತಲಪಲಿದೆ. ಈ ಡೆಮು ರೈಲು ಮೆಜೆಸ್ಟಿಕ್ ರೈಲು ನಿಲ್ದಾಣ ತಲಪಿದ ನಂತರ ದೇವನಹಳ್ಳಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ತೆರಳಿಲಿದೆ. ಪುನಃ ಅದೇ ಮಾರ್ಗವಾಗಿ ಮರುದಿನ ಹಾಸನಕ್ಕೆ ಬರುವು ದರಿಂದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವವರಿದ್ದರೆ ದೇವನಹಳ್ಳಿ ರೈಲು ನಿಲ್ದಾಣದಲ್ಲಿ ಇಳಿದು ಹೋಗಬಹುದಾಗಿದೆ. ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ: 8 ಬೋಗಿಗಳಿರುವ ಡೆಮು ರೈಲಿಗೆ ಹಾಸನ-ಬೆಂಗಳೂರು ಸಿಟಿ ರೈಲು ನಿಲ್ದಾಣಗಳ ನಡುವೆ ಇರುವ ಎಲ್ಲ 15 ನಿಲ್ದಾಣದಲ್ಲೂ ನಿಲುಗಡೆಯಿದ್ದು, ಪ್ರಯಾಣದ ಅವಧಿ 3 ಗಂಟೆ 45 ನಿಮಿಷ ತೆಗೆದುಕೊಳ್ಳಲಿದೆ. ಪ್ರಯಾಣದ ದರ 70 ರೂ. ನಿಗದಿಯಾಗುವ ಸಾಧ್ಯತೆಯಿದೆ.
ಪಯಣದ ಅವಧಿ: ಬೆಂಗಳೂರಿನ ಪೀಣ್ಯ ಮೇಲ್ಸೆತುವೆ ಶಿಥಿಲವಾಗಿರುವುದರಿಂದ ಹಾಸನ – ಬೆಂಗಳೂರು ನಡುವೆ ಸಂಚರಿಸುವ ನಾನ್‌ಸ್ಟಾಪ್ ಬಸ್‌ಗಳೂ ಕೂಡ ಮೇಲ್ಸೆತುವೆ ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಪ್ರಯಾಣದ ಅವಧಿ 3 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತಿವೆ. ಬಸ್ ಪ್ರಯಾಣದರ 240 ರೂ.ಇದೆ. ಆದರೆ, ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ತಲುಪುವ ಡೆಮು ರೈಲು ಪ್ರಯಾಣದ ದರ ಕೇವಲ 70 ರೂ.ಹಾಗಾಗಿ ಬಹಳಷ್ಟು ಪ್ರಯಾಣಿ ಕರು ಸಸ್ತವಾಗಿರುವ ರೈಲ್ವೆ ಪ್ರಯಾಣವನ್ನೇ ಅವಲಂಬಿಸಬ ಹುದು ಎಂದು ನಿರೀಕ್ಷಿಸಲಾಗಿದೆ.
ಮಾರ್ಗದ ವಿದ್ಯುದ್ಧೀರಕಣ ಕಾಮಗಾರಿ ಶೀಘ್ರ : ಹಾಸನ – ಚಿಕ್ಕಬಾಣಾವರ ( ಯಶವಂತಪುರ ಸಮೀಪದ ನಿಲ್ದಾಣ) ನಡುವೆ ರೈಲು ಮಾರ್ಗದ ವಿದ್ಯುದ್ಧೀಕರಣ ಕಾಮಗಾರಿಯೂ ಆರಂಭವಾಗುತ್ತಿದೆ. ದೇಶದ ಎಲ್ಲ ರೈಲು ಮಾರ್ಗಗಳನ್ನೂ ವಿದ್ಯುದ್ಧೀಕರಣಗೊಳಿಸುವ ರೈಲ್ವೆ ಇಲಾಖೆ ಯೋಜನೆಯಂತೆ ಹಾಸನ – ಬೆಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ಧೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಈ ತಿಂಗಳಿನಿಂದಲೇ ಆರಂಭವಾಗಲಿದೆ. ಒಂದು ವರ್ಷದಲ್ಲಿ ವಿದ್ಯುದ್ಧೀಕರಣ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ. ರೈಲು ಮಾರ್ಗ ವಿದ್ಯುದ್ಧೀಕರಣ ಪೂರ್ಣಗೊಂಡ ನಂತರ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇನ್ನೂ ಹೆಚ್ಚು ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.