Advertisement

ಬ್ರಹ್ಮಗಂಟು ಹುಡುಗನ ಡೆಮೋ ಪೀಸ್‌

09:49 AM Mar 26, 2019 | Lakshmi GovindaRaju |

“ಬಿಗ್‌ಬಾಸ್‌’ ಮನೆಯಿಂದ ಹೊರಬಂದ ನಟಿ “ಸ್ಪರ್ಶ’ ರೇಖಾ ಅವರು ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದ ವಿಷಯವನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೆ “ಡೆಮೋ ಪೀಸ್‌’ ಎಂಬ ಹೆಸರು ಇಟ್ಟಿರುವುದನ್ನೂ ಹೇಳಲಾಗಿತ್ತು. ಆ ಚಿತ್ರದ ಮೂಲಕ ಕಿರುತೆರೆ ನಟ ಭರತ್‌ ಬೊಪ್ಪಣ್ಣ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಜೀ ಕನ್ನಡ ವಾಹಿನಿಯ “ಬ್ರಹ್ಮಗಂಟು’ ಧಾರಾವಾಹಿ ನಟ ಭರತ್‌ ಬೊಪ್ಪಣ್ಣ ಈಗ ಇದೇ ಮೊದಲ ಬಾರಿಗೆ ಚಿತ್ರದ ನಾಯಕರಾಗಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಚಿತ್ರದಲ್ಲಿ ಭರತ್‌ಗೆ ನಾಯಕಿಯಾಗಿ ಸೋನಾಲ್‌ ಮಾಂತೇರೊ ಜೋಡಿಯಾಗಿದ್ದಾರೆ. ರೇಖಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

ಈ ಚಿತ್ರವನ್ನು ವಿವೇಕ್‌ ನಿರ್ದೇಶಿಸುತ್ತಿದ್ದಾರೆ. ಇದುವರೆಗೆ ನಟನೆ ಮೂಲಕ ಗಮನಸೆಳೆದಿದ್ದ ನಟಿ ರೇಖಾ ಅವರು, “ಡೆಮೋ ಪೀಸ್‌’ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಳ್ಳಲು ಹೊರಟಿದ್ದಾರೆ. ತಮ್ಮ ನಿರ್ಮಾಣದ ಚೊಚ್ಚಲ ಚಿತ್ರದ ಬಗ್ಗೆ ಹೇಳಿಕೊಳ್ಳುವ ರೇಖಾ, ಈಗಾಗಲೇ ಬೆಂಗಳೂರು, ತುಮಕೂರು ಸುತ್ತ ಮುತ್ತ ಸದ್ದಿಲ್ಲದೆ ಶೇ. 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.

ಸದ್ಯ ಚಿತ್ರದ ಅಂತಿಮ ಹಂತದ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಮಾರ್ಚ್‌ ಅಂತ್ಯಕ್ಕೆ ಚಿತ್ರೀಕರಣ ಮುಗಿಸಲಿದೆ’ ಎಂಬ ವಿವರ ಕೊಡುತ್ತಾರೆ. ಹಾಗಾದರೆ, “ಡೆಮೋ ಪೀಸ್‌’ ಕಥೆ ಏನು? ಇದಕ್ಕೆ ಉತ್ತರಿಸುವ ರೇಖಾ, “ಇದೊಂದು ಈಗಿನ ಕಾಲದ ಯೂಥ್ಸ್ ಲೈಫ್ಸ್ಟೈಲ್‌, ಅವರ ಯೋಚನೆ, ಹಾವ-ಭಾವ, ಕನಸು-ಕಲ್ಪನೆ ಎಲ್ಲವನ್ನೂ ಒಳಗೊಂಡಿರುವ ಚಿತ್ರ.

ಜೊತೆಗೆ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಹಾಡು, ಡ್ಯಾನ್ಸ್‌, ಫೈಟ್ಸ್‌, ರೋಮ್ಯಾನ್ಸ್‌ ಎಲ್ಲ ಅಂಶಗಳೂ ಇಲ್ಲಿ ಮೇಳೈಸಿವೆ. ಒಂದು ಒಳ್ಳೆಯ ಕಥೆ, ಸಂದೇಶವನ್ನು ಇಟ್ಟುಕೊಂಡು ಪಕ್ಕಾ ಕಮರ್ಷಿಯಲ್‌ನೊಂದಿಗೆ ಮನರಂಜನೆಯ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ.

Advertisement

ಏಪ್ರಿಲ್‌ ವೇಳೆಗೆ ಚಿತ್ರದ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಮಾಡುವ ಪ್ಲಾನ್‌ ಇದೆ’ ಎನ್ನುವ ರೇಖಾ, “ನಮ್ಮ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ ಇದೇ ಮೇ-ಜೂನ್‌ ವೇಳೆಗೆ “ಡೆಮೋ ಪೀಸ್‌’ ಜನರ ಮುಂದೆ ಬರಲಿದೆ. ನಟನೆ ಜೊತೆಗೆ ನಿರ್ಮಾಣಕ್ಕಿಳಿದ ರೇಖಾ ಆ ಅನುಭವ ಕುರಿತು ಹೇಳುವುದಿಷ್ಟು. “ನಟಿಯಾಗಿದ್ದಾಗ ನನ್ನ ಕೆಲಸ ಸುಲಭವಾಗಿತ್ತು.

ನಿರ್ಮಾಪಕರು ಕೊಡುವ ಸಂಭಾವನೆ ಪಡೆದು, ನಿರ್ದೇಶಕರು ಹೇಳಿದಂತೆ ಕೆಲಸ ಮಾಡುತ್ತಿದ್ದೆ. ಆದರೆ ಈಗ ನಿರ್ಮಾಪಕಿಯಾದ ಬಳಿಕ ಆ ಜವಾಬ್ದಾರಿ ಹೆಚ್ಚಾಗಿದೆ. ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸುತ್ತಿರಬೇಕು.

ಚಿತ್ರದ ಕಥೆ, ಕಲಾವಿದರು, ತಂತ್ರಜ್ಞರು ಏನೆಲ್ಲಾ ಕೇಳುತ್ತಾರೋ, ಅದೆಲ್ಲವನ್ನೂ ಒದಗಿಸಿಕೊಡಬೇಕು. ಚಿತ್ರ ನಿರ್ಮಾಣ ಅನ್ನೋದು ದೊಡ್ಡ ಜವಾಬ್ದಾರಿ. ಮೊದಲ ನಿರ್ಮಾಣದ ಚಿತ್ರ ಆಗಿರುವುದರಿಂದ ಪ್ರತಿದಿನ ಹೊಸ ಹೊಸ ಅನುಭವ ಕಲಿಸಿಕೊಡುತ್ತಿದೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ರೇಖಾ.

Advertisement

Udayavani is now on Telegram. Click here to join our channel and stay updated with the latest news.

Next