Advertisement

Dementia: ಹಿರಿಯರ ಮರೆವು; ಡೇ ಕೇರ್‌ ನೆರವು

11:09 AM Sep 04, 2023 | Team Udayavani |

ಬೆಂಗಳೂರು: ವಯಸ್ಸಾದಂತೆ ಮರೆವು ಉಂಟಾಗುವುದು ಸರ್ವೇಸಾಮಾನ್ಯ. ಜಾಗೃತಿ ಕೊರತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಮರೆವು ಕಾಯಿಲೆ ಹೆಚ್ಚಾಗುತ್ತಿದೆ. ಇದೀಗ ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ “ಡೇ ಕೇರ್‌ ಸೆಂಟರ್‌’ಗಳು ಆಸರೆಯಾಗುತ್ತಿವೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ಮೂರು ಲಕ್ಷದಷ್ಟು ಹಿರಿಯ ನಾಗರಿಕರು ಇದ್ದರೆ, ಅವರಲ್ಲಿ 65 ಸಾವಿರ ವಯಸ್ಕರು ಮರೆವು ಕಾಯಿಲೆ(ಡಿಮೆನ್ಶಿಯಾ)ಯಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ಈ ರೋಗ ಕಾಣಿಸಿಕೊಳ್ಳುತ್ತದೆ.

ಒಂಟಿತನದಿಂದ ಹೆಚ್ಚು ಮರೆವು: ಇಂದಿನ ಆಧುನಿಕ ಸಮಾಜದಲ್ಲಿ ಮಕ್ಕಳು, ಸೊಸೆಂದಿರು, ಮೊಮ್ಮಕ್ಕಳು ಸೇರಿದಂತೆ ಎಲ್ಲರೂ ಅವರದ್ದೇ ಆದ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಇದರಿಂ ದಾಗಿ ತಂದೆ-ತಾಯಿಗೆ ಅಥವಾ ಪೋಷಕರಿಗೆ ಸಮಯ ಕೊಡಲು ಸಾಧ್ಯವಾಗುವುದಿಲ್ಲ. ವಯಸ್ಸಾದಂತೆ ದಿನದಿಂದ ದಿನಕ್ಕೆ ಕಾಡುವ ಒಂಟಿತನ ಒಂದೆಡೆಯಾದರೆ, ಮತ್ತೂಂದೆಡೆಗೆ ದೈಹಿಕವಾಗಿ ದೃಢತೆ ಇದ್ದರೂ ಮೆದುಳಿನ ಕಾರ್ಯವು ಕ್ಷೀಣಿಸುತ್ತಿರುತ್ತದೆ.

ಜಾಗ್ರತೆಯಿಂದ ನೋಡಿಕೊಳ್ಳಬೇಕು: ಒಂದು ನಿರ್ದಿಷ್ಟ ವಯಸ್ಸಿನ ನಂತರ ನಮ್ಮ ದೇಹದಲ್ಲಿನ ಅಣುಗಳು ಅವನತಿಯಾಗುತ್ತಾ ಹೋಗುತ್ತವೆ. ಮೆದುಳಿನಲ್ಲಿನ ಅಣುಗಳು ಕ್ಷೀಣಿಸುತ್ತಿರುವಾಗ ಮರೆವು ಪ್ರಾರಂಭವಾಗುತ್ತದೆ. ಆದ್ದರಿಂದ ಮರೆವಿನ ಕಾಯಿಲೆಗೆ ತುತ್ತಾಗುತ್ತಿರುವವರಿಗೆ ಬೆಂಬಲವಾಗಿ ನಿಂತು, ಸೂಕ್ಷ್ಮವಾಗಿದ್ದಾಗಿಂದಲೇ ಜಾಗೃತದಿಂದ ನೋಡಿಕೊಳ್ಳುವುದು ತುಂಬಾ ಮುಖ್ಯ.

