Advertisement

ಅರಮನೆ ಮೈದಾನದಲ್ಲಿ ಈಡಿಗರ ಶಕ್ತಿ ಪ್ರದರ್ಶನ- ಕಾಂಗ್ರೆಸ್‌ಗೆ ಶಕ್ತಿ ತುಂಬಲು ಈಡಿಗರ ಶ್ರಮ

11:23 PM Dec 10, 2023 | Team Udayavani |

ಬೆಂಗಳೂರು: ರಾಜಕೀಯ ಲೆಕ್ಕಾಚಾರ ಹಾಗೂ ವೈಯಕ್ತಿಕ ಪ್ರತಿಷ್ಠೆಗಳ ಕಾರಣಕ್ಕೆ ಸಾಕಷ್ಟು ಕುತೂಹಲಗಳನ್ನು ಮೂಡಿಸಿದ್ದ ಈಡಿಗರ ಸಮಾವೇಶ ರಾಜಧಾನಿಯಲ್ಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

Advertisement

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಈಡಿಗ, ಬಿಲ್ಲವ, ನಾಮಧಾರಿ ಸೇರಿ ಎಲ್ಲ 26 ಪಂಗಡಗಳ ಬೃಹತ್‌ ಜಾಗೃತ ಹಾಗೂ ಸ್ವಾಭಿಮಾನಿ ಸಮಾವೇಶ ಸಮುದಾಯದ ಪ್ರಮುಖ ಬೇಡಿಕೆಗಳ ಈಡೇರಿಕೆ ಮತ್ತು ಪರೋಕ್ಷವಾಗಿ ರಾಜಕೀಯ ಸಂದೇಶ ರವಾನೆಗೆ ವೇದಿಕೆಯಾಗಿ ಬದಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಮಧು ಬಂಗಾರಪ್ಪ ಸಹಿತ ಈಡಿಗ ಸಮುದಾಯದ ಬಹುತೇಕ ಶಾಸಕರು, ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಸಮುದಾಯದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಗೈರಾಗಿದ್ದರು.

ವೇದಿಕೆಯಲ್ಲಿದ್ದ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ ಸಹಿತ ಈಡಿಗ ಸಮುದಾಯದ ಮುಖಂಡರೆಲ್ಲರೂ ಈಡಿಗರ ಅಭಿವೃದ್ಧಿಗಾಗಿ ಸರಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು. ಮುಖ್ಯವಾಗಿ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮುಂತಾದ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವು ದರಿಂದ ಯಾವುದೇ ಭರವಸೆ ನೀಡಲಾಗುವುದಿಲ್ಲ. ಅಧಿವೇಶನ ಮುಗಿದ ಕೂಡಲೇ ಬೇಡಿಕೆಗಳ ಬಗ್ಗೆ ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

Advertisement

ಇದಕ್ಕೂ ಮೊದಲು ಮಾತನಾಡಿದ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌, ಈಡಿಗ ಸಮುದಾಯದ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ನೀಡಬೇಕೆಂಬ ಮನವಿ ಬಂದಿದ್ದು, ಇದನ್ನು ಈಡೇರಿಸುವ ಭರವಸೆ ನೀಡುತ್ತೇನೆ ಎಂದರು.

ಸಂಘಟನೆ ಬಹಳ ಮುಖ್ಯ
ಸಮಾವೇಶವನ್ನು ಉದ್ಘಾಟಿಸಿದ ಬಳಿಕ ಮಾತನಾ ಡಿದ ಸಿಎಂ, ಹಿಂದುಳಿದ ಜಾತಿಗಳ ಸಂಘಟನೆ, ಶಿಕ್ಷಣ, ಹೋರಾಟದ ಬಗ್ಗೆ ಹಾಗೂ ಈಡಿಗ ಸಮಾಜಕ್ಕೆ ಏನು ಅಗತ್ಯ ಎಂದು ಪ್ರಸ್ತಾವಿಸಿ¨ªಾರೆ. ಅನೇಕ ಬೇಡಿಕೆ ಗಳನ್ನು ಸಲ್ಲಿಸಿದ್ಧಾರೆ. ದೊಡ್ಡ ಇತಿಹಾಸವಿರುವ ಈಡಿಗ ಸಮುದಾಯದ ಬಗ್ಗೆ ಹೆಮ್ಮೆ ಇದೆ ಎಂದರು.

ನಿಮ್ಮ ವಿಚಾರದಲ್ಲಿ ನಾವಿದ್ದೇವೆ
ಡಿ.ಕೆ.ಶಿವಕುಮಾರ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಒಟ್ಟಾಗಿ ಶ್ರಮಿಸಿದೆ. ನಿಮ್ಮ ಬೆಂಬಲಕ್ಕೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು. ನಾವು ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ಮತ್ತು ಇಂದು ಈಡಿಗ ಸಮುದಾಯದವರೆಲ್ಲ ಒಗ್ಗಟ್ಟಾಗಿ, ಸಿದ್ದರಾಮಯ್ಯನವರ ಸರಕಾರದ ಜತೆಗಿದ್ದೇವೆ ಎಂಬ ಸಂದೇಶ ನೀಡಿದ್ದೀರಿ. ಇದಕ್ಕೆ ನಾನು ಆಭಾರಿ. ನಿಮ್ಮ ವಿಚಾರದಲ್ಲಿ ನಾವಿದ್ದೇವೆ ಎಂದರು.

ಸಚಿವ ಮಧು ಬಂಗಾರಪ್ಪ, ಸೋಲೂರಿನ ವಿಖ್ಯಾತಾ ನಂದ ಸ್ವಾಮೀಜಿ, ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ನಿಟ್ಟೂರಿನ ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಅರುಣಾನಂದ ಸ್ವಾಮೀಜಿ, ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ, ನಟ ಮುರಳಿ, ನಿರ್ಮಾಪಕ ಚಿನ್ನೇಗೌಡ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಲೋಕಸಭಾ ಸದಸ್ಯ ವಿನಯ್‌ ಕುಮಾರ್‌ ಸೊರಕೆ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್‌, ಮಾಜಿ ಶಾಸಕ ವಸಂತ ಬಂಗೇರ, ಹರತಾಳು ಹಾಲಪ್ಪ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next