Advertisement
ಟೆಂಟ್ ಮೇಳಗಳ ಸಮಯದಲ್ಲೂ ಭೂತಾರಾಧನೆ ಹಿನ್ನೆಲೆಯ ಹಲವು ಪ್ರಸಂಗ ಗಳು ಜನಪ್ರಿಯವಾಗಿದ್ದವು. ಪ್ರಸಂಗಕರ್ತರ ಜ್ಞಾನ, ಕಲಾವಿದರ ಜಾಣ್ಮೆ, ಜನರ ಅಕ್ಕರೆ ಇವನ್ನು ಮೆರೆಸಿದವು. ಈಚೆಗೆ ಇಂತಹ ಪ್ರಸಂಗಗಳು ತುಳು ಮತ್ತು ಕನ್ನಡ ಭಾಷೆಯ ಪ್ರಸಂಗಗಳನ್ನು ಆಡುವ ಯಕ್ಷಗಾನ ಮೇಳಗಳಲ್ಲಿ ಜನಪ್ರಿಯವಾಗಿದೆ. ಹೊಸ ಪ್ರೇಕ್ಷಕ ವರ್ಗ ಸೃಷ್ಟಿಯಾಗಿದೆ. ತೆಂಕಿನಲ್ಲಿ ಇಂತಹ ಪ್ರಸಂಗಗಳನ್ನು ಆಡುವ ಸಾಕಷ್ಟು ಮೇಳಗಳು ಇದ್ದವು. ಬಡಗು ಮೇಳಗಳು ಇಂತಹ ಪ್ರದರ್ಶನ ಇತ್ತೀಚೆಗೆ ದಂಡಿಯಾಗಿ ಆಡುತ್ತಿವೆ. ಕನ್ನಡ ಮಾತನಾಡುವ ಪ್ರದೇಶ ಗಳಲ್ಲಿ ಕಾಂತಾರ ಸಿನೆಮಾ ಅನಂತರ ಇಂತಹ ಪ್ರಸಂಗಗಳ ಬಯಲಾಟಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ತೆಂಕು-ಬಡಗಿನ ಮೂಲಗಳು ತಿಳಿಸುತ್ತವೆ.
Related Articles
Advertisement
ಇತ್ತೀಚೆಗೆ ಬಡಗಿನ ಮೇಳದ ದೈವ ಪಾತ್ರಧಾರಿ ಒಬ್ಬರು ಅಣಿಕಟ್ಟಿ ಸುತ್ತ ಹತ್ತಾರು ದೊಂದಿ ಕಟ್ಟಿ ಯಕ್ಷಗಾನೀಯ ವಲ್ಲದ ರೀತಿಯಲ್ಲಿ, ಜಾನಪದ ಶೈಲಿಯ ಹಾಡಿಗೆ ಕುಣಿದು ಕುಪ್ಪಳಿಸಿ ಬರುವಾಗಲೇ ಸ್ಮತಿ ತಪ್ಪಿ ಬಿದ್ದಿದ್ದರು. ವೇಷಭೂಷಣದ ಭಾರ, ಬೆವರು, ಬೆಂಕಿಯ ಬಿಸಿ, ಕುಣಿಯುವಾಗಿನ ಆಯಾಸ ಇಷ್ಟನ್ನೆಲ್ಲ ನಿಭಾಯಿಸುವ ಶಕ್ತಿ ಈಚಿನ ಕಲಾವಿದರಿಗೆ ನಿಜವಾಗಿಯೂ ಇದೆಯೇ ಎನ್ನುವ ಬಗ್ಗೆ ಕಳವಳ ಉಂಟಾಗುತ್ತಿದೆ. ಸಾಮಾನ್ಯವಾಗಿ ಮಹಿಷಾಸುರ ಮುಂತಾದ ವೇಷಧಾರಿಗಳು ತಮ್ಮ ಅನುಭವದಿಂದ ಹೇಳುವುದಾದರೆ ಭೂತಾರಾಧನೆಯಂತೆ ಅಣಿಕಟ್ಟಿ, ದೊಂದಿಗಳನ್ನು ಸುತ್ತ ಇಟ್ಟರೆ, ಒಂದು ವೇಳೆ ಕಲಾವಿದನ ಮೈಮೇಲೆ ಬೆಂಕಿ ಹತ್ತಿದರೆ ಸುಲಭಕ್ಕೆ ನಂದಿಸುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಮಹಿಷ ಪಾತ್ರಧಾರಿಗಳು ಉದ್ದದ ದೊಂದಿಯನ್ನು ದೂರ ಹಿಡಿದು ರಾಳ ಎಸೆಯುವ ಪರಿಪಾಠ. ಅಂತಹ ಬೆಂಕಿ ಉಂಡೆಯನ್ನೇ ಅಣಿಯ ಮೇಲೆ ಕಟ್ಟಿ ಬೆಂಕಿ ಬಿದ್ದರೆ ಹತ್ತಿಪತ್ತು ಕಟ್ಟು ಬಿಚ್ಚಿ ಕಲಾವಿದನ ಮೈ ಮೇಲಿನ ಬಟ್ಟೆ ತೆಗೆದು ರಕ್ಷಿಸಲು ಸಾಧ್ಯವೇ?. ಜನಪದೀಯ ಶೈಲಿಯಲ್ಲಿ ಯಕ್ಷಗಾನ ಸ್ಥಿತ್ಯಂತರ ಬಗ್ಗೆ ವಾದ ಬೇರೆಯೇ ಇದ್ದರೂ ಕಲಾವಿದನ ಜೀವದ ಹಿನ್ನೆಲೆಯಲ್ಲಿ ಚರ್ಚೆಗಳಾಗಬೇಕಿದೆ.
ನವೀನ್ ಕೆ. ವಿದ್ಯಾನಗರ