ಹೊಸದಿಲ್ಲಿ : ಸುಪ್ರೀಂ ಕೋರ್ಟ್ ಕಾರ್ಯ ವೈಖರಿ ವಿರುದ್ಧ ನಾಲ್ವರು ಹಿರಿಯ ನ್ಯಾಯಾಧೀಶರು ಬಹಿರಂಗ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ಹೊರಗೆಡಹಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಭಾರತೀಯ ನ್ಯಾಯಾಂಗದ ವಿಶ್ವಾಸಾರ್ಹತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ಭಾರತದ ಪ್ರಜಸಾತ್ತೆ ಅಪಾಯದಲ್ಲಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾಗಿರುವ ಜಸ್ಟಿಸ್ ಚಲಮೇಶ್ವರ್, ಜಸ್ಟಿಸ್ ರಂಜನ್ ಗೊಗೊಯಿ, ಜಸ್ಟಿಸ್ ಮದನ್ ಲೋಕೂರ್ ಮತ್ತು ಜಸ್ಟಿಸ್ ಕುರಿಯನ್ ಜೋಸೆಫ್ ಅವರು ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಬಹಿರಂಗವಾಗಿ ಟೀಕಿಸಿ, ಸರ್ವೋಚ್ಚ ನ್ಯಾಯಾಲಯದಲ್ಲಿನ ಈಚಿನ ಘಟನೆಗಳು ತಮಗೆ ಬೇರೆ ಉಪಾಯವೇ ಇಲ್ಲದೆ ತಮ್ಮ ಕಳವಳವನ್ನು ರಾಷ್ಟ್ರದ ಮುಂದೆ ಬಿನ್ನವಿಸುವ ಅನಿವಾರ್ಯತೆ ಒದಗಿದೆ ಎಂದು ಹೇಳಿದ್ದರು.
ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಇದೇ ಮೊದಲ ಬಾರಿ ಎಂಬಂತೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಬಹಿರಂಗ ಪತ್ರಿಕಾ ಗೋಷ್ಠಿಯ ಕ್ರಮವನ್ನು ‘ಅಭೂತಪೂರ್ವ’ ಮತ್ತು ‘ಅಸಾಮಾನ್ಯ’ ಎಂದು ವರ್ಣಿಸಿರುವ ಕಾಂಗ್ರೆಸ್ ಪಕ್ಷ “ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ದೇಶದ ಪ್ರಜಾಸತ್ತೆಯು ಅಪಾಯದಲ್ಲಿದೆ ಎಂದು ಅನ್ನಿಸುತ್ತದೆ” ಎಂದು ಟ್ವೀಟ್ ಮಾಡಿದೆ.
ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಕಾರ್ಯ ವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಡಿರುವ ಮಾತುಗಳ ಬಗ್ಗೆ ನಮಗೆ ತೀವ್ರ ಕಳವಳ ಉಂಟಾಗಿದೆ ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಹೇಳಿದೆ.
ಹಿರಿಯ ವಕೀಲರು ಮತ್ತು ಕಾಂಗ್ರೆಸ್ ನಾಯಕರಾಗಿರುವ ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಅವರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ಸುಪ್ರೀಂ ಕೋರ್ಟ್‌ನ ಈ ತ್ವರಿತ ಗತಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.
ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪತ್ರಿಕಾ ಗೋಷ್ಠಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಕರೆಸಿಕೊಂಡು ಮಾಹಿತಿಗಳನ್ನು ತಿಳಿದುಕೊಂಡರು.
ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ವಾಕ್ ದಂಡನೆಗೆ ಮುಂದಾಗುವ ಆಲೋಚನೆ ತಮಗಿಲ್ಲ; ಅದನ್ನು ರಾಷ್ಟ್ರವೇ ನಿರ್ಧರಿಸಬೇಕು ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಹೇಳಿದ್ದಾರೆ.