ಧಾರವಾಡ: ಚುನಾವಣೆಗೂ ಮುಂಚೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ ಶೇ.90ರಷ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಜನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನಭಾಗ್ಯ ಯೋಜನೆ ಬಡವರಿಗೆ ತುಂಬ ಅನುಕೂಲವಾಗಿದೆ. ಹಾಲು ಉತ್ಪಾದಕರಿಗೆ ನೀಡಿದ ಸಹಾಯಧನ ರಾಜ್ಯದಲ್ಲಿ ಕ್ಷೀರಕ್ರಾಂತಿಗೆ ಕಾರಣವಾಗಿದೆ. ವಿವಿಧ ಜನಪರ ಯೋಜನೆಗಳು ಬಡ ಹಾಗೂ ಹಿಂದುಳಿದ ಜನರಿಗೆ ಉತ್ತಮ ಜೀವನ ಕಟ್ಟಿಕೊಳ್ಳಲು ತುಂಬ ಅನುಕೂಲ ಮಾಡಿಕೊಟ್ಟಿವೆ.
ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಜಿಲ್ಲೆಯಲ್ಲಿ 580 ಕ್ಕೂ ಹೆಚ್ಚು ಕಿಮೀ ರಸ್ತೆ ಮಾಡಿಕೊಡಲಾಗಿದೆ. ಇನ್ನೊಂದು ವರ್ಷದಲ್ಲಿ ಬಾಕಿ ಉಳಿದ ಕೆಲಸ ಪೂರ್ಣಗೊಳಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ರಾಜ್ಯ ಸರ್ಕಾರದ ಕೆಲವು ಯೋಜನೆಗಳು ತುಂಬ ಯಶಸ್ವಿ ಆಗಿವೆ.
ಆದರೆ, ಸರ್ಕಾರದಿಂದ ವೃದ್ಧಾಪ್ಯ ವೇತನಕ್ಕೆ ಬಿಡುಗಡೆಯಾದ ಹಣ ಮಾತ್ರ ಫಲಾನುಭವಿಗಳನ್ನು ತಲುಪಿಲ್ಲ. ತೋಟಗಾರಿಕೆ ಬೆಳೆಗಳು ಹಾನಿಯಾದರೂ ಪರಿಹಾರವಿಲ್ಲ. ಸಾಕಷ್ಟು ರೈತರಿಗೆ ಬೆಳೆ ಪರಿಹಾರ ಬಂದಿಲ್ಲ ಎಂದರು. ಕಳಸಾ-ಬಂಡೂರಿ ಅಂತಹ ನೀರಾವರಿ ಯೋಜನೆ ಜಾರಿ ಮಾಡಲು ರಾಜ್ಯ ಸರ್ಕಾರ ನಿರೀಕ್ಷಿತ ಕೆಲಸ ಮಾಡಿಲ್ಲ.
ಹು-ಧಾ ಮಧ್ಯೆ ಬಿಆರ್‌ಟಿಎಸ್ ಯೋಜನೆ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರ ಮುಗಿಸಬೇಕಿದೆ. ಜಿಲ್ಲೆಯ ವಿವಿಧೆಡೆ ಕುಡಿವ ನೀರು ಒದಗಿಸುವ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಚಿವ ವಿನಯ ಕುಲಕರ್ಣಿ ರಾಜ್ಯ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಬಿಂಬಿಸುವ “ನುಡಿದಂತೆ ನಡೆಯುತ್ತಿದ್ದೇವೆ’ ಕಿರು ಪುಸ್ತಕ ಬಿಡುಗಡೆಗೊಳಿಸಿದರು.
ನಿವೃತ್ತ ಪ್ರಾಚಾರ್ಯ ಪ್ರೊ| ಎನ್.ಜಿ. ಚಚಡಿ ವಿಶೇಷ ಉಪನ್ಯಾಸ ನೀಡಿದರು. ಡಿಸಿ ಡಾ| ಎಸ್.ಬಿ. ಬೊಮ್ಮನಹಳ್ಳಿ, ಜಿಪಂ ಸಿಇಓ ಆರ್. ಸ್ನೇಹಲ್, ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ವಾರ್ತಾ ಇಲಾಖೆಯ ಮಂಜುನಾಥ ಡೊಳ್ಳಿನ, ಸಿ.ಎಂ. ಬೋವಿ ಇತರರಿದ್ದರು.