ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ ವರ್ಷ ನವೆಂಬರ್ 8ರಂದು ಕೈಗೊಂಡಿದ್ದ ನೋಟು ಅಪನಗದೀಕರಣದ ಕ್ರಮದಿಂದ ದೇಶದಲ್ಲಿ ಶೇ.35ರಷ್ಟು ಉದ್ಯೋಗ ನಷ್ಟವಾಗಿದೆ ಮತ್ತು ಅತೀ ಸಣ್ಣ ಕೈಗಾರಿಕೋದ್ಯಮಗಳ ಆದಾಯ ಶೇ.50ರಷ್ಟು ಕಡಿಮೆಯಾಗಿದೆ ಎಂದು ಆಲ್ ಇಂಡಿಯಾ ಮೆನುಫ್ಯಾಕ್ಚರರ್ ಆರ್ಗನೈಸೇಶನ್ (ಎಐಎಂಓ) ವರದಿ ತಿಳಿಸಿದೆ.
ನೋಟು ಅಪನಗದೀಕರಣವಾದ ಮೊದಲ 34 ದಿನಗಳಲ್ಲಿ ಈ ದುಷ್ಪರಿಣಾಮ ಕಂಡು ಬಂದಿರುವುದಾಗಿ ಎಐಎಂಓ ವರದಿ ಹೇಳಿದೆ.
ನೋಟು ಅಪನಗದೀಕರಣದಂತಹ ಅತ್ಯಂತ ದಿಟ್ಟ ಕ್ರಮದಿಂದ ದೇಶದ ಆರ್ಥಿಕತೆ ಮತ್ತು ಉತ್ಪಾದನಾ ರಂಗದ ಮೇಲೆ ತಾತ್ಕಾಲಿಕ ವ್ಯತಿರಿಕ್ತ ಪರಿಣಾಮಗಳು ಉಂಟಾಗುವುದು ಸಹಜವೇ ಆದರೂ ನೋಟು ಅಮಾನ್ಯಗೊಳಿಸಲಾದ ತಿಂಗಳ ಬಳಿಕವೂ ಈ ರೀತಿಯ ದುಷ್ಪರಿಣಾಮ ಮುಂದುವರಿದಿರುವುದನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಎಐಎಂಓ ತನ್ನ ವರದಿಯಲ್ಲಿ ಹೇಳಿದೆ.
ನೋಟ್ ಬ್ಯಾನ್ ಕ್ರಮದಿಂದಾಗಿ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯವು ತತ್ತರಿಸಿ ಹೋಗಿದೆ ಎಂದಿರುವ ಎಐಎಂಓ ಕಳೆದ ಒಂದು ತಿಂಗಳಲ್ಲಿ ಕೈಗೊಂಡಿರುವ ನಾಲ್ಕು ಅಧ್ಯಯನಗಳ ಸರಣಿಯಲ್ಲಿ ಇದು ಮೂರನೇಯದ್ದಾಗಿದೆ. ಎಐಎಂಓ ರೂಪಿಸಿರುವ ತಜ್ಞರ ಸಮಿತಿಯು ಈ ವರದಿಯನ್ನು ಸಿದ್ಧಪಡಿಸಿದೆ ಎಂದು ಸಂಘಟನೆಯ ಅಧ್ಯಕ್ಷ ಕೆ ಇ ರಘುನಾಥನ್ ಹೇಳಿದ್ದಾರೆ.