Advertisement

5000 ನಿವಾಸಿಗಳು, 2700 ವಾಹನಗಳು, 200 ಸಾಕು ಪ್ರಾಣಿಗಳು ಶಿಫ್ಟ್!

07:45 PM Aug 26, 2022 | Team Udayavani |

ನೋಯ್ಡಾ: ಸೂಪರ್‌ಟೆಕ್‌ನ ಅಕ್ರಮ ಅವಳಿ ಕಟ್ಟಡಗಳಾದ ಅಪೆಕ್ಸ್‌ ಮತ್ತು ಸಿಯೇನ್‌ ಭಾನುವಾರ ಮಧ್ಯಾಹ್ನ ಧರೆಗುರುಳಲಿವೆ. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಭಾರತದ ಅತಿ ಎತ್ತರದ ಕಟ್ಟಡಗಳು ನೆಲಸಮವಾದಾಗ ಉಂಟಾಗಬಹುದಾದ ಸಂಭಾವ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನೋಯ್ಡಾ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ.

Advertisement

ಅಹಿತಕರ ಘಟನೆಗಳೇನಾದರೂ ಸಂಭವಿಸಿದರೆ ಕೂಡಲೇ ಚಿಕಿತ್ಸೆ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮಾತ್ರವಲ್ಲದೇ, 3 ಖಾಸಗಿ ಆಸ್ಪತ್ರೆಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇದೇ ವೇಳೆ, ಕಾರ್ಯಾಚರಣೆಗೆ 20 ಕೋಟಿ ರೂ. ವೆಚ್ಚವಾಗಲಿದೆ. ಕಾರ್ಯಾಚರಣೆಯ ಹೊಣೆ ಹೊತ್ತಿರುವ ಈಡಿಫ‌ಸ್‌ ಎಂಜಿನಿಯರಿಂಗ್‌ ಸಂಸ್ಥೆ 100 ಕೋಟಿ ವಿಮೆಯನ್ನೂ ಮಾಡಿಸಿದೆ.

5 ಸಾವಿರ ಮಂದಿಯ ಸ್ಥಳಾಂತರ:
ಅವಳಿ ಕಟ್ಟಡಗಳಿಗೆ ಸಮೀಪದಲ್ಲೇ ಇರುವಂಥ ಅಪಾರ್ಟ್‌ಮೆಂಟ್‌ಗಳಾದ ಎಮರಾಲ್ಡ್‌ ಕೋರ್ಟ್‌ ಮತ್ತು ಎಟಿಎಸ್‌ ವಿಲೇಜ್‌ನ ಸುಮಾರು 5 ಸಾವಿರ ಮಂದಿಯನ್ನು ಭಾನುವಾರ ಬೆಳಗ್ಗೆ 7 ಗಂಟೆಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತದೆ. ಅವರಿಗೆ ಸೇರಿರುವ 2,700ರಷ್ಟು ವಾಹನಗಳನ್ನು ಕೂಡ ಬೇರೆಡೆಗೆ ಒಯ್ಯಲಾಗುತ್ತದೆ. ನಿವಾಸಿಗಳು ಕೂಡ ತಮ್ಮೊಂದಿಗೆ 150-200ರಷ್ಟು ಸಾಕು ಪ್ರಾಣಿಗಳನ್ನು ಒಯ್ಯಲಿದ್ದಾರೆ.

ಕಟ್ಟಡಗಳ 500 ಮೀಟರ್‌ ವ್ಯಾಪ್ತಿಯನ್ನು ನಿರ್ಬಂಧಿತ ವಲಯವೆಂದು ಘೋಷಿಸಲಾಗುತ್ತದೆ. ಧ್ವಂಸ ಕಾರ್ಯದಲ್ಲಿ ಭಾಗಿಯಾಗಿರುವ ಭಾರತೀಯ ಮತ್ತು ವಿದೇಶಿ ಬ್ಲಾಸ್ಟರ್‌ಗಳ ತಂಡವನ್ನು ಹೊರತುಪಡಿಸಿ ಬೇರೆ ಯಾವ ವ್ಯಕ್ತಿ ಅಥವಾ ಪ್ರಾಣಿಯೂ ಅದರ ಒಳಬರದಂತೆ ನೋಡಿಕೊಳ್ಳಲಾಗುತ್ತದೆ.

ಎಲ್ಲರಿಗೂ ಇದೊಂದು ಪಾಠ
ನಿಯಮಗಳನ್ನು ಉಲ್ಲಂಘಿಸಿದರೆ, ಖಂಡಿತವಾಗಿಯೂ ಇಂದಲ್ಲದಿದ್ದರೆ, ನಾಳೆಯಾದರೂ ಅದರ ಹೊಣೆಯನ್ನು ಹೊರಲೇಬೇಕು ಎಂದು ನೋಯ್ಡಾ ಪ್ರಾಧಿಕಾರದ ಸಿಇಒ ರಿತು ಮಾಹೇಶ್ವರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next