Advertisement

ಅನುದಾನ ರಹಿತ ಕನ್ನಡ ಶಾಲೆ