ಸಮಾಜದಲ್ಲಿ ಜಾಗೃತಿ ಇಲ್ಲ: ಸಾಮಾನ್ಯವಾಗಿ 60 ವರ್ಷ ದಾಟುತ್ತಿದ್ದಂತೆ ಮಾಸಿಕ/ತ್ತೈಮಾಸಿಕವಾಗಿಬಿಪಿ, ಡೈಯಾಬಿಟೀಸ್‌ ತಪಾಸಣೆ ಮಾಡಿಸುವ ಹಾಗೆ ಮೆಮೋರಿ ಸ್ಕ್ರೀನಿಂಗ್‌ ಮಾಡಿಸುವುದು ಅಷ್ಟೇ ಮುಖ್ಯ. ಆದರೆ, ಬಹುತೇಕರು ವಯಸ್ಸಾದಂತೆ ಮರೆವು ಸರ್ವೇ ಸಾಮಾನ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ. ಮರೆವು ರೋಗ ಕುರಿತಂತೆ ಸಮಾಜದಲ್ಲಿ ಜಾಗೃತಿ ಇಲ್ಲ ಎನ್ನುತ್ತಾರೆ ಆರ್‌.ಟಿ. ನಗರದಲ್ಲಿನ ಡೇ ಕೇರ್‌ ಸೆಂಟರ್‌ನ ಮೇಲ್ವಿಚಾರಕಿ ಶ್ರೀಜಾರಾಣಿ.

Advertisement

ಕಾಳಜಿವಹಿಸದಿರುವುದು ಮರೆವಿಗೆ ಕಾರಣ: ವೃದ್ಧರ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಇಂದು ಮರೆವಿನ ಕಾಯಿಲೆಯ ಪ್ರಮಾಣ ತೀವ್ರ ವಾಗುತ್ತದೆ. ಅಂತವರಿಗೆ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಕೂಡ ಇರುವುದಿಲ್ಲ. ತಾನು ಎಲ್ಲಿದ್ದೀನಿ, ಏನು ಮಾಡುತ್ತಿದ್ದೀನಿ ಎಂಬ ವಿಷಯಗಳನ್ನು ಅವರಿಗೆ ಸದಾ ತಿಳಿಸಿಕೊಡಬೇಕಾಗುತ್ತದೆ. ಆಗ ಮಾತ್ರ ಅವರು ಪ್ರಸ್ತುತತೆಯಲ್ಲಿ ಇರಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಈ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಸಹಾಯವಾಗಲೆಂದು ನೈಟಿಂಗೈಲ್ಸ್‌ ಮೆಡಿಕಲ್‌ ಟ್ರಸ್ಟ್‌ ನಗರದ ಆರ್‌.ಟಿ. ನಗರ, ಜಯನಗರ ಹಾಗೂ ಕಸ್ತೂರಿ ನಗರ ಮೂರು ಪ್ರದೇಶಗಳಲ್ಲಿ “ಡೇ ಕೇರ್‌ ಸೆಂಟರ್‌’ ಅನ್ನು ಪ್ರಾರಂಭಿಸಿದೆ. ನಗರದ ವಿವಿಧ ಸ್ಥಳಗಳಿಂದ ಈ ಕೇಂದ್ರಗಳಿಗೆ ನಿತ್ಯ 40 ರಿಂದ 50 ವಯೋವೃದ್ಧರು ಆಗಮಿಸುತ್ತಾರೆ. ಇವರನ್ನು ಬೆಳಗ್ಗೆ ಮನೆಯವರೇ ಕೇಂದ್ರಕ್ಕೆ ಬಿಟ್ಟು, ಸಂಜೆ ಕರೆದುಕೊಂಡು ಹೋಗಲಾಗುತ್ತದೆ.

