Advertisement

ಕಾಳಿಂಗ ಸರ್ಪದ ಪ್ರಾತ್ಯಕ್ಷಿಕೆ!

05:51 PM Apr 09, 2018 | |

ಸಾಗರ: ನಗರದ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ಸೆಂಟರ್‌ ಸ್ಟೇಜ್‌ ಸಂಸ್ಥೆ ವತಿಯಿಂದ ಏರ್ಪಡಿಸಿರುವ ಮಕ್ಕಳ
ಬೇಸಿಗೆ ಶಿಬಿರದಲ್ಲಿ ಚಿಣ್ಣರಿಗೆ ಉರಗ ತಜ್ಞ ಮನ್ಮಥಕುಮಾರ್‌ ಜೀವಂತ ಕಾಳಿಂಗ ಸರ್ಪವನ್ನೇ ಹಿಡಿದು ತಂದು ಅದರ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ವಿಶೇಷ ಘಟನೆ ಭಾನುವಾರ ನಡೆಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಳಿಂಗ ಸರ್ಪ ಅತ್ಯಂತ ನಾಚಿಕೆ ಸ್ವಭಾವದ ಉರಗ. ಇದು ಕಚ್ಚಿದ ಉದಾಹರಣೆಗಳು ತೀರಾ ಕಡಿಮೆ. ಯಾರಿಗಾದರೂ ಕಚ್ಚಿದರೆ ಕಚ್ಚಿದ ಹದಿನೈದು ನಿಮಿಷದಲ್ಲಿ ಸಾಯುತ್ತಾರೆ. ನಾಗರ ಹಾವು ಕಚ್ಚಿದರೆ ಎರಡು ತಾಸು ಬದುಕಬಹುದು ಎಂದು ತಿಳಿಸಿದರು.
 
ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಕಾಳಿಂಗ ಸರ್ಪ ಕಂಡುಬರುತ್ತದೆ. ಅದು ಬಿಟ್ಟರೆ ಭಾರತದಲ್ಲಿ ಅಸ್ಸಾಂನಲ್ಲಿ ಮಾತ್ರ ಈ ಸಂತತಿ ಕಾಣುತ್ತದೆ. ಕಾಳಿಂಗ ಸರ್ಪ ಸುಮಾರು 12ರಿಂದ 16 ಅಡಿ ಇರುತ್ತದೆ. ಈಗ ಹೆಣ್ಣು ಕಾಳಿಂಗ ಮೊಟ್ಟೆ ಇಡುವ ಸಮಯ. ಕನಿಷ್ಟ ಇದು 62 ಮೊಟ್ಟೆಗಳನ್ನಿಡುತ್ತದೆ.
 
ಮೊಟ್ಟೆಯಿಂದ ಮರಿ ಹೊರಬರುತ್ತಿರುವಂತೆಯೇ ಅದರಲ್ಲಿ ವಿಷ ಹುಟ್ಟಿರುತ್ತದೆ ಎಂದು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಕಾಡಿನ ಅವ್ಯಾಹತ ನಾಶ, ಶುಂಠಿ ಇತರ ಬೆಳೆಗಳಿಗೆ ಮಂಗ ಹಾಗೂ ಹಂದಿಯ ಉಪಟಳಕ್ಕಾಗಿ ಬಲೆ ಬೀಸಲಾಗುತ್ತದೆ. ಅದರಲ್ಲಿ ಸಿಕ್ಕಿ ಹಾಕಿಕೊಂಡು ಸಾಕಷ್ಟು ಕಾಳಿಂಗ ಸರ್ಪಗಳು ಸಾಯುತ್ತಿವೆ.

ನೋಡಲು ಭಯ ಹುಟ್ಟಿಸುವ ಕಾಳಿಂಗಸರ್ಪ ಮಳೆ ಮತ್ತು ಚಳಿಗಾಲದಲ್ಲಿ ಕಪ್ಪುಬಣ್ಣವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ಅದು ಚಾಕಲೇಟ್‌ ಬಣ್ಣಕ್ಕೆ ತಿರುಗುತ್ತದೆ ಎಂದರು.

ಶಿಬಿರದ ನಿರ್ದೇಶಕಿ ಬೆಂಗಳೂರಿನ ಮಂಜುಳಾ ನಾರಾಯಣ್‌ ಮಾತನಾಡಿ, ಆಧುನಿಕತೆಯ ಸೆಳೆತಕ್ಕೆ ಸಿಕ್ಕು ಮಕ್ಕಳು ನವ
ನಾಗರಿಕತೆಯ ಬೆನ್ನು ಹತ್ತಿದ್ದಾರೆ. ಅವರ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ರಂಗಭೂಮಿ ಮಕ್ಕಳ ಅಭಿವ್ಯಕ್ತಿಗೆ ಉತ್ತಮ ಮಾಧ್ಯಮ.

ಇದರಲ್ಲಿ ನಟನೆ, ಗಾಯನ, ಸಂಗೀತ ಎಲ್ಲವೂ ಒಳಗೊಂಡಿರುತ್ತದೆ. ಶಿಬಿರದಲ್ಲಿ ಕೋಟಗಾನಹಳ್ಳಿ ರಾಮಯ್ಯನವರ “ನಾಯಿತಿಪ್ಪ’ ನಾಟಕವನ್ನು ಕಲಿಸಲಾಗುತ್ತಿದೆ. ಏ. 14ರಂದು ಸಂಗೊಳ್ಳಿ ರಾಯಣ್ಣ ಮೈದಾನದ ಮರದ ನೆರಳಿನಲ್ಲಿ ಅಭಿನಯಿಸಲಾಗುವುದು
ಎಂದರು. 

Advertisement

ಸೆಂಟರ್‌ ಸ್ಟೇಜ್‌ ಸಂಸ್ಥೆಯ ಸಂತೋಷ್‌ ಡಿ.ಆರ್‌., ಗಾಯಕಿ ಸಹನಾ ಜಿ. ಭಟ್‌, ಸುಬ್ರಹ್ಮಣ್ಯ, ಗಾಂ ಧಿನಗರ ಯುವಜನ
ಸಂಘದ ಅಧ್ಯಕ್ಷ ವೆಂಕಟೇಶ್‌, ಸಮೀಕ್ಷಾ, ಸಮೀಕ್ಷಾ, ಪ್ರತೀಕ್ಷಾ, ಲಾವಣ್ಯ, ಪರಿಣ್‌, ರಾಘವ್‌ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next