Advertisement
ಮನೆಗೆ ಬೇಕಾಗುವ ಸಾಮಾನುಗಳನ್ನು ತರಲು ಹೇಳಿದರೆ ಕೆಲವನ್ನು ಮಾತ್ರ ತರುವುದು, ಉಳಿದವುಗಳನ್ನು ತರಲಿಲ್ಲ ಎಂದು ಹೇಳುತ್ತಿದ್ದರು. ಕಾಲ ಕಳೆದಂತೆ ಅವರು ಹಣಕಾಸಿನ ವ್ಯವಹಾರದಲ್ಲಿ ತಪ್ಪಲಾರಂಭಿಸಿದರು. ಕೆಲವೂಮ್ಮೆ ಹೊರಗೆ ಹೋಗಿ ಬರುವಾಗ ಮನೆಗೆ ಬರುವ ದಾರಿ ತಿಳಿಯದೆ ಪರದಾಡುತ್ತಿದ್ದರು. ಸಮಯ ಕಳೆದಂತೆ ಮನೆಯಲ್ಲೂ ಅವರಿಗೆ ಯಾವ ಕೋಣೆ ಯಾರದ್ದು ಮತ್ತು ಸ್ನಾನದ ಕೋಣೆ ಯಾವುದು ಎನ್ನುವ ಬಗ್ಗೆ ಗೊಂದಲವಾಗುತ್ತಿತ್ತು.
ಡಿಮೆನ್ಶಿಯಾ ಎನ್ನುವುದು ಒಂದು ನಿರ್ದಿಷ್ಟ ಕಾಯಿಲೆ ಅಲ್ಲ. ಮಿದುಳಿನ ತೊಂದರೆಯ ಕಾರಣವಾಗಿ ಉಂಟಾಗುವ ಬಹುಮುಖ ಅಸ್ವಾಸ್ಥ್ಯಗಳ ವಿವಿಧ ಲಕ್ಷಣಗಳ ಪುಂಜವನ್ನು ಡಿಮೆನ್ಶಿಯಾ ಎಂದು ಗುರುತಿಸಲಾಗಿದೆ. ಮಿದುಳಿನ ಕೋಶಗಳಿಗಾಗುವ ಹಾನಿ ಡಿಮೆನ್ಶಿಯಾಗೆ ಕಾರಣವಾಗಿದೆ. ಈ ಹಾನಿಯಿಂದಾಗಿ ಮಿದುಳಿನ ಕೋಶಗಳ ಪರಸ್ಪರ ಸಂವಹನ ಕಡಿದು ಹೋಗುತ್ತದೆ. ಹೀಗೆ ಸಹಜ ಸಂವಹನ ಅಸಾಧ್ಯವಾದಾಗ ವ್ಯಕ್ತಿಯ ಆಲೋಚನಾಶಕ್ತಿ, ವರ್ತನೆ (ನಡವಳಿಕೆ) ಹಾಗೂ ಭಾವನೆಗಳ ಮೇಲೆ ವ್ಯತ್ತಿರಿಕ್ತ ಪರಿಣಾಮವಾಗುತ್ತದೆ. ಇದರಿಂದ ವ್ಯಕ್ತಿಗೆ ತನ್ನ ದೈನಂದಿನ ಚಟುವಟಿಕೆಗಳನ್ನು, ಕೆಲಸಗಳನ್ನು, ಸಾಮಾಜಿಕ ಜವಾಬ್ದಾರಿಯನ್ನು ಸಹಜವಾಗಿ ನಿರ್ವಹಿಸಲಾಗುವುದಿಲ್ಲ.
ಸರಿಯಾಗಿ ಹೇಳುವುದಾದರೆ ಇದು ದೀರ್ಘಕಾಲದಿಂದ ನಿಧಾನವಾಗಿ ಬೆಳೆದುಬರುವ ಕಾಯಿಲೆಯಾಗಿದ್ದು, ಪರಾಕಾಷ್ಠೆಗೆ ತಲುಪುವಾಗ ಬಹುಮುಖ ಬೌದ್ಧಿಕ ಅಸ್ವಸ್ಥತೆಯ ಲಕ್ಷಣಗಳು ಗೋಚರಿಸಲಾರಂಭಿಸುತ್ತವೆ. ನೆನಪಿನ ಶಕ್ತಿ, ಸ್ಮರಣ ಶಕ್ತಿ (Memory), ಆಲೋಚನಾ ಶಕ್ತಿ ಕುಂದುವುದು, ಗ್ರಹಣ ಶಕ್ತಿ ಕ್ಷೀಣಿಸುವುದು, ಲೆಕ್ಕಾಚಾರ ತಪ್ಪುವುದು (Calculation), ಹೊಸದನ್ನು ಕಲಿಯಲು ಸಾಧ್ಯವಾಗದಿರುವುದು (New Learning), ಹದತಪ್ಪಿದ ಭಾಷಾ ಕೌಶಲ (Language), ನಿರ್ಧಾರ ಮಾಡುವ ಶಕ್ತಿ ಕುಂಠಿತವಾಗುವುದು, ದಿನಚರಿಯ ಅರಿವು (ಓರಿಯಂಟೇಶನ್) ಹೀಗೆ ಬಹುಮುಖ ಬೌದ್ಧಿಕ ಕಾರ್ಯನಿರ್ವಹಣ ಸಾಮರ್ಥ್ಯದಲ್ಲಿ ಗಣನೀಯ ಪ್ರಮಾಣದ ಕೊರತೆಗೆ ಕಾರಣವಾಗುತ್ತದೆ. ಜತೆಗೆ ವ್ಯಕ್ತಿಯು ತನ್ನ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಕಳೆದುಕೊಂಡು ಅತಿಯಾಗಿ ಸಿಟ್ಟು ಮಾಡುತ್ತಾನೆ, ಅಳುತ್ತಾನೆ ಅಥವಾ ಅತೀವ ಗಾಬರಿಯಾಗುತ್ತಾನೆ. ಸಮಾಜದಲ್ಲಿ ಆತನ ನಡತೆ ಭಿನ್ನವಾಗಲಾರಂಭಿಸುತ್ತದೆ. ಯಾವುದೇ ಉತ್ಸಾಹವಿಲ್ಲದೆ ಸುಮ್ಮನಿರಲಾರಂಭಿಸುತ್ತಾನೆ.
Related Articles
ಈ ಮೇಲಿನ ಎಲ್ಲ ಲಕ್ಷಣಗಳ ಬಗ್ಗೆ ನೀವು ಎಲ್ಲೋ ಕೇಳಿರಬಹುದು, ನೋಡಿರಬಹುದು. ನಿಮ್ಮ ಅಥವಾ ಸಂಬಂಧಿಕರ ಮನೆಯಲ್ಲಿ ಈ ರೀತಿ ಆಗಿರುವುದನ್ನು ಕಂಡಿರಬಹುದು. ಇದು ಸಹಜವಾದ ವೃದ್ಧಾಪ್ಯವಲ್ಲ, ಇದನ್ನು ಡಿಮೆನ್ಶಿಯಾ ಅನ್ನುತ್ತಾರೆ. ಡಿಮೆನ್ಶಿಯಾಗೆ ಕನ್ನಡದಲ್ಲಿ ಸಮಾನಾರ್ಥಕ ಪದವಿಲ್ಲ. ಆದರೆ ಸಾಮಾನ್ಯವಾಗಿ ಮರೆಗುಳಿತನ ಎಂದು ಜನರು ಹೇಳುತ್ತಾರೆ. ಆದರೆ ಮರೆಗುಳಿತನದಲ್ಲಿ ಕೇವಲ ನೆನಪಿನ ಶಕ್ತಿ ಮಾತ್ರ ಕುಂಠಿತಗೊಳ್ಳುತ್ತದೆ. ಡಿಮೆನ್ಶಿಯಾದಲ್ಲಿ ಸ್ಮರಣಶಕ್ತಿ ಮಾತ್ರವಲ್ಲದೆ ಇತರ ಬೌದ್ಧಿಕ ಶಕ್ತಿಗಳು ತೊಂದರೆಗೊಳಗಾಗುತ್ತವೆ.