ಡೇ ಕೇರ್‌ಪ್ರಮುಖ ಚಟುವಟಿಕೆಗಳು: ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಮುಂಜಾನೆ ಯಿಂದ ವಯಸ್ಸಿನ ಆಧಾರ ಮೇಲೆ ದೈಹಿಕ ಚಟುವಟಿಕೆಗಳು, ಪಾರ್ಥನೆ, ಗುಂಪು ಚಟುವಟಿಕೆ, ವೀಕ್ಷಣೆ ಮತ್ತು ಬರೆಯುವುದು ಹಾಗೂ ಗ್ರಹಿಕೆಗೆಸಂಬಂಧಿಸಿದಂತಹ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ನಂತರ ಕೇರಂ, ಮ್ಯೂಜಿಕ್‌, ವಸ್ತುಗಳನ್ನು ಗುರುತಿಸುವುದು ಸೇರಿ ದೈಹಿಕ ಸಾಮರ್ಥ್ಯಕ್ಕೆ ಸರಿಯಾಗಿ ಆಟೋಪಕರಣ ಹೊಂದಿರುತ್ತದೆ. ಹೆಚ್ಚು ಮರೆವು ಇರುವವರಿಗೆ ಇವತ್ತಿನ ವಾರ, ದಿನಾಂಕದಿಂದ ನಿತ್ಯ ಬಳಕೆಯ ವಸ್ತುಗಳ ಹೆಸರುಗಳನ್ನು ಪ್ರತಿದಿನವೂ ತಿಳಿಸಿಕೊಡಲಾಗುತ್ತದೆ. ಇಷ್ಟೇ ಅಲ್ಲದೇ, ಶಾಲಾ-ಕಾಲೇಜು, ಅಪಾರ್ಟ್ ಮೆಂಟ್‌ ಕಾಂಪ್ಲೆಕ್ಸ್‌, ಕ್ಲಬ್‌ಗಳು ಸೇರಿ ಇನ್ನಿತರೆ ಪ್ರದೇಶಗಳಲ್ಲಿ ಈ ಕಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಿಂಗಳಿಗೊಮ್ಮೆ “ಡಿಮೆನ್ಶಿಯಲ್‌ ಫ್ರೆಂಡ್ಸ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

ಡಿಮೆನ್ಶಿಯಾ(ಮರೆವು)ದ ಎಲ್ಲಾ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಹಣ್ಣು, ತರಕಾರಿ, ಧಾನ್ಯಗಳಂತಹ ಪೌಷ್ಟಿಕಾಂಶ ಆಹಾರ ಸೇವನೆ, ಮೆದುಳಿಗೆ ಸರಿಯಾದ ರಕ್ತದ ಸಂಚಲನಕ್ಕಾಗಿ ನಿತ್ಯ ನಿಯಮಿತ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಉತ್ತಮ ನಿದ್ರೆ ಹಾಗೂ ಸ್ನೇಹಿತರು ಥವಾ ಕುಟುಂಬದೊಂದಿಗೆ ಸಂವಹನ ನಡೆಸುವುದ ರಿಂದ ಈ ಕಾಯಿಲೆಯ ಅಪಾಯವನ್ನು ಕಡಿಮೆಮಾಡಬಹುದು.ಡಾ.ಎಚ್‌.ಸಂತೋಷ್‌, ನರರೋಗ ತಜ್ಞ.

ರೋಗದ ಲಕ್ಷಣಗಳು:

 ನಿತ್ಯ ಬಳಸುವ ವಸ್ತುಗಳನ್ನು ಮರೆಯುವುದು.

 ಯಾವ ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕು

ಎಂಬ ಅರಿವು ಇಲ್ಲದಿರುವುದು.

 ಅಸಭ್ಯವಾಗಿ ವರ್ತಿಸುವುದು

 ಮರದ ನೆರಳು ಕಂಡರೆ, ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ

ಅಥವಾ ಹಿಂಬಾಲಿಸುತ್ತಿದ್ದಾರೆ ಅನ್ನಿಸುವುದು.

 ರಸ್ತೆಯಲ್ಲಿ ಯಾರಾದರೂ ಹೋಗುತ್ತಿದ್ದರೆ, ನಮ್ಮನ್ನು

ಹೊಡೆಯಲಿಕ್ಕೆ ಬರುತ್ತಿದ್ದಾರೆ ಎಂದು ಭಯಪಡುವುದು

ಅಥವಾ ಅವರಿಗೆ ಹೊಡೆಯಲಿಕ್ಕೆ ಹೋಗುವುದು.

 ನಮ್ಮ ಮನೆಯ ವಸ್ತುಗಳನ್ನು ಯಾರೋ ಬಂದು

ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಭಾಸವಾಗುವುದು.

 ವರ್ತನೆಗಳಲ್ಲಿ ಬದಲಾವಣೆ (ಕೋಪ, ಸಂತೋಷ) ಜತೆಗೆ

ವರ್ತನೆಯಲ್ಲಿ ನಿಯಂತ್ರಣ ಇಲ್ಲದಿರುವುದು.

 ಪದಗಳು, ಅಂಕಿ-ಸಂಖ್ಯೆಯ ಅರಿವು ಕ್ರಮೇಣ ಕ್ಷೀಣಿಸುವುದು.

 

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next