ಉಳ್ಳಾಲ: ಒಂದೆಡೆ ವಿಮಾನನಿಲ್ದಾಣದ ರನ್‌ವೇ ಕಡೆಗೆ ನುಗ್ಗುತ್ತಿರುವ ಸ್ಥಳೀಯ ಜನರು… ಇನ್ನೊಂದೆಡೆ ಗುಂಡಿನ ಮೊರೆತ… ಈ ನಡುವೆ ಇನ್ನೊಂದು ಕ್ಯಾಂಪ್‌ನಲ್ಲಿದ್ದ ಸಹೋದರ ಏರ್‌ಲಿಫ್ಟ್ ಆಗಿ ಭಾರತಕ್ಕೆ ತಲುಪಿದ ಎಂಬ ಮಾಹಿತಿ ಬಂದಾಗ ನಾನಿನ್ನು ತಾಯ್ನಾಡು ಸೇರುತ್ತೇನೋ ಇಲ್ಲವೋ ಎಂಬ ಆತಂಕ ಮತ್ತಷ್ಟು ಕಾಡತೊಡಗಿತು.
ಇದು ಕಾಬೂಲಿನಿಂದ ಏರ್‌ಲಿಫ್ಟ್ ಆಗಿ ಮಂಗಳವಾರ ಉಳ್ಳಾಲ ಉಳಿಯದ ತನ್ನ ಮನೆಗೆ ಆಗಮಿಸಿದ ಡೆಮ್ಸಿ ಮೊಂತೇರೋ ಅವರ ಮಾತು. ಅಫ್ಘಾನ್‌ನಲ್ಲೇ ಇದ್ದ ಅವರ ಸಹೋದರ ಮೆಲ್ವಿನ್ ಆ. 18ರಂದು ಹುಟ್ಟೂರು ಸೇರಿದ್ದರು. ಆದರೆ ಡೆಮ್ಸಿ ಕಾಬೂಲ್ ವಿಮಾನ ನಿಲ್ದಾಣದಲ್ಲೇ ಉಳಿದಿದ್ದು ಮೂರು ದಿನಗಳ ಬಳಿಕ ಏರ್‌ಲಿಫ್ಟ್ ಆಗಿ ಕತಾರ್ ಮಾರ್ಗವಾಗಿ ದಿಲ್ಲಿ, ಮುಂಬಯಿ ಮೂಲಕ ಮಂಗಳೂರಿಗೆ ತಲುಪಿದ್ದಾರೆ.
ಐದು ವರ್ಷಗಳಿಂದ ಕಾಬೂಲಿನಲ್ಲಿ ನ್ಯಾಟೋ ಪಡೆಯ ಮಿಲಿಟರಿ ಬೇಸ್‌ನಲ್ಲಿ ಇಕೊಲಾಗ್ ಇಂಟರ್‌ನ್ಯಾಶನಲ್ ಕಂಪೆನಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮಿÕ ಮನೆಸೇರುತ್ತಿದ್ದಂತೆ ಹೆತ್ತವರು, ಸಹೋದರಿಯರು ನಿರಾಳರಾಗಿದ್ದಾರೆ.
ಸ್ಥಳೀಯರ ಮುತ್ತಿಗೆ :
ಮಿಲಿಟರಿ ಬೇಸ್‌ನಿಂದ ನಮ್ಮನ್ನು ವಿಮಾನ ನಿಲ್ದಾಣಕ್ಕೆ ಆ. 15ರಂದೇ ಏರ್‌ಲಿಫ್ಟ್‌ಗೆ ಸಿದ್ಧರಿರುವಂತೆ ಕಂಪೆನಿ ತಿಳಿಸಿತ್ತು. ಈ ನಡುವೆ ತಾಲಿಬಾನಿಗಳ ಭಯದಿಂದ ದೇಶ ತೊರೆಯಲು ಸ್ಥಳೀಯರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದರಿಂದ ವಿಮಾನಗಳು ಇಳಿಯುವುದೇ ದುಸ್ತರವಾಗಿತ್ತು. ನಮಗೆ ಕಂಪೆನಿ ಕಡೆಯಿಂದ ಒಂದು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಆ ಸಂದರ್ಭದಲ್ಲಿ ಕುಟುಂಬದವರಿಗೆ ನಮ್ಮ ಸುರಕ್ಷೆಯ ಕುರಿತು ಸಂದೇಶದಲ್ಲಿ ಮಾತ್ರ ತಿಳಿಸಲು ಸಾಧ್ಯವಾಗಿತ್ತು ಎಂದರು.