ದಾವಣಗೆರೆ: ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಶುಕ್ರವಾರ ಬಾಷಾನಗರ ಒಳಗೊಂಡಂತೆ ವಿವಿಧ ಭಾಗದಲ್ಲಿ ಜನಜಾಗೃತಿ ಜಾಥಾ ನಡೆಯಿತು.
ಬಾಷಾನಗರದ ಪ್ರಸೂತಿ ಕೇಂದ್ರದಿಂದ ಪ್ರಾರಂಭವಾದ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಉಮಾ ಎಂ. ಪಿ. ರಮೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಹೊಸ ಅಲೆ, ಹೊಸ ವಿಶ್ವಾಸ, ಸಂಪೂರ್ಣ ಜವಾಬ್ದಾರಿಯಿಂದ ಕುಟುಂಬದ ವಿಕಾಸ… ಘೋಷವಾಕ್ಯದಡಿ ಜವಾಬ್ದಾರಿ ನಿಭಾಯಿಸಿ ಯೋಜನೆ ರೂಪಿಸಿ… ಯೋಜಿತ ಪರಿವಾರ… ಸುಖ ಅಪಾರ…,
ಚಿಕ್ಕ ಕುಟುಂಬ… ಚೊಕ್ಕ ಕುಟುಂಬ…, ಒಂದು ಎರಡು ಆಸ್ತಿ… ಮಿಕ್ಕಿದ್ದೆಲ್ಲಾ ಜಾಸ್ತಿ…, ಜನಸಂಖ್ಯಾ ಸ್ಥಿರತೆ… ನಿಮ್ಮಿಂದ ಮಾತ್ರ ಸಾಧ್ಯ.., ಚಿಕ್ಕ ಕುಟುಂಬ ಅಭಿವೃದ್ಧಿ ಸಂಕೇತ… ಹೀಗೆ ವಿವಿಧ ಘೋಷಣೆಗಳ ಫಲಕದೊಂದಿಗೆ ಜಾಥಾ ನಡೆಯಿತು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ನಂದಾ ಮಾತನಾಡಿ, ಜಿಲ್ಲೆಯಲ್ಲಿ 19,45,497ರಷ್ಟು ಜನಸಂಖ್ಯೆ ಇದೆ. 18 ಜನನ ಪ್ರಮಾಣ ಮತ್ತು ಶೇ. 8.9 ಜನಸಂಖ್ಯಾ ಬೆಳವಣಿಗೆ ದರ ಇದೆ. ಫಲವತ್ತತೆಯ ದರ ಶೇ. 1.9 ಇದ್ದು, ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸವವರ ಪ್ರಮಾಣ ಶೇ. 68 ಇದೆ. ಲಿಂಗಾನುಪಾತ 972 ಇದ್ದು, 2016-17ರಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಜಿಲ್ಲೆಯಲ್ಲಿ ಶೇ. 95 ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ದಿಲ್ ಷಾದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ತ್ರಿಪುಲಾಂಬ, ಜಿಲ್ಲಾ ಆಯುಷ್ ಅಧಿಕಾರಿ ಡಾ|ಯು. ಸಿದ್ದೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಗಂಗಾಧರ್, ಡಿಟಿಓ ಡಾ| ರಾಘವನ್, ಡಿಎಲ್‌ಓ ಡಾ| ಸರೋಜಾಬಾಯಿ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.