Advertisement
ಡಿಮೆನ್ಶಿಯಾ ಯಾರಿಗೆ ಬರಬಹುದು?ಡಿಮೆನ್ಶಿಯಾ ಯಾರಿಗೂ ಬರಬಹುದು. ಸಾಮಾನ್ಯವಾಗಿ ಇದು 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಕಂಡು ಬರುವುದು. ಇತ್ತೀಚಿನ ವರ್ಷಗಳಲ್ಲಿ ಜನತೆಯ ಆಯಸ್ಸು ಹೆಚ್ಚಾಗುತ್ತಾ ಹೋದಂತೆ, ಇಳಿವಯಸ್ಸಿನ ಕಾಯಿಲೆಗಳೂ ಹೆಚ್ಚುತ್ತ ಹೋಗುತ್ತವೆ. ಅವುಗಳಲ್ಲಿ ಡಿಮೆನ್ಶಿಯಾ ಕೂಡ ಒಂದು. ಇದು 65ರಿಂದ 74 ವರ್ಷದ ಪ್ರಾಯದವರಲ್ಲಿ ಶೇ.3 ಜನರಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು 84ಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಶೇ.47 ಜನರಲ್ಲಿ ಕಂಡು ಬರುತ್ತದೆ. ನೆನಪಿಡಿ: ಇಳಿ ವಯಸ್ಸಿನ ಹೆಚ್ಚಿನ ಜನರ ಬುದ್ಧಿ ಸಹಜವಾಗಿರುತ್ತದೆ. ಡಿಮೆನ್ಶಿಯಾ ಇಳಿ ವಯಸ್ಸಿನ ಸಹಜ ಪ್ರಕ್ರಿಯೆಯಲ್ಲ. ಇದು ಒಂದು ಕಾಯಿಲೆ. ಇದರಿಂದ ಎಷ್ಟು ಜನ ಬಳಲುತ್ತಿದ್ದಾರೆ?
2010ರ ಒಂದು ಅಧ್ಯಯನದ ಪ್ರಕಾರ ವಿಶ್ವದಲ್ಲಿ ಸುಮಾರು 3.5 ಕೋಟಿಗಿಂತ ಹೆಚ್ಚು ಜನರು ಇದರಿಂದ ಬಳಲುತ್ತಿದ್ದರು; ಇತ್ತೀಚಿನ ವರದಿಯ ಪ್ರಕಾರ ಸುಮಾರು 5 ಕೋಟಿ ಜನರು ಇದರಿಂದ ಬಳಲುತ್ತಿದ್ದಾರೆ ಹಾಗೂ ಈ ಸಂಖ್ಯೆಯು ಮೂರು ಪಟ್ಟಾಗಿ, 2050ರಲ್ಲಿ 15 ಕೋಟಿ ಜನ ಇದರಿಂದ ಬಳಲುವ ಸಾಧ್ಯತೆಗಳಿವೆ. 2010ರ ಅಧ್ಯಯನದಲ್ಲಿ ಕಂಡು ಬಂದ ಇನ್ನೊಂದು ಅಂಶವೆಂದರೆ ಡಿಮೆನ್ಶಿಯಾದಿಂದ ಬಳಲುತ್ತಿರುವವರಲ್ಲಿ ಶೇ.58 ಜನ ಕೆಳ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಇದ್ದಾರೆ. ಈ ಸಂಖ್ಯೆ 2050ರ ಹೊತ್ತಿಗೆ ಶೇ. 71ರಷ್ಟಾಗುತ್ತದೆ. ಪ್ರತಿ ಮೂರು ಸೆಕೆಂಡಿಗೆ ಪ್ರಪಂಚದಲ್ಲಿ ಯಾರೋ ಒಬ್ಬರು ಡಿಮೆನ್ಶಿಯಾಗೆ ತುತ್ತಾಗುತ್ತಾರೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟಂಬರ್ 21ನ್ನು ವಿಶ್ವ ಅಲ್ಜೀಮರ್ಸ್ ದಿನವಾಗಿ ಆಚರಿಸಲಾಗುತ್ತದೆ. ಸೆಪ್ಟಂಬರ್ ತಿಂಗಳನ್ನು ಅಲ್ಜೀಮರ್ಸ್ ತಿಂಗಳು ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯ ವಾಕ್ಯ: ಡಿಮೆನ್ಶಿಯಾ ಬಗ್ಗೆ ಮಾತನಾಡೋಣ: ಕಳಂಕವನ್ನು ಕೊನೆಗಾಣಿಸೋಣ (Let’s Talk About Dementia: End The Stigma). ಆಚರಣೆಯ ಮುಖ್ಯ ಗುರಿಗಳೆಂದರೆ: ಡಿಮೆನ್ಶಿಯಾ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿಸುವುದು, ಇದರ ಬಗ್ಗೆಯಿರುವ ತಪ್ಪು ನಂಬಿಕೆ, ಭಯ ಮತ್ತು ಕಳಂಕವನ್ನು ಅಳಿಸುವುದು ಹಾಗೂ ಇದರಿಂದ ಬಳಲುತ್ತಿರುವವರನ್ನು ಆದಷ್ಟು ಬೇಗ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ಪ್ರೋತ್ಸಾಹಿಸುವುದು. ಇದರ ಲಕ್ಷಣಗಳೇನು, ಗುರುತಿಸುವುದು ಹೇಗೆ?
ಈ ಕಾಯಿಲೆಯ ಲಕ್ಷಣಗಳು ಮೇಲಿನ ಉದಾಹರಣೆಯಲ್ಲಿ ಹೇಳಿದಂತೆ ಕೇವಲ ಸ್ಮರಣಶಕ್ತಿಯ ಕೊರತೆಗೆ ಸೀಮಿತವಾಗದೆ ಬುದ್ಧಿಶಕ್ತಿಯ ಇತರ ಅಯಾಮಗಳನ್ನು ಆವರಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕ್ರಮೇಣ ಕಂಡು ಬಂದು, ಕಾಲ ಕಳೆದಂತೆ ಹೆಚ್ಚುತ್ತ ಹೋಗುತ್ತವೆ. ಈ ಕಾಯಿಲೆಯನ್ನು ಅರ್ಥಮಾಡಿಕೊಳ್ಳಲು ಈ ಕೆಳಗಿನ ಹಂತಗಳಾಗಿ ವಿಂಗಡಿಸಬಹುದು. 1) ಅಲ್ಪಪ್ರಮಾಣದ ಬೌದ್ಧಿಕ ತೊಂದರೆ: ಈ ಹಂತದಲ್ಲಿ 65 ವಯಸ್ಸಿನ ಅನಂತರ ವ್ಯಕ್ತಿಗೆ ಕೆಲವೇ ವಿಷಯಗಳಲ್ಲಿ ತೊಂದರೆಯಾಗುತ್ತದೆ. ಉದಾ: ಕೆಲವೇ ವಿಷಯಗಳ ಮರೆವು ಹಾಗೂ ಹೆಸರುಗಳು ನೆನಪಿಗೆ ಬಾರದಿರುವುದು. ಆದರೆ ದೈನಂದಿನ ಚಟುವಟಿಕೆಗಳಲ್ಲಿ, ಕೆಲಸಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ. ಇದನ್ನು ಕಾಯಿಲೆ ಪ್ರಾರಂಭವಾಗುವ ಮುನ್ಸೂಚನೆ ಎಂದು ಪರಿಗಣಿಸಬಹುದು. ಏಕೆಂದರೆ ಈ ರೀತಿಯ ಲಕ್ಷಣಗಳ ಶೇ. 70ರಷ್ಟು ಜನ ಮುಂದಿನ ದಿನಗಳಲ್ಲಿ ಡಿಮೆನ್ಶಿಯಾದಿಂದ ಬಳಲುತ್ತಾರೆ. 2) ಮೊದಲ ಹಂತ: ಈ ಹಂತದಲ್ಲಿ ವ್ಯಕ್ತಿಯ ಬೌದ್ಧಿಕ ತೊಂದರೆಗಳ ಬಗ್ಗೆ ಮನೆಯವರಿಗೆ ಹಾಗೂ ಇತರರಿಗೆ ತಿಳಿಯಲಾರಂಭಿಸುತ್ತದೆ. ಈ ಹಂತದಲ್ಲಿ ಕಂಡುಬರುವ ಲಕ್ಷಣಗಳೆಂದರೆ: ಈಗ ಹೇಳಿದ್ದು ಮರುಕ್ಷಣ ಮರೆಯುವುದು, ಶಬ್ದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು, ಕೆಲಸವೊಂದರ ರೂಪುರೇಷೆ ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸಲು ಕಷ್ಟವಾಗುವುದು. ಮನೆಯವರು ಗುರುತಿಸುವುದು ಹೇಗೆ? ಮೊದಲನೆಯದಾಗಿ ಗಮನಕ್ಕೆ ಬರುವ ತೊಂದರೆ ಎಂದರೆ ಸ್ವತಂತ್ರವಾಗಿ ನಡೆಸುವ ಹಣಕಾಸಿನ ವ್ಯವಹಾರದಲ್ಲಿ ತಪ್ಪುಗಳಾಗುವುದು, ಅನಂತರ ಕೆಲಸಗಳಲ್ಲಿ ತಪ್ಪುಗಳಾಗುವುದು. ಈ ಕುರಿತು ವ್ಯಕ್ತಿಯ ಸಹೋದ್ಯೋಗಿಯೋ ಅಥವಾ ಮೇಲಧಿಕಾರಿಗಳ್ಳೋ ದೂರು ನೀಡುತ್ತಾರೆ. ಹೊಸ ಸ್ಥಳಗಳಲ್ಲಿ ದಾರಿ ತಪ್ಪುವುದು, ಮಾಡಿದ ಕೆಲಸ ಮಾಡಲಿಲ್ಲ ಎಂದು ಪುನಃ ಮಾಡುವುದು- ಮೇಲೆ ನಮೂದಿಸಿದಂತೆ ವ್ಯಕ್ತಿ ತಿಂಡಿ ತಿಂದಿದ್ದರೂ, ತಾನು ತಿಂಡಿ ತಿನ್ನಲಿಲ್ಲ ಎಂದು ಪದೇ ಪದೆ ಬಂದು ತಿಂಡಿ ಕೊಡುವಂತೆ ಕೇಳುವುದು, ವ್ಯಕ್ತಿತ್ವದಲ್ಲಿ ಬದಲಾವಣೆಗಳು ಆಗುವುದು- ಉದಾ: ಬೇಗ ಸಿಟ್ಟು ಬರುವುದು, ಬೇಗ ಭಾವುಕರಾಗುವುದು, ಒಬ್ಬಂಟಿಯಾಗಿರಲು ಬಯಸುವುದು, ಮನೆಯವರು ವ್ಯಕ್ತಿಗೆ ಆತನ ಕೆಲಸಗಳನ್ನೇ ಪುನಃ ಪುನಃ ನೆನಪಿಸುವ ಪರಿಸ್ಥಿತಿ ಬಂದಾಗ. 3) ಎರಡನೇ ಹಂತ: ಇದರಲ್ಲಿ ಮೊದಲ ಹಂತದಲ್ಲಿ ಕಂಡು ಬಂದ ಲಕ್ಷಣಗಳೆಲ್ಲ ಗಂಭೀರ ಪ್ರಮಾಣದಲ್ಲಿ ಕಾಣಬರುತ್ತವೆ. ಹೊಸ ವಿಷಯಗಳನ್ನು ಕಲಿಯಲು, ತಿಳಿದುಕೊಳ್ಳಲು ಅವರಿಗೆ ತುಂಬಾ ತೊಂದರೆಯಾಗುತ್ತದೆ. ಮನೆಯವರು ಗುರುತಿಸುವುದು ಹೇಗೆ? ಮೊದಲನೇ ಹಂತಕ್ಕಿಂತ ಕಾಯಿಲೆ ಗಂಭೀರ ರೀತಿಯಲ್ಲಿ ತೊಂದರೆ ಉಂಟು ಮಾಡುತ್ತದೆ. ಲೆಕ್ಕಾಚಾರಗಳಲ್ಲಿ ತಪ್ಪುಗಳಾಗುವುದು, ಸಮಾಜದಲ್ಲಿ ವರ್ತಿಸುವ ರೀತಿ ಬದಲಾಗುತ್ತದೆ, ಆತ ಮನೆಯ ಹೊರಗೆ ಕೆಲಸ ಮಾಡಲಾರ, ಆತನನ್ನು ಒಂಟಿಯಾಗಿ ಬಿಡಲಾಗುವುದಿಲ್ಲ. ತನ್ನ ಮನೆಯ ವಿಳಾಸ ಗೊತ್ತಾಗುವುದಿಲ್ಲ. ಸಣ್ಣಪುಟ್ಟ ಮನೆಯ ಕೆಲಸಗಳನ್ನು ಮಾಡಬಹುದು. ಆದರೆ ವೈಯಕ್ತಿಕ ಸ್ವತ್ಛತೆ ಹಾಗೂ ಸಣ್ಣ ಕೆಲಸಗಳಿಗಾಗಿ ಇತರರ ಸಹಾಯ ಪಡೆಯಬೇಕಾಗುತ್ತದೆ. 4) ಮೂರನೇ ಹಂತ: ಇದು ಕೊನೆಯ ಹಂತವಾಗಿದ್ದು ಇದರಲ್ಲಿ ವ್ಯಕ್ತಿ ಎಲ್ಲ ಚಟುವಟಿಕೆಗಳಿಗೆ ಮನೆಯವರನ್ನು ಅವಲಂಬಿಸಿರುತ್ತಾನೆ. ದಿನದ 24 ಗಂಟೆಯೂ ಆತನನ್ನು ನೋಡಿಕೊಳ್ಳಬೇಕಾಗುತ್ತದೆ. ಮೇಲಿನ ಉದಾಹರಣೆಯಲ್ಲಿ ತಿಳಿಸಿದಂತೆ ಮಲ-ಮೂತ್ರ ಹೋಗಿದ್ದು ಗೊತ್ತಾಗುವುದಿಲ್ಲ, ಯಾರನ್ನೂ ಗುರುತು ಹಿಡಿಯುವುದಿಲ್ಲ, ದಿನ-ರಾತ್ರಿ ವ್ಯತ್ಯಾಸ ತಿಳಿಯುವುದಿಲ್ಲ, ಹಾಸಿಗೆಯಿಂದ ಎದ್ದೇಳಲಾಗುವುದಿಲ್ಲ. ಡಿಮೆನ್ಶಿಯಾ ಬರಲು ಕಾರಣಗಳೇನು?
ಮೊದಲೇ ಹೇಳಿದ ಹಾಗೆ ಡಿಮೆನ್ಶಿಯಾ ಎನ್ನುವುದು ಬಹುಮುಖ ಅಸ್ವಾಸ್ಥ್ಯದ ವಿವಿಧ ಲಕ್ಷಣಗಳ ಪುಂಜವಾಗಿದೆ. ಇದರ ಕಾರಣಗಳು ಹಲವಾರು.
1. ಸರಿಪಡಿಸಲು ಸಾಧ್ಯವಾಗುವ ಕಾರಣಗಳು (Reversible Causes): ಅಂದರೆ ಈ ಗುಂಪಿನಲ್ಲಿ ನಮೂದಿಸಿದ ಕಾರಣಗಳಿಂದಾಗಿ ಡಿಮೆನ್ಶಿಯಾ ಆಗಿದ್ದರೆ, ಸೂಕ್ತ ಚಿಕಿತ್ಸೆಯಿಂದ ರೋಗಿಯಲ್ಲಿ ಸಾಕಷ್ಟು ಸುಧಾರಣೆ ತರಬಹುದು. ಈ ಕಾರಣಗಳೆಂದರೆ: ವಿಟಮಿನ್ ಬಿ 12ರ ಕೊರತೆ (Vitamin B12 Deficiency), ಫೋಲಿಕ್ ಆ್ಯಸಿಡ್ (Folic Acid) ಪೋಷಕಾಂಶದ ಕೊರತೆ, ಥೈರಾಯಿಡ್ ಹಾರ್ಮೋನಿನ (Thyroid Hormone) ಕೊರತೆ, ಸಿಫಿಲಿಸ್ (Syphilis) ರೋಗ, ಏಡ್ಸ್ (Aids) ರೋಗ, ಖನ್ನತೆಯಿಂದಾಗಿ ಮರೆಗುಳಿತನ ಕಂಡು ಬರುವುದು, ವಿವಿಧ ಪೋಷಕಾಂಶಗಳ ಕೊರತೆ, ಮಾದಕ ವಸ್ತುಗಳ ಸೇವನೆಯಿಂದ ಕಂಡುಬರುವ ಮರೆಗುಳಿತನ. 2. ಸ್ಥಿರ, ಬದಲಾಗದ ಡಿಮೆನ್ಶಿಯಾಗಳು (Stable Dementias)):
ಈ ಗುಂಪಿನಲ್ಲಿ ನಮೂದಿಸಿದ ಕಾರಣಗಳಿಂದಾಗಿ ಡಿಮೆನ್ಶಿಯಾ ಆಗಿದ್ದರೆ, ವ್ಯಕ್ತಿಯ ಬೌದ್ಧಿಕ ಶಕ್ತಿಯ ನ್ಯೂನತೆಯು ಹಲವಾರು ವರ್ಷಗಳವರೆಗೆ ಹಾಗೆಯೇ ಸ್ಥಿರವಾಗಿ ಉಳಿದುಕೊಳ್ಳುತ್ತದೆ. ಅದು ಸುಧಾರಣೆಯಾಗುವುದೂ ಇಲ್ಲ, ಇನ್ನಷ್ಟು ಹದಗೆಡುವುದೂ ಇಲ್ಲ. ಈ ತರಹದ ಡಿಮೆನ್ಶಿಯಾದ ಕಾರಣಗಳೆಂದರೆ: ಮಿದುಳಿನ ಗಾಯ- ಆಕ್ಸಿಡೆಂಟ್ (Accident)), ಸೋಂಕು (Infection), ಸ್ಟ್ರೋಕ್ (Stroke), ಮಿದುಳಿನಲ್ಲಿ ರಕ್ತ ಸ್ರಾವ, ಮಿದುಳಿನ ಶಸ್ತ್ರಚಿಕಿತ್ಸೆ. ಇವುಗಳಿಂದಾಗಿ ಮಿದುಳಿನ ಯಾವುದೋ ಒಂದು ಭಾಗ ಹಾನಿಗೀಡಾಗಿ ನಿಷ್ಕ್ರಿಯಗೊಂಡು ಅದರ ನಿಯಂತ್ರಣದಲ್ಲಿದ್ದ ಬೌದ್ಧಿಕ ಶಕ್ತಿ ಹಾನಿಗೀಡಾಗುತ್ತದೆ. 3. ಮಂದಗತಿಯಲ್ಲಿ ಮುಂದುವರಿಯುವ ಡಿಮೆನ್ಶಿಯಾಗಳು (Slowly Progressive Dementias):
ಈ ಗುಂಪಿನಲ್ಲಿ ನಮೂದಿಸಿದ ಕಾರಣಗಳಿಂದ ಡಿಮೆನ್ಶಿಯಾ ಆಗಿದ್ದರೆ: ವ್ಯಕ್ತಿಯ ಬೌದ್ಧಿಕ ಶಕ್ತಿಯಲ್ಲಿ ನಿಧಾನವಾಗಿ ತೊಂದರೆ ಆರಂಭವಾಗಿ ಹಾಗೆಯೇ ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ ಅಥವಾ ಹದಗೆಡುತ್ತಾ ಹೋಗುತ್ತದೆ. ಆಡು ಭಾಷೆಯಲ್ಲಿ ಹೇಳುವುದಾದರೆ ಮಿದುಳು ನಿಧಾನವಾಗಿ ಸವೆಯುತ್ತ ಬರುತ್ತದೆ. ಆದ್ದರಿಂದ ಲಕ್ಷಣಗಳು ನಿಧಾನವಾಗಿ ಹದಗೆಡುತ್ತವೆ. ಇದರಲ್ಲಿ ಕಂಡುಬರುವ ಕಾಯಿಲೆಗಳೆಂದರೆ: ಅಲ್ಜೀಮರ್ಸ್ ಕಾಯಿಲೆ, ವಾಸ್ಕಾಲರ್ ಡಿಮೆನ್ಶಿಯಾ ಇತ್ಯಾದಿ. ಇವುಗಳನ್ನು ಕೆಳಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಅಲ್ಜೀಮರ್ಸ್ ಕಾಯಿಲೆ (Alzheimer’s Disease)
ಇದು ಅತಿ ಸಾಮಾನ್ಯವಾಗಿ ಕಂಡುಬರುವ ಡಿಮೆನ್ಶಿಯಾ. ಎಲ್ಲ ಡಿಮೆನ್ಶಿಯಾಗಳಲ್ಲಿ ಶೇ. 75 ಡಿಮೆನ್ಶಿಯಾಗಳಿಗೆ ಅಲ್ಜೀಮರ್ಸ್ ಕಾಯಿಲೆ ಕಾರಣವಾಗಿದೆ. ಇದರ ಮುಖ್ಯ ಲಕ್ಷಣಗಳೆಂದರೆ, ಇತ್ತೀಚಿನ ವಿಷಯಗಳ ಮರೆವು. ಜತೆಗೆ ಅವರಿಗೆ ದಾರಿ ಹುಡುಕುವುದು ಕಷ್ಟವಾಗುತ್ತದೆ. ಗ್ರಹಣ ಶಕ್ತಿ ಕ್ಷೀಣಿಸುತ್ತದೆ, ಸನ್ನಿವೇಶವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸಲು ಆಗುವುದಿಲ್ಲ. ಮನೆಯವರು ಅಲ್ಜೀಮರ್ಸ್ ಕಾಯಿಲೆಯನ್ನು ಗುರುತಿಸುವುದು ಹೇಗೆಂದರೆ: ಮೇಲೆ ನಮೂದಿಸಿದ ಹಾಗೆ ಪದೇ ಪದೆ ಮಾಡಿದ ಕೆಲಸವನ್ನು ಮಾಡಲಿಲ್ಲ ಅಥವಾ ತಿಂಡಿ ತಿನ್ನಲಿಲ್ಲ ಎಂದು ಹೇಳುವುದು, ದಾರಿ ತಪ್ಪಿ ಎಲ್ಲೆಲ್ಲೋ ಅಲೆಯುವುದು, ಶಬ್ದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು, ಹಣಕಾಸಿನ ವ್ಯವಹಾರ ಕಷ್ಟವಾಗುವುದು. ವಾಸ್ಕಾಲರ್ ಡಿಮೆನ್ಶಿಯಾ (Vascular Dementia)
ಇದು ಮಿದುಳಿನ ರಕ್ತನಾಳಗಳಲ್ಲಿನ ತೊಂದರೆಯಿಂದಾಗಿ ಕಂಡು ಬರುವ ಡಿಮೆನ್ಶಿಯಾ. ಅಸಮರ್ಪಕ ರಕ್ತದ ಹರಿವಿನ ಕಾರಣ ದೇಹದ ಯಾವುದೇ ಭಾಗದ ಕೋಶಗಳು ಹಾನಿಗೊಳಗಾಗಿ ಕೊನೆಗೆ ನಾಶವಾಗಬಲ್ಲವು. ಹೀಗಿರುವಾಗ ರಕ್ತನಾಳಗಳ ಬೃಹಜ್ಜಾಲ ಹೊಂದಿದ, ಅದರಲ್ಲೂ ವಿಶೇಷವಾಗಿ ತುಂಬ ನಾಜೂಕಾದ ಮಿದುಳಿಗೆ ಅಸಮರ್ಪಕ ರಕ್ತ ಪೂರೈಕೆಯಿಂದಾಗುವ ಹಾನಿ ಅಷ್ಟಿಷ್ಟಲ್ಲ. ಇದರಲ್ಲಿ ರಕ್ತನಾಳ ಒಡೆದು ಅಥವಾ ರಕ್ತ ಹೆಪ್ಪುಗಟ್ಟಿ ಮಿದುಳಿನ ಭಾಗವೊಂದು ಹಾಳಾಗುತ್ತದೆ. ಆ ಭಾಗಕ್ಕೆ ಸಂಬಂಧ ಪಟ್ಟಂತೆ ಲಕ್ಷಣಗಳು ಕಂಡುಬರುತ್ತವೆ. ಸ್ವಲ್ಪ ತಿಂಗಳು ಅದೇ ರೀತಿ ಇದ್ದು ಮತ್ತೂಮ್ಮೆ ರಕ್ತನಾಳಗಳಲ್ಲಿ ತೊಂದರೆಯಾಗಿ ಇನ್ನಷ್ಟು ಭಾಗ ಹಾನಿಗೀಡಾಗುತ್ತದೆ. ಇದೇ ತರಹ ಕಾಯಿಲೆ ಮುಂದುವರಿಯುತ್ತ ಹೋಗುತ್ತದೆ. ಈ ರಕ್ತನಾಳಗಳಲ್ಲಿ ತೊಂದರೆಗಳಾಗಲು ಕಾರಣವೆಂದರೆ: ತುಂಬಾಕು ಸೇವನೆ, ರಕ್ತದೊತ್ತಡ (Hypertension), ಮಧುಮೇಹ (Diabetes Mellitus), ಕೊಲೆಸ್ಟೆರಾಲ್ (Cholesterol)/ ಕೊಬ್ಬಿನ ಅಂಶ ಹೆಚ್ಚಾಗುವುದು, ಹೃದಯ ರಚನೆಯಲ್ಲಿ / ಕಾರ್ಯದಲ್ಲಿ ತೊಂದರೆಗಳು. ಈ ತರಹದ ವ್ಯಕ್ತಿಗಳಲ್ಲಿ ಹೃದಯಾಘಾತ (Heart Attack) ಆಗಿರುವ ಹಿನ್ನೆಲೆ ಇರಬಹುದು ಮತ್ತು ಇವರಿಗೆ ಹೃದಯಾಘಾತದ ರೀತಿಯ ರಕ್ತನಾಳ ಸಂಬಂಧಿ ಕಾಯಿಲೆಗಳು ಭವಿಷ್ಯದಲ್ಲಿ ಕಂಡುಬರುವ ಸಾಧ್ಯತೆಗಳಿವೆ. ಮನೆಯವರು ಇದನ್ನು ಗುರುತಿಸುವುದು ಹೇಗೆಂದರೆ:
ವ್ಯಕ್ತಿಯು ಸ್ಟ್ರೋಕ್ ತರಹದ ಕಾಯಿಲೆಯಾದ ಅನಂತರದ ದಿನಗಳಲ್ಲಿ, ನೆನಪಿನ ಶಕ್ತಿ ಮತ್ತು ಇತರ ಬೌದ್ಧಿಕ ಸಾಮರ್ಥ್ಯಗಳಲ್ಲಿ ತೊಂದರೆಗಳು ಕಂಡು ಬರುತ್ತವೆ. ಬಳಿಕ ಸ್ವಲ್ಪ ತಿಂಗಳುಗಳವರೆಗೆ ಈ ತೊಂದರೆಗಳು ಸ್ವಲ್ಪಮಟ್ಟಿಗೆ ಸುಧಾರಣೆಯಾಗಬಹುದು. ಆದರೆ ಮತ್ತೂಮ್ಮೆ ರಕ್ತನಾಳಗಳಲ್ಲಿ ತೊಂದರೆ ಕಂಡುಬಂದು ಬೌದ್ಧಿಕ ಸಾಮರ್ಥ್ಯ ಮತ್ತಷ್ಟು ಹಾನಿಯಾಗುತ್ತದೆ. ಇದೇ ರೀತಿ ಮುಂದುವರಿಯುತ್ತದೆ. ಲೆವಿ ಬಾಡಿ ಡಿಮೆನ್ಶಿಯಾ(Lewy Body Dementia): ಈ ಕಾಯಿಲೆಯಲ್ಲಿ ಪ್ರಮುಖವಾಗಿ ವ್ಯಕ್ತಿಯ ಕಣ್ಣಿಗೆ ಏನೇನೊ ಕಾಣಿಸಲಾರಂಭಿಸುತ್ತದೆ ಮತ್ತು ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು ಕಂಡುಬರುತ್ತವೆ. ಅನಂತರ ಮರೆಗುಳಿತನ, ಮತ್ತಿತರ ಬೌದ್ಧಿಕ ಸಾಮರ್ಥ್ಯಗಳ ತೊಂದರೆಗಳು ಕಾಣಿಸುತ್ತವೆ. ಮನೆಯವರು ಇದನ್ನು ಗುರುತಿಸುವುದು ಹೇಗೆಂದರೆ: ಮೊದಲಿಗೆ ವ್ಯಕ್ತಿಯು ಮನೆಯಲ್ಲಿ ಜನ, ಪ್ರಾಣಿಗಳು ಓಡಾಡುತ್ತಿವೆ ಎಂದು ಹೇಳಿ ಅವುಗಳನ್ನು ಹೊಡೆದೋಡಿಸಲು, ಮಾತಾಡಿಸಲು ಪ್ರಯತ್ನಿಸುವುದು ಕಂಡುಬರುತ್ತದೆ. ಆದರೆ ಇತರರಿಗೆ ಜನ ಅಥವಾ ಪ್ರಾಣಿ ಕಂಡು ಬರುವುದಿಲ್ಲ. ಇದಕ್ಕೆ ಮಿದುಳಿನ ತೊಂದರೆಯೇ ಕಾರಣ.
ಇದರೊಂದಿಗೆ ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳು, ಅಂದರೆ ಕೈನಡುಕ, ಕೈಮರಗಟ್ಟುವುದು, ಎಲ್ಲ ಚಟುವಟಿಕೆಗಳೂ ನಿಧಾನಗತಿಯಲ್ಲಿ ನಡೆಯುವುದು ಕಂಡುಬರುತ್ತವೆ. ಇವೆಲ್ಲ ಕಂಡುಬಂದ ಅನಂತರದ ವಾರಗಳಲ್ಲಿ ಮರೆವು ಮತ್ತಿತರ ಬೌದ್ಧಿಕ ಸಾಮರ್ಥ್ಯದ ತೊಂದರೆಗಳು ಕಂಡುಬರುತ್ತವೆ. ಫ್ರಂಟೋಟೆಂಪೋರಲ್ ಡಿಮೆನ್ಶಿಯಾ (Frontotemporal Dementia): ಈ ಕಾಯಿಲೆಯಲ್ಲಿ ಪ್ರಮುಖವಾಗಿ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡುಬರುತ್ತದೆ ಮತ್ತು ಭಾಷಾ ಸಾಮರ್ಥ್ಯದಲ್ಲಿ ತೊಂದರೆಗಳು ಕಂಡುಬರುತ್ತವೆ. ಕಾಲ ಕಳೆದಂತೆ ಮರೆವು ಮತ್ತಿತರ ಬೌದ್ಧಿಕ ಸಾಮರ್ಥ್ಯಗಳಲ್ಲಿ ತೊಂದರೆಗಳು ತಲೆದೋರಲಾರಂಭಿಸುತ್ತವೆ. ಪ್ರೊಗ್ರೆಸ್ಸಿವ್ ಸುಪ್ರಾನ್ಯೂಕ್ಲಿಯರ್‌ಪಾಲ್ಸಿ (Progressive Supranuclear Palsy): ಈ ಕಾಯಿಲೆಯಲ್ಲಿ ಮುಖ್ಯವಾಗಿ ವ್ಯಕ್ತಿಗೆ ಕಣ್ಣಿನ ಚಲನೆಯಲ್ಲಿ (Eye Movements) ತೊಂದರೆಗಳು ಕಂಡು ಬರುತ್ತವೆ. ಇದರ ಜತೆಗೆ ಅವರಿಗೆ ನಡೆಯುವಾಗ ಸಮತೋಲನ ಕಾಯ್ದುಕೊಳ್ಳಲು ಕಷ್ಟವಾಗಿ ಪದೇ-ಪದೇ ಬೀಳುತ್ತಿರುತ್ತಾರೆ. ಮೇಲೆ ನಮೂದಿಸಿದ ಹಾಗೆ ಪಾರ್ಕಿನ್ಸನ್ (ಕಂಪನವ್ಯಾಧಿ) ತರಹದ ಲಕ್ಷಣಗಳು ಕಂಡುಬರಬಹುದು. ಇವೆಲ್ಲವುಗಳ ಜತೆಗೆ ಮರೆವು ಮತ್ತಿತರ ಬೌದ್ಧಿಕ ಸಾಮರ್ಥ್ಯಗಳಲ್ಲಿ ತೊಂದರೆಗಳು ಕಂಡುಬರುತ್ತವೆ. 3. ತ್ವರಿತಗತಿಯಲ್ಲಿ ಮುಂದುವರಿ ಯುವ ಡಿಮೆನ್ಶಿಯಾ (Rapidly Progressive Dementia): ಈ ಗುಂಪಿನ ಕಾಯಿಲೆಗಳು ಕೆಲವು ವಾರಗಳು ಅಥವಾ ತಿಂಗಳುಗಳಲ್ಲಿ ಕ್ಷಿಪ್ರವಾಗಿ ಹದಗೆಡುತ್ತವೆ. ಉದಾ: ಪ್ರಿಯಾನ್ ಕಾಯಿಲೆಗಳು (Prion Disease), ಮೇಲೆ ನಮೂದಿಸಿದ ಇತರ ಕಾಯಿಲೆಗಳು ಕೂಡ ತೀವ್ರಗತಿಯಲ್ಲಿ ಮುಂದುವರಿಯಬಹುದು. ಇವುಗಳನ್ನು ವೈದ್ಯರು
ಹೇಗೆ ಗುರುತಿಸುತ್ತಾರೆ?
ಈ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರಲ್ಲಿ ಹೋದಾಗ ಅವರು ವ್ಯಕ್ತಿಯ ಕಾಯಿಲೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತಾರೆ. ಅನಂತರ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯದ ಕೂಲಂಕಷ ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ. ಅನಂತರ ಪೌಷ್ಟಿಕಾಂಶಗಳ ಕೊರತೆ, ಇನ್‌ಫೆಕ್ಷನ್, ಹಾರ್ಮೋನುಗಳ ಕೊರತೆ ಏನಾದರೂ ಇದೆಯೇ ಎಂದು ವಿವಿಧ ಆಯಾಮಗಳಲ್ಲಿ ರಕ್ತ ಪರೀಕ್ಷೆ ಮಾಡುತ್ತಾರೆ. ಅನಂತರ ಮೆದುಳಿನ ಯಾವ ಭಾಗಗಳಲ್ಲಿ ಎಷ್ಟರಮಟ್ಟಿಗೆ ಹಾನಿಯಾಗಿದೆ ಹಾಗೂ ಮೆದುಳಿನಲ್ಲಿ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿಯಲು ಸಿ.ಟಿ. ಸ್ಕ್ಯಾನಿಂಗ್ ಅಥವಾ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸುತ್ತಾರೆ. ಈ ಎಲ್ಲ ಪರೀಕ್ಷೆಗಳ ಪರಿಣಾಮಗಳನ್ನು ತಿಳಿದು ಕಾಯಿಲೆ ಗುರುತಿಸಿ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡುತ್ತಾರೆ. ಇದಕ್ಕೆ ದೊರಕುವ
ಚಿಕಿತ್ಸೆಗಳು
ಮೇಲೆ ನಮೂದಿಸಿದ ಚಿಕಿತ್ಸೆ ದೊರಕುವ ಡಿಮೆನ್ಶಿಯಾಗಳಿಗೆ ಹೊರತುಪಡಿಸಿ ಬೇರೆ ಬಗೆಯ ಡಿಮೆನ್ಶಿಯಾಗಳನ್ನು ಗುಣಪಡಿಸುವ ಚಿಕಿತ್ಸೆಗಳು ಯಾವುದೂ ಇಲ್ಲ. ಆದರೆ ವ್ಯಕ್ತಿಯ ಜೀವನ ಸುಗಮಗೊಳಿಸಲು ಅಥವಾ ಕಾಯಿಲೆ ಹದಗೆಡುವುದನ್ನು ನಿಧಾನ ಗೊಳಿಸಲು ವಿವಿಧ ಚಿಕಿತ್ಸೆಗಳನ್ನು ಪ್ರಯತ್ನಿಸಬಹುದು. ನೆನಪಿನ ಶಕ್ತಿ ಹದಗೆಡುವುದನ್ನು ತಡೆಯಲು ಪ್ರಯತ್ನಿಸಬಹುದಾದ ಮಾತ್ರೆ ಗಳೆಂದರೆ: ಡೊನಪೆಜಿಲ್ ಮಿಮ್ಯಾಂಟೀನ್ ಇತ್ಯಾದಿ. ಇವುಗಳೊಂದಿಗೆ ವ್ಯಕ್ತಿಯ ನಿದ್ರೆ, ನಡವಳಿಕೆ ಸರಿಪಡಿಸಲು, ಗೊಂದಲ ನಿವಾರಣೆಗೆ ಸೂಕ್ತ ಮಾತ್ರೆಗಳನ್ನು ನೀಡಲಾಗುತ್ತದೆ. ಡಿಮೆನ್ಶಿಯಾದಲ್ಲಿ ಮನೆಯವರ ಪಾತ್ರ
ಡಿಮೆನ್ಶಿಯಾದಲ್ಲಿ ಮಾತ್ರೆ ಮತ್ತಿತರ
ಚಿಕಿತ್ಸೆಗಳಿಗಿಂತ ಮನೆಯವರ ಪಾತ್ರ ಮಹತ್ವದ್ದಾಗಿದೆ. ಮನೋರೋಗ ವೈದ್ಯರು ಡಿಮೆನ್ಶಿಯಾ ಪೀಡಿತರ ಮನೆಯವರಿಗೆ ವಿವಿಧ ಸಲಹೆ, ಮಾರ್ಗದರ್ಶನ ನೀಡುತ್ತಾರಲ್ಲದೆ ಅವರ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತಾರೆ. ಮನೆಯವರು ಡಿಮೆನ್ಶಿಯಾದಿಂದ ಬಳಲುವವರಿಗಾಗಿ ಈ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು. ದಿನಚರಿ:
ಪ್ರತಿದಿನ ನಾಲ್ಕೈದು ಬಾರಿಯಾದರು ಅವರಿಗೆ ದಿನ, ದಿನಾಂಕ, ಸಮಯ ಹೇಳುತ್ತಿರಬೇಕು. ಅವರಿಗೆ ಕಾಣುವಂತೆ ಕ್ಯಾಲೆಂಡರ್‌ಇಟ್ಟು ನೋಡಲು ಹೇಳುತ್ತಿರಬೇಕು. ಅವರೊಟ್ಟಿಗೆ ಸ್ಪಷ್ಟವಾಗಿ ಮತ್ತು ನಿಧಾನವಾಗಿ ಮಾತನಾಡಬೇಕು ಮತ್ತು ಒಂದು ಸಲ ಕೆಲವೇ ವಿಷಯಗಳನ್ನು ಮಾತ್ರ ಹೇಳಬೇಕು. ವೇಗವಾಗಿ ಮಾತನಾಡಿದಲ್ಲಿ ಅಥವಾ ತುಂಬ ವಿಷಯಗಳನ್ನು ಹೇಳಿದರೆ ಅವರಿಗೆ ಗೊಂದಲವಾಗುತ್ತದೆ. ಅವರು ಪದೇ ಪದೆ ಕೇಳಿದ್ದನ್ನೇ ಕೇಳುತ್ತಿದ್ದರೆ ಅವರಿಗೆ ವಿವರಿಸಿ ಹೇಳಿ ಮತ್ತು ಅವರ ಗಮನ ಬೇರೆ ಕಡೆಗೆ ತಿರುಗಿಸಿ. ಉದಾ: ಅವರನ್ನು ಬೇರೆ ಯಾವುದಾದರೂ ಕ್ರಿಯೆಯಲ್ಲಿ ತೊಡಗಿಸಿ- ಜತೆಗೆ ವಾಯು ವಿಹಾರಕ್ಕೆ ಕರೆದುಕೊಂಡು ಹೋಗುವುದು, ಹಳೆಯ ಫೋಟೋಗಳನ್ನು ತೋರಿಸುವುದು, ಅವರಿಗೆ ಇಷ್ಟವಾದ ಸಂಗೀತ ಕೇಳಿಸುವುದು ಅಥವಾ ಬಟ್ಟೆಗಳನ್ನು ಮಡಚುವುದು, ಪುಸ್ತಕಗಳನ್ನು ತೆಗೆದಿಡುವುದು, ಪೇಪರ್‌ಮಡಚಿಡುವುದು ಇತ್ಯಾದಿ ಸರಳವಾದ ಕೆಲಸಗಳನ್ನು ಮಾಡಲು ಹೇಳಿ. ಕೆಲವೊಮ್ಮೆ ಅವರು ಪದೇ ಪದೆ ಕೇಳುವ ಪ್ರಶ್ನೆಗಳನ್ನು ನಿರ್ಲಕ್ಷಿಸಿ. ದೈನಂದಿನ ಬದುಕಿನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅವರಿರುವ ಕೋಣೆಯಲ್ಲಿನ ವಸ್ತುಗಳು, ಪೀಠೊಪಕರಣಗಳು ಇದ್ದ ಸ್ಥಳದಲ್ಲಿಯೇ ಇರಲಿ. ಅವರ ವಾಸಸ್ಥಳವನ್ನು ಬದಲಾಯಿಸಬೇಡಿ. ಸಾಧಾರಣವಾಗಿ, ರೂಢಿಯಲ್ಲಿರುವಂತೆ, ಕೆಲವೊಮ್ಮೆ ಅವರನ್ನು ಒಬ್ಬ ಪುತ್ರನ ಮನೆಯಲ್ಲಿ ಬಿಡಲಾಗುತ್ತದೆ, ಒಂದೆರಡು ತಿಂಗಳ ಅನಂತರ ಮತ್ತೂಬ್ಬ ಪುತ್ರನ ಮನೆಯಲ್ಲಿ ಹೀಗೆ ಇದೇ ರೀತಿಯಲ್ಲಿ ಮುಂದುವರಿಯುತ್ತದೆ. ಹೀಗೆ ಆಗಾಗ ಬದಲಾವಣೆಗಳು ಆದಾಗ ವ್ಯಕ್ತಿ ತುಂಬಾ ಗೊಂದಲಕ್ಕೊಳಗಾಗುತ್ತಾನೆ. ಆತನ ಮೆದುಳು ಈ ಕ್ಷಿಪ್ರ ಬದಲಾವಣೆಗೆ ಹೊಂದಿಕೊಳ್ಳುವುದು ತುಂಬಾ ಕಷ್ಟ. ಅವರ ದಿನಚರಿಯನ್ನು ಒಂದೇ ತರಹ ನಡೆಸುವಂತೆ ನೋಡಿಕೊಳ್ಳಬೇಕು. ಅವರ ಎಲ್ಲಾ ಕೆಲಸಗಳನ್ನು ಪ್ರತಿದಿನ ಅದೇ ಸಮಯದಲ್ಲಿ, ಅದೇ ಸ್ಥಳದಲ್ಲಿ ಮಾಡಿಸುತ್ತಿರಬೇಕು. ಅವರಿಗೆ ಮನೆಯಲ್ಲಿ ದಾರಿ ತಪ್ಪದ ಹಾಗೆ ನೋಡಿಕೊಳ್ಳಲು, ಮಾರ್ಗಸೂಚಿಗಳನ್ನು ಗೋಡೆಗಳಿಗೆ ಅಂಟಿಸಿ. ಉದಾ: ಅಡುಗೆ ಮನೆ ಈ ಕಡೆ, ಸ್ನಾನದ ಕೋಣೆ ಈ ಕಡೆ, ಶೌಚಾಲಯ ಈ ಕಡೆ ಎಂದು ಬರೆದು ಮಾರ್ಗಸೂಚಿ ಚಿಹ್ನೆ ಅಂಟಿಸಿ. ಅವರನ್ನು ತೆಗಳಬೇಡಿ/ ಬೈಯಬೇಡಿ. ಮುಖ್ಯವಾಗಿ ಮನೆಯವರು ತಿಳಿಯಬೇಕಾಗಿರುವುದು ಏನೆಂದರೆ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಈ ರೀತಿ ವರ್ತಿಸುವುದಿಲ್ಲ; ಇದು ಕಾಯಿಲೆಯಿಂದಾಗುವ ಬದಲಾವಣೆ. ವ್ಯಕ್ತಿ ಏನೋ ಮಾಡಿದಾಗ ಅವರನ್ನು ಬೈಯಬೇಡಿ, ಬದಲಾಗಿ ತಿಳಿಸಿಹೇಳಿ. ವ್ಯಕ್ತಿಗೆ ತನಗೇನಾಗುತ್ತಿದೆ ಎಂದು ತಿಳಿಯಲು ಕಷ್ಟವಾಗಬಹುದು. ಆದರೆ ಅವರು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲರು. ಅವರೇನೊ ನಿಮಗೆ ನಿಷ್ಪ್ರಯೋಜಕ, ಮನೆಗೆ ಭಾರ ಇತ್ಯಾದಿ ಅನಿಸಬಹುದು. ಆದರೆ ಅವರು ಇಷ್ಟು ವರ್ಷ ಗೌರವ, ಸಮ್ಮಾನದಿಂದ ಮನೆಯನ್ನು ನಡೆಸಿಕೊಂಡು ಬಂದವರು; ಅವರ ಗೌರವಕ್ಕೆ ಆತ್ಮಸಮ್ಮಾನಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಿ. ಉದಾ: ಅದು ಮಾಡಬೇಡಿ, ಇದು ಮಾಡಬೇಡಿ ಎಂದು ಹೇಳುವ ಬದಲು ಬನ್ನಿ ಜತೆಗೂಡಿ ಈ ರೀತಿ ಮಾಡೋಣ ಎಂದು ಹೇಳಿದರೆ ಅವರಿಗೂ ಸಂತೋಷವಾಗುತ್ತದೆ. ಅವರು ಈ ಮೊದಲಿನಂತೆ ತುಂಬ ಕ್ಲಿಷ್ಟವಾದ ಕೆಲಸಗಳನ್ನು, ಜವಾಬ್ದಾರಿಗಳನ್ನು ವಹಿಸುತ್ತಾರೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಏಕೆಂದರೆ ಅವರು ಅದನ್ನು ಮಾಡದೆ ಹೋದರೆ ನೀವು ಅವರ ಮೇಲೆ ಕೋಪಗೊಳ್ಳುವುದು; ಮನಸ್ತಾಪಗೊಳ್ಳುವುದು ಆಗುತ್ತದೆ. ಹಾಗಾಗಿ ಅದಷ್ಟು ಮನೆಯ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಿ. ಅವರು ಗೊಂದಲ, ಸಿಟ್ಟಿಗೇಳುವಂತಹ ವಿಷಯಗಳನ್ನು ಮಾತನಾಡಬೇಡಿ. ಒತ್ತಡದ ಸನ್ನಿವೇಶಗಳಿಂದ ಅವರನ್ನು ದೂರವಿಡಿ.ಇದೇ ತರಹ ಅವರ ವಿವಿಧ ನಡವಳಿಕೆಗೆ ತಕ್ಕಂತೆ ಮನೆಯ ವಾತಾವರಣದಲ್ಲಿ ಬದಲಾವಣೆ ಮಾಡಿದರೆ ಅವರ ಜೀವನ ಸುಗಮವಾಗಬಹುದು. ಕೊನೆಯದಾಗಿ ಹೇಳುವುದಾದರೆ, ಡಿಮೆನ್ಶಿಯಾ ಇಳಿವಯಸ್ಸಿನಲ್ಲಿ ಕಂಡು ಬರುವ ಮೆದುಳಿನ ಕಾಯಿಲೆಯಾಗಿದ್ದು, ಇದರಲ್ಲಿ ವ್ಯಕ್ತಿಯ ವಿವಿಧ ಬೌದ್ಧಿಕ ಶಕ್ತಿಗಳು ಕ್ರಮೇಣ ಕ್ಷೀಣಿಸುತ್ತ ಹೋಗುತ್ತವೆ. ಇದೆಲ್ಲವನ್ನು ಅನುಭವಿಸುವ ವ್ಯಕ್ತಿಗೂ ಇದರ ಬಗ್ಗೆ ತಿಳಿಯುವುದಾದರೂ ಆತ ನಿಸ್ಸಹಾಯಕನಾಗಿ ಪರದಾಡುತ್ತಿರುತ್ತಾನೆ. ತನ್ನ ಮೇಲಿನ ಸ್ವಾಧೀನ ಕಳೆದುಕೊಳ್ಳುತ್ತಿದ್ದೇನೆ ಎಂದು ಖನ್ನತೆಗೊಳಗಾಗುತ್ತಾನೆ. ಡಿಮೆನ್ಶಿಯಾ ಬರಲು ಹಲವಾರು ಕಾರಣಗಳಿದ್ದು, ಅವುಗಳನ್ನು ಗುರುತಿಸುವುದು ಮುಖ್ಯ. ಏಕೆಂದರೆ, ಕೆಲವು ಡಿಮೆನ್ಶಿಯಾಗಳಲ್ಲಿ ಸುಧಾರಣೆ ತರಬಹುದು. ಈ ಲಕ್ಷಣಗಳು ಕಂಡು ಬಂದಾಗ ಮನೋವೈದ್ಯರನ್ನು ಕಾಣುವುದು ಅತ್ಯವಶ್ಯಕವಾಗಿದೆ. ಇವುಗಳನ್ನು ಗುಣಪಡಿಸಲು ಯಾವುದೇ ನಿಖರ ಚಿಕಿತ್ಸೆಗಳಿಲ್ಲ. ಆದರೆ, ಇವು ಹದಗೆಡುವುದನ್ನು ತಡೆಯಲು ವಿವಿಧ ಚಿಕಿತ್ಸೆಗಳನ್ನು ಪ್ರಯತ್ನಿಸಬಹುದು. ಇವುಗಳು ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಕಾಯಿಲೆಯಲ್ಲಿ ಮಾತ್ರೆ ಅಥವಾ ವೈದ್ಯರಿಗಿಂತ ರೋಗಿಯ ಮನೆಯವರ ಜವಾಬ್ದಾರಿ ಹೆಚ್ಚಾಗಿದ್ದು, ಮನೆಯವರ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಇಳಿವಯಸ್ಸಿನಲ್ಲಿ ತಲೆದೋರುವ ಈ ಸಮಸ್ಯೆಯನ್ನು ಬೇಗ ಗುರುತಿಸಿ, ಮನೆಯವರ ಸಹಕಾರದಿಂದ ಮುಂದುವರಿದರೆ ವ್ಯಕ್ತಿಯು ತನ್ನ ಗೌರವಯುತ ಜೀವನದ ಕೊನೆಯ ಹಂತವನ್ನು ಆತ್ಮ ಸಮ್ಮಾನದ ಮೂಲಕ ಕಳೆಯಬಹುದು. ಇದನ್ನು ತಡೆಗಟ್ಟಲು ಏನು ಮಾಡಬಹುದು?
ಇದಕ್ಕೆ ಚಿಕಿತ್ಸೆ ಇಲ್ಲದಿರುವುದರಿಂದ ಇದನ್ನು ಬರದಂತೆ ನೋಡಿಕೊಳ್ಳಲು ಏನಾದರೂ ಮಾಡಬಹುದು ಎಂದು ತೋರಬಹುದು. ಇದು ಬರುವ ಸಾಧ್ಯತೆ ಕಡಿಮೆ ಮಾಡಲು ಕೆಲವು ಸಲಹೆಗಳು (ಆದರೆ ಇದು ಸಂಪೂರ್ಣವಾಗಿ ಫಲ ನೀಡುತ್ತದೆ ಎಂದು ಹೇಳಲಾಗದು):
1. ಮಿದುಳಿನ ಚಟುವಟಿಕೆಗಳನ್ನು ಮಾಡುತ್ತಿರುವುದು : ಅಂದರೆ ಮಿದುಳಿನ ಅಥವಾ ಬೌದ್ಧಿಕ ಸಾಮರ್ಥ್ಯಗಳನ್ನು ಉಪಯೋಗಿಸುವುದರಿಂದ ಅವು ಕ್ಷೀಣಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಉದಾ: ಪದಬಂಧ , ಚೆಸ್ ಆಡುವುದು, ಸುಡೊಕು ಒಗಟು ಬಿಡಿಸುವುದು, ಬೇರೆ ಯಾವುದಾದರೂ ಬೋರ್ಡ್ ಗೇಮ್ ಆಡುವುದು ಇತ್ಯಾದಿ.
2. ದೈಹಿಕ ಚಟುವಟಿಕೆಗಳು ಆಟ ಆಡುವುದು, ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಲು ಸಹಕಾರಿಯಾಗುತ್ತದೆ.
3. ಊಟದಲ್ಲಿ ಬದಲಾವಣೆ: ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ಕಡಿಮೆ ಮಾಡುವುದು.
4. ಜೀವನಶೈಲಿಯಲ್ಲಿ ಬದಲಾವಣೆ: ಮದ್ಯಪಾನ, ಸಿಗರೇಟು ಮತ್ತಿತರ ಮಾದಕ ವಸ್ತುಗಳನ್ನು ತ್ಯಜಿಸಬೇಕು.
5. ಸಾಕಷ್ಟು ನಿದ್ದೆ ಮಾಡಬೇಕು ಮತ್ತು ನಿದ್ರೆಯ ದಿನಚರಿಯನ್ನು ನಿಯಮಿತವಾಗಿ ಪಾಲಿಸಬೇಕು.
6. ರೋಗಗಳ ನಿಯಂತ್ರಣ : ಮಧುಮೇಹ, ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳಿಗೆ ನಿಯಮಿತವಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಡಾ| ರವೀಂದ್ರ ಮುನೋಳಿ
ಸಹ ಪ್ರಾಧ್ಯಾಪಕರು
ಮನೋರೋಗ ಚಿಕಿತ್ಸಾ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