Advertisement

ನೋಟು ರದ್ದತಿಯಿಂದ ಭ್ರಷ್ಟಾಚಾರಕ್ಕೆ  ಪೆಟ್ಟು

06:30 AM Sep 29, 2017 | Sharanya Alva |

ಇತ್ತೀಚೆಗೆ ರಿಸರ್ವ್‌ ಬ್ಯಾಂಕಿನ ವರದಿ ಬಂದ ಬಳಿಕ ನೋಟು ರದ್ದತಿ ಬಗೆಗಿನ ಚರ್ಚೆ ಮತ್ತೆ ಜೋರಾಗಿದೆ. ನೋಟು ಅಮಾನ್ಯತೆಯ ಕ್ರಮ ಸಂಪೂರ್ಣ ವಿಫ‌ಲವಾಗಿದೆ ಎಂದು ಬಹುತೇಕ ಆರ್ಥಿಕ ತಜ್ಞರು, ಅಂಕಣಕಾರರು ಮತ್ತು ಜನಸಾಮಾನ್ಯರು ಹೇಳುತ್ತಿದ್ದಾರೆ. ಮೋದಿಯವರ ಬಹಳಷ್ಟು ಅಭಿಮಾನಿಗಳೂ ಒಳಗಿಂದೊಳಗೇ ಇದು ವಿಫ‌ಲ ಯತ್ನ ಎಂದೇ ಹೇಳುತ್ತಾರೆ. ಆದರೆ ಈ ಇಡೀ ಸಂಕಥನದಲ್ಲಿ ಆರ್ಥಿಕ ತಜ್ಞರು ಮತ್ತು ಜನಸಾಮಾನ್ಯರು ಗಮನಿಸದ ಅಥವಾ ಗಮನಿಸಿದರೂ ಚರ್ಚಿಸದ ಆಯಾಮವೊಂದಿದೆ. ಆ ಕಡೆಗೆ ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶ.

Advertisement

ನೋಟು ರದ್ದತಿ ವಿಫ‌ಲ ಎನ್ನಲು ಕೆಲವು ಕಾರಣಗಳನ್ನು ನೀಡಲಾಗುತ್ತದೆ. ಲಕ್ಷಗಟ್ಟಲೆ ಉದ್ಯೋಗಗಳು ನಷ್ಟವಾಗಿವೆ, ಜಿಡಿಪಿಗೆ ಸಂಬಂಧಿಸಿ ಕುಸಿತ ಗಣನೀಯವಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ರದ್ದಾದ ನೋಟುಗಳಲ್ಲಿ ಸುಮಾರು ಶೇ.99ರಷ್ಟು ಪುನಃ ಬ್ಯಾಂಕಿಗೆ ಬಂದಿವೆ ಇತ್ಯಾದಿ. ನೋಟು ರದ್ದಾದ ಮೊದಲ ಎರಡು ತಿಂಗಳು ಗಳಲ್ಲಿ ಜನರೆಲ್ಲ ನೋಟುಗಳಿಲ್ಲದೆ ತುಂಬ ಪರದಾಡಿದರು, ವ್ಯವಹಾರಗಳು ನೋಟುಗಳಿಲ್ಲದುದರಿಂದ ಕುಸಿದವು ನಿಜ.

ಆದರೆ ಎರಡು ಮೂರು ತಿಂಗಳುಗಳ ಅನಂತರ ನೋಟುಗಳ ಸಮಸ್ಯೆ ಇರಲಿಲ್ಲ. ಅಲ್ಲದೆ ಶೇ.99ರಷ್ಟು ನೋಟುಗಳು ಬ್ಯಾಂಕಿಗೆ ಹಿಂದಿರುಗಿದುದರಿಂದ ನೋಟುಗಳು ಎಲ್ಲೋ ಕಳೆದು ಹೋದವು ಎನ್ನುವಂತೆಯೂ ಇಲ್ಲ. ಅಷ್ಟೂ ನೋಟುಗಳ ಮೌಲ್ಯವೂ 2017 ಜನವರಿಯ ಅನಂತರ ವ್ಯವಹಾರಕ್ಕೆ ಲಭ್ಯವೇ ಇತ್ತು. ಆದರೂ ವಿವಿಧ ನಮೂನೆಗಳ ವ್ಯವಹಾರಗಳು, ಉತ್ಪಾದನೆಗಳು, ಸಾಮಗ್ರಿ ಸರಬರಾಜುಗಳು ಯಾಕೆ ಸುಧಾರಿಸಲಿಲ್ಲ? ರಿಯಲ್‌ ಎಸ್ಟೇಟ್‌ ವ್ಯವಹಾರಗಳು ಯಾಕೆ ಮೊದಲಿನ ಹಂತಕ್ಕೆ ಹಿಂದಿರುಗಲಿಲ್ಲ? ಇದರರ್ಥ ಇಷ್ಟೆ. ವ್ಯವಹಾರ ಮಾಡುವವರು ಬ್ಯಾಂಕ್‌ ಮೂಲಕ ಅಥವಾ ಸರಕಾರಕ್ಕೆ ಲೆಕ್ಕ ಸಿಗುವಂತೆ ವ್ಯವಹಾರ ಮಾಡಲು ಸಿದ್ಧರಿಲ್ಲ. ಉದ್ಯೋಗದಾತರೂ ಹಾಗೆಯೇ. ಸರಿಯಾಗಿ ತೆರಿಗೆ ಪಾವತಿಸಿ ಪಾರದರ್ಶಕ ವ್ಯವಹಾರ ಮಾಡುವವರಾಗಿರುತ್ತಿದ್ದರೆ ಉದ್ಯೋಗನಷ್ಟವಾಗುವ ಸಂಭವವೇ ಇರುತ್ತಿರಲಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿತವಾಗಲೀ ಅಥವಾ ಆರ್ಥಿಕತೆಗೆ ಆದ ಇನ್ನಾವುದೇ ಹಾನಿಯಾಗಲೀ, ಅವೆಲ್ಲಕ್ಕೂ ಕಾರಣ ಏನು? ಸಣ್ಣ ಅಥವಾ ದೊಡ್ಡ ವ್ಯಾಪಾರಸ್ಥರು, ಉದ್ದಿಮೆದಾರರು ಅಪಾರದರ್ಶಕ ರೀತಿಯಲ್ಲಿ ಮತ್ತು ತೆರಿಗೆ ತಪ್ಪಿಸಿ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದದ್ದು ಹೊರತು ಬೇರೇನಲ್ಲ.

ರಿಸರ್ವ್‌ ಬ್ಯಾಂಕಿನ ಮಾಜಿ ಗವರ್ನರ್‌ ರಘುರಾಮ ರಾಜನ್‌ ಹೇಳುವ ಪ್ರಕಾರ ದೇಶದ ಆರ್ಥಿಕತೆಗೆ ನೋಟು ರದ್ದತಿ ಯಿಂದ ಕಡಿಮೆಯೆಂದರೂ ಎರಡೂವರೆ ಲಕ್ಷ ಕೋಟಿ ರೂಪಾಯಿ ಗಳಷ್ಟು ನಷ್ಟವಾಗಿರಬಹುದು. ಅಂದರೆ ತೆರಿಗೆ ತಪ್ಪಿಸಿ ನಡೆಯ ಬಹುದಾಗಿದ್ದ ಕನಿಷ್ಠ ಎರಡೂವರೆ ಲಕ್ಷ ಕೋಟಿಯಷ್ಟು ವ್ಯವಹಾರ ವನ್ನು ಅನಾಣ್ಯೀಕರಣವು ತಡೆದಂತಾಯಿತು. ಅಷ್ಟು ದೊಡ್ಡ ಪ್ರಮಾಣದಲ್ಲಿ ವಿವಿಧ ಹಂತಗಳಲ್ಲಿ ನಡೆಯಬಹುದಾಗಿದ್ದ ಭ್ರಷ್ಟತೆಯು ಕಡಿಮೆಯಾಯಿತು! ಕೇವಲ ಹತ್ತು ತಿಂಗಳುಗಳ ಅವಧಿ
ತೆಗೆದುಕೊಂಡಾಗ ಇಷ್ಟು ಪ್ರಮಾಣದ ಭ್ರಷ್ಟತೆ ಕಡಿಮೆಯಾಗಿದೆ.

ಈ ಮೊತ್ತ ದಿನದಿಂದ ದಿನಕ್ಕೆ ಹೆಚ್ಚಲೇಬೇಕು ತಾನೆ? ಇದು ವಿಫ‌ಲ ಎನ್ನುವವರ ಇನ್ನೊಂದು ವಾದವಿದೆ. ಕಳ್ಳಹಣವು
ದೊಡ್ಡ ಪ್ರಮಾಣದಲ್ಲಿ ನಗದು ರೂಪದಲ್ಲಿಲ್ಲ ಅನ್ನುವುದು. ಇದು ಸರಿ. ನಗದು ರೂಪದಲ್ಲಿ ಶೇ.7 ಅಥವಾ 8ಕ್ಕಿಂತ ಹೆಚ್ಚು
ಇರಲಾರದು ನಿಜ. ಆದರೆ, ತೆರಿಗೆ ಕಟ್ಟದ ಕಳ್ಳ ಆಸ್ತಿಯು ಚಿನ್ನ, ಭೂಮಿ ಹೀಗೆ ಯಾವುದೇ ರೂಪದಲ್ಲಿದ್ದರೂ ಅದನ್ನು ಮಾರಾಟ ಮಾಡಬೇಕಾದರೆ ಈಗ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇರುವುದು ಸುಳ್ಳೇ? ನಗದು ರೂಪದಲ್ಲಿಲ್ಲದ ಆಸ್ತಿ ಕೈಬದಲಾಗಲು ಕಷ್ಟವಾಗುವ ಪರಿಸ್ಥಿತಿ ಈಗ ಇದೆ. ಅಂದರೇನಾಯಿತು? ಅಷ್ಟರಮಟ್ಟಿಗೆ ಭ್ರಷ್ಟ ವ್ಯವಹಾರ ಕಡಿಮೆಯಾಯಿತು. ಹೀಗೆ ತಡೆಯಲ್ಪಟ್ಟ ವ್ಯವಹಾರಗಳೂ ಬಹುಕೋಟಿಗಳಲ್ಲೇ ಇರಬೇಕು.

Advertisement

ಇನ್ನು ಮುಂದೆ ಇಂಥ ಆಸ್ತಿ ಕೈಬದಲಾಗಬೇಕಾದರೂ, ಅಂದರೆ ಕಳ್ಳ ಆಸ್ತಿಯ ಉಪಯೋಗವನ್ನು ಅದರ ಮಾಲಕರು
ಪಡೆಯಬೇಕಾದರೆ ಕೊಳ್ಳುವವರು ಮತ್ತು ಮಾರುವವರು ತೆರಿಗೆ ತೆರಲೇಬೇಕಾದ ಸ್ಥಿತಿ ಇದೆ. ಹಾಗಿದ್ದರೆ ಇಷ್ಟು ಲಕ್ಷ ಕೋಟಿಗಳಷ್ಟು ನ ಷ್ಟ ಮಾಡಿಕೊಂಡು ಭ್ರಷ್ಟತೆ ಕಡಿಮೆ ಮಾಡುವ ಅಗತ್ಯವಿಲ್ಲ ಎಂದು ನೋಟು ರದ್ದತಿಯ ಟೀಕಾಕಾರರಾದ ನಮ್ಮ ತಜ್ಞರು ಅಭಿಪ್ರಾಯಪಡುತ್ತಿದ್ದಾರೆಯೇ?

ತೆರಿಗೆ ಕಳ್ಳತನ ಅಬಾಧಿತವಾಗಿ ಮುಂದುವರಿದು ಜಿಡಿಪಿ ಏರುತ್ತಾ ಹೋಗಬೇಕಿತ್ತು ಅನ್ನುತ್ತಾರೆಯೇ? ಹಾಗೆ ನೋಡಿದರೆ, ನಮ್ಮ ಕಳ್ಳನೋಟುಗಳು ಅತ್ಯಲ್ಪ ಪ್ರಮಾಣದಲ್ಲಾದರೂ ಚಲಾವಣೆಯಲ್ಲಿದ್ದವು ಎಂದಾಗ ಜಿಡಿಪಿಯ ಮೇಲೆ ಅವುಗಳ ಕೊಡುಗೆಯೂ ಅಲ್ಪಪ್ರಮಾಣದಲ್ಲಿ ಇದ್ದಿರಲೇಬೇಕಲ್ಲವೇ?ಅಂಥ ಜಿಡಿಪಿ ಬೇಕೇ? ಒಟ್ಟಿನಲ್ಲಿ ತೆರಿಗೆ ಕಳ್ಳತನ ತಪ್ಪಿದ್ದರಿಂದ ಗಣನೀಯವಾಗಿ ಜಿಡಿಪಿ ಕುಸಿತವಾಯಿತು ಎಂದರೆ, ಅದರ ಏರಿಕೆಯಲ್ಲಿ ತೆರಿಗೆ ಕಳ್ಳತನದ ವ್ಯವಹಾರದ ಕೊಡುಗೆ ಬಹುದೊಡ್ಡ ಪ್ರಮಾಣದಲ್ಲಿ ಇದೆ ಅಥವಾ ಇತ್ತು ಎಂದು ಸಾಬೀತಾಗುತ್ತದೆ. ಕಣ್ಣಿಗೆ ಕಾಣುವ ಬದಲಾವಣೆ ಅಥವಾ ಜನಸಾಮಾನ್ಯರಿಗೆ ಪ್ರಯೋಜನ ಏನೂ ಆಗಿಲ್ಲವಾದ್ದರಿಂದ ಇದು ವಿಫ‌ಲ ಎಂಬ ಇನ್ನೊಂದು ಮಾತಿದೆ. ಮೇಲೆ ಹೇಳಿದ ಕೋನದಿಂದ ನೋಡಿದರೆ ತತ್ಕಾಲೀನವಾಗಿಯೇ ಭ್ರಷ್ಟ ವ್ಯವಹಾರಗಳು ಕಡಿಮೆಯಾ ದುದು ಕಣ್ಣಿಗೆ ಕಾಣುವಂಥದ್ದೇ. ದೀರ್ಘ‌ಕಾಲೀನ ಪ್ರಯೋಜನ ಹೇಗೂ ಇದ್ದದ್ದೇ.

ನೋಟುರದ್ದತಿ ಎನ್ನುವುದು ಜನರನ್ನು ಗುಲಾಮರಂತೆ ಅಷ್ಟೇ ಅಲ್ಲ, ಪಶುಗಳಂತೆ ಪರಿವರ್ತಿಸುವ ಪ್ರಕ್ರಿಯೆಯ ಒಂದು ಹಂತ
ಎಂದು ತಜ್ಞ ಅಂಕಣಕಾರರೊಬ್ಬರು ಬರೆದರು. ಕಾನೂನನ್ನು ಪಾಲಿಸದ ಜನರು ನೆಲದ ಕಾನೂನನ್ನು ಪಾಲಿಸುವಂತೆ
ಮಾಡುವುದು ಗುಲಾಮಗಿರಿಗೆ ನೂಕುವುದು ಅಂತಾದರೆ ಗವರ್ನೆನ್ಸ್‌ ಅನ್ನುವುದಕ್ಕೆ ಅರ್ಥವೇನು? ಕಳ್ಳ ವ್ಯವಹಾರಸ್ಥರು
ಹೇಳಬೇಕಾದ ಮಾತುಗಳನ್ನು ತಜ್ಞರು ಹೇಳುತ್ತ ಬಂದುದರಿಂದಲೇ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾದರೂ ಬಡತನದ ರೇಖೆಗಿಂತ ಕೆಳಗಿರುವವರು ಅಲ್ಲೇ ಇದ್ದಾರೆ, ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಜನರು ಕಾನೂನು ಪಾಲಿಸುವಂತೆ ಮಾಡಲು ಇಷ್ಟು ಕಠಿಣ ಕ್ರಮ ಬೇಕಿತ್ತೇ ಎಂಬ ಪ್ರಶ್ನೆ ಸಹಜವಾದದ್ದು. ಈಚೆಗೆ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಸಮೀಕ್ಷಾ ವರದಿಯಂತೆ ಭ್ರಷ್ಟಾಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆಯಂತೆ. ಇದನ್ನು ನೋಟು ರದ್ದತಿಯ ಹಿನ್ನೆಲೆಯಲ್ಲಿ ಒಮ್ಮೆ ಗಮನಿಸಿ. ಕೆಲವು ಭ್ರಷ್ಟರ ಸಂಗ್ರಹದಲ್ಲಿದ್ದ ನೋಟುಗಳನ್ನು ತಮ್ಮ ತಮ್ಮ ಖಾತೆಗೆ ಜಮಾ ಮಾಡಿ ಉಪಕರಿಸಿದವರು ಸಾಕಷ್ಟಿದ್ದಾರೆ. ಇದಕ್ಕಾಗಿ ಕಮಿಶನ್‌ ಪಡೆದರೂ ಪಡೆಯದಿದ್ದರೂ ಇದು ಭ್ರಷ್ಟತೆಗೆ ಪ್ರೋತ್ಸಾಹವಲ್ಲದೆ ಬೇರೇನಲ್ಲ. ಭೂಮಿ ಖರೀದಿಯಂಥ ವ್ಯವಹಾರಗಳಲ್ಲಿ ಎಲ್ಲರೂ ಸರಕಾರವನ್ನು ವಂಚಿಸುವುದರ ಬಗ್ಗೆ ಬೇರೆ ಹೇಳಬೇಕಿಲ್ಲ. ಯಾವ ಬಿಲ್ಲೂ ಪಡೆಯದೆ ಸಾಮಗ್ರಿ ಕೊಳ್ಳುವುದರಲ್ಲಿ ನಾವು ಎತ್ತಿದ ಕೈ.  ಹೀಗೆ ತೆರಿಗೆ ಕಳ್ಳತನವೆಂಬ ಭ್ರಷ್ಟತೆ ಬೇರೆ ಬೇರೆ ನೆಲೆಗಳಲ್ಲಿ, ವಿವಿಧ ಹಂತಗಳಲ್ಲಿ ನಮ್ಮೆಲ್ಲರದೂ ಆಗಿ ಸಾಮೂಹಿಕವಾದುದಾಗಿರುವಾಗ , ಅದಕ್ಕೆ ತಕ್ಕಮಟ್ಟಿಗಾದರೂ ಕಡಿವಾಣ ಹಾಕಬೇಕಾದರೆ ಒಂದು ಪರಿಣಾಮಕಾರಿ ಕ್ರಮವೇ ಬೇಕಾಗಿತ್ತು. 

ಈ ಚರ್ಚೆಯಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಆರ್ಥಿಕತೆಯ ತತ್ವಶಾಸ್ತ್ರಕ್ಕೆ ನಮ್ಮ ಆರ್ಥಿಕ ತಜ್ಞರು ಸಾಕಷ್ಟು ಗಮನ ನೀಡುವುದಿಲ್ಲ. ಹಣ, ಸಂಪತ್ತು, ಶ್ರೀಮಂತಿಕೆಯನ್ನು ಜನರು ಹೇಗೆ ಪರಿಭಾವಿಸುತ್ತಾರೆ ಎನ್ನುವುದನ್ನು ಗಮನಿಸಬೇಕು. ಆಹಾರ, ವಸತಿ, ಆರೋಗ್ಯ, ಶಿಕ್ಷಣ ಇಂಥ ಅಗತ್ಯಗಳನ್ನು ಆತಂಕವಿಲ್ಲದೆ ಪೂರೈಸಬಲ್ಲ ಸುಭದ್ರ ಆರ್ಥಿಕ ಸ್ಥಿತಿಯಲ್ಲಿರುವವರು, ಅಂದರೆ ಮೇಲು ಮಧ್ಯಮವರ್ಗ ಅಥವಾ ಅದಕ್ಕಿಂತ ಮೇಲೆ ಇರುವವರ ಹಣದ ಹಂಬಲವೆಲ್ಲ ಇತರರ ಜತೆಗಿನ ಹೋಲಿಕೆಯ ಮೂಲದ್ದು. ಹಾಗಾಗಿಯೇ ಎಲ್ಲರೂ ತೆರಿಗೆ ಕಟ್ಟದೇ ಜಾಣರಾಗುತ್ತಾರೆ, “ನಾನು ಯಾಕೆ ತೆರಿಗೆ ಕಟ್ಟಿ ವ್ಯವಹಾರಜ್ಞಾನವಿಲ್ಲದವನು ಎನಿಸಿಕೊಳ್ಳ
ಬೇಕು?’ ಎಂಬುದೇ ಇಂಥ ಬಹುತೇಕ ಶ್ರೀಮಂತರ ಭಾವನೆ. ಎಲ್ಲರೂ ತೆರಿಗೆ ತೆರುವಂತೆ ಮಾಡುವುದು ಇಂದಿನ ಆವಶ್ಯಕತೆ. ಅಂಥ ಹೊರೆಯು ತೆರಿಗೆ ತಪ್ಪಿಸುತ್ತಿದ್ದ ಶ್ರೀಮಂತರ ಮೇಲೆ ಬಿದ್ದಾಗ ಅಂಥ ಶ್ರೀಮಂತರನ್ನು ಅವಲಂಬಿಸಿದ ಬಡವರ ಮೇಲೂ ಸಹಜವಾಗಿ ಹೊಡೆತ ಬಿದ್ದೇ ಬೀಳುತ್ತದೆ. ಇದಕ್ಕೆ ಬೇರೆ ದಾರಿಯೇನಿದೆ? ಇನ್ನು ಈ ಬಂಡವಾಳಶಾಹಿ ವಿರೋಧಿ ಅರ್ಥಶಾಸ್ತ್ರಜ್ಞರು ನೋಟು ರದ್ದತಿಗೆ ಪ್ರತಿಕ್ರಿಯಿಸಿದ ಬಗೆಯಂತೂ ಅರ್ಥವೇ ಆಗುವುದಿಲ್ಲ. 

ಲಕ್ಷಗಟ್ಟಲೆ ಉದ್ಯೋಗ ನಷ್ಟವಾಯಿತು ಎಂದು ಹೇಳುತ್ತಾ ನೋಟು ರದ್ದತಿಯನ್ನು ಟೀಕಿಸುತ್ತಾರೆ. ಸರಿ, ಹಾಗಿದ್ದರೆ ಈ ದೇಶದಲ್ಲಿ ಬಡವರಿಗೆ ಉದ್ಯೋ ಗ, ಆರ್ಥಿಕ ಅವಕಾಶವೆಲ್ಲ ಸಿಗಬೇಕಾದರೆ ಬಂಡವಾಳಶಾಹಿಗಳು ಚೆನ್ನಾಗಿರಬೇಕು; ಅದರಲ್ಲೂ ತೆರಿಗೆ ಕಟ್ಟದೇ ವ್ಯವಹಾರ ಮಾಡಬೇಕು ಎಂದಂತಾಯಿತು. ಹಾಗಿದ್ದರೆ ಈವರೆಗೆ ಬಂಡವಾಳಶಾಹಿಗಳನ್ನು ಬೈಯುತ್ತಿದ್ದುದೇಕೆ?
ಶ್ರೀಮಂತರು ಸ್ವಯಂಪ್ರೇರಣೆಯ ಬಡತನವನ್ನು ಒಪ್ಪಿಕೊಳ್ಳ ಬೇಕೆಂದು ಪ್ರತಿಪಾದಿಸುತ್ತಿದ್ದ ಗಾಂಧೀಜಿಯವರು ಸಾಮೂಹಿಕ ಮತ್ತು ವ್ಯಕ್ತಿಗತ ನೈತಿಕತೆಗೆ ಒತ್ತು ನೀಡಿದ್ದರು. ಆರ್ಥಿಕತೆ ಕುರಿತ ಸಾಮೂಹಿಕ ಗ್ರಹಿಕೆಯಲ್ಲಿ ನೈತಿಕತೆಯನ್ನು ತರುವುದು ಇಂದಿನ ತುರ್ತು. ನೋಟುರದ್ದತಿಯಿಂದಾಗಿ ದೇಶದ ಕೆಲವರಲ್ಲಾದರೂ ಮನಸ್ಸಿಧ್ದೋ ಇಲ್ಲದೆಯೋ ಅಂತೂ ಆರ್ಥಿಕತೆಯ ಬಗೆಗಿನ ಮನೋಭಾವ ಮತ್ತು ವರ್ತನೆಯಲ್ಲಿ ಬದಲಾವಣೆಯಾಗಿರುವುದು ಸ್ಪಷ್ಟ. ತನ್ನ ಮಾತನ್ನು ಕೇಳುವವರು ಇರುವಾಗ ನಾಯಕ
ನಾದವನು ಜನರ ಮನೋಭಾವವನ್ನು ಧನಾತ್ಮಕವಾಗಿ ಬದಲಾಯಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದು ಅಗತ್ಯ. ಅಂಥ
ಬದಲಾವಣೆಯೇ ಆರ್ಥಿಕತೆಯಲ್ಲಿ ಕ್ರಮೇಣ ಸಮತೋಲನಕ್ಕೆ ಕಾರಣವಾಗಬೇಕು.

ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ಕಡಿಮೆಯಾಗಲು ಇದುವೇ ದಾರಿ. ಉದಾಹರಣೆಗೆ, ಒಟ್ಟು ಅಡಿಗೆ ಅನಿಲ ಬಳಕೆದಾರರ ಪೈಕಿ ಕನಿಷ್ಠ ಐದಾರು ಶೇಕಡಾದಷ್ಟು ಬಳಕೆದಾರರು ಸಬ್ಸಿಡಿ ಬಿಟ್ಟುಕೊಡುವಂತಾದುದು ಜನರ ಮನೋಭಾವವನ್ನು ಧನಾತ್ಮಕವಾಗಿ ಬಳಸಿಕೊಂಡುದ ರಿಂದ. ನೋಟು ರದ್ದತಿಯಿಂದಾಗಿ ಜನರಿಗೆ ಕಷ್ಟ ನಷ್ಟಗಳಾದರೂ ಇಡೀ ದೇಶದ ಮನೋಭಾವ ಇದರಿಂದ ಧನಾತ್ಮಕವಾಗಿ ಬದಲಾಗುವ ಎಲ್ಲ ಸಾಧ್ಯತೆಗಳಿವೆ. ಆದ್ದರಿಂದಲೇ ನೋಟು ರದ್ದತಿ ಕುರಿತ ಎಲ್ಲ ಸಮೀಕ್ಷೆಗಳಲ್ಲೂ ಜನರು ನಮಗೆ ಕಷ್ಟವಾಯಿತು, ಆದರೂ ಇದು ಆಗಲೇಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿ ಸುತ್ತಿರುವುದು. ತೆರಿಗೆ ಬಲೆಯೊಳಗೆ ಸಿಲುಕುವ ಶ್ರೀಮಂತರು ಕೂಡ ಮೋದಿಯವರ ಕೈ ಬಿಟ್ಟಂತೆ ಕಾಣುವುದಿಲ್ಲ! ನೋಟು ರದ್ದತಿಯಂಥ ಎಡಪಂಥೀಯ ಕ್ರಮವನ್ನು ಎಡಪಂಥೀಯರು ಟೀಕಿಸುವಂತೆ ಮತ್ತು ಬಲಪಂಥೀಯರು ಸಮರ್ಥಿಸುವಂತೆ ಆದುದು ಭಾರತೀಯ ರಾಜಕಾರಣದ ಸ್ವಾರಸ್ಯಗಳಲ್ಲಿ ಒಂದು. 

*ಅಜಕ್ಕಳ ಗಿರೀಶ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next