Advertisement

ನೋಟು ಅಮಾನ್ಯದಿಂದ ತೆರಿಗೆ ವ್ಯಾಪ್ತಿ ವಿಸ್ತಾರ

05:36 AM Nov 09, 2018 | Team Udayavani |

ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ (2016 ನ.8) ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 500 ರೂ., 1 ಸಾವಿರ ರೂ. ನೋಟುಗಳ ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ಇದರಿಂದಾಗಿ ತೆರಿಗೆ ವ್ಯಾಪ್ತಿ ವಿಸ್ತಾರವಾಗಿದೆ ಮತ್ತು ಸಂಗ್ರಹ ಹೆಚ್ಚಿದೆ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ ಸಹಿತ ಹಲವು ವಿಪಕ್ಷಗಳು ನೋಟು ಅಮಾನ್ಯ ಎಂಬುದು ವಿಫ‌ಲ ಕ್ರಮ ಎಂದು ಟೀಕಿಸಿವೆ.

Advertisement

ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ ನೋಟು ಅಮಾನ್ಯ ಕ್ರಮ 2 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಫೇಸ್‌ ಬುಕ್‌ನಲ್ಲಿ ಬರೆದುಕೊಂಡ ವಿತ್ತ ಸಚಿವ ಅರುಣ್‌ ಜೇಟ್ಲಿ, ಆರ್ಥಿಕತೆಯನ್ನು ಸುವ್ಯವಸ್ಥೆಗೊಳಿಸಲು ಇದು ಅಗತ್ಯ ಕ್ರಮವಾಗಿತ್ತು ಎಂದಿದ್ದಾರೆ. ಅದು ಜನರ ಕೈಯಲ್ಲಿದ್ದ ನಗದನ್ನು ವಶಪಡಿಸಲು ಕೈಗೊಂಡ ಕ್ರಮವಲ್ಲ; ಅರ್ಥ ವ್ಯವಸ್ಥೆ ಕ್ರಮ ಬದ್ಧಗೊಳಿಸುವುದು ಅದರ ಉದ್ದೇಶ ಎಂದಿದ್ದಾರೆ. ದೇಶದ ಹೊರಗಿರುವ ಕಪ್ಪು ಹಣವನ್ನು ಮೊದಲು ಸರಕಾರ ಟಾರ್ಗೆಟ್‌ ಮಾಡಿತ್ತು. ತೆರಿಗೆ ದಂಡದ ಮೂಲಕ ಈ ಹಣ ವಾಪಸ್‌ ಭಾರತಕ್ಕೆ ಬಂದಿದೆ. ಹಣವನ್ನು ಭಾರತಕ್ಕೆ ತರಲಾಗದವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿದೆ ಎಂದು ಅರುಣ್‌ ಜೇಟ್ಲಿ ಫೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ. ಭಾರತದ ಆರ್ಥಿಕತೆಯನ್ನು ನೋಟು ಅಮಾನ್ಯವು ಹೆಚ್ಚಿಸಿದೆ. ಕಾಂಗ್ರೆಸ್‌ ಯಾಕೆ ಈ ಹೆಸರಿನಲ್ಲಿ ದೇಶವನ್ನು ಹೀಗಳೆಯುತ್ತಿದೆ ಮತ್ತು ಜನರನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಇದೊಂದು ಹಣ ದುರ್ಬಳಕೆ ಸ್ಕೀಮ್‌ ಆಗಿತ್ತು ಎಂದಿದ್ದಾರೆ. ನೋಟು ಅಮಾನ್ಯದ ಯಾವ ಗುರಿಯೂ ಪೂರೈಸಿಲ್ಲ. ಜಿಎಸ್‌ಟಿ ಕಲೆಕ್ಷನ್‌ ಹಾಗೂ ನೇರ ತೆರಿಗೆ ಸಂಗ್ರಹವು ಅಂದಾಜಿಗಿಂತಲೂ ಕಡಿಮೆಯಾಗಿದೆ. ವಿತ್ತೀಯ ಕೊರತೆ ನೀಗಿಸಲೂ ಸಾಧ್ಯವಾಗಿಲ್ಲ ಎಂದಿದ್ದಾರೆ. 2016ರಲ್ಲಿ ನೋಟು ಅಮಾನ್ಯದಿಂದ ಆದ ಗಾಯಗಳು ಇನ್ನಷ್ಟು ತೀವ್ರವಾಗುತ್ತಿವೆ. ನೋಟು ಅಮಾನ್ಯದ ಪರಿಣಾಮ ಈಗಲೂ ಆರ್ಥಿಕತೆಯ ಮೇಲೆ ಕಾಣಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಕೂಡ ಆಕ್ಷೇಪಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನೋಟು ಅಮಾನ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆಯನ್ನೂ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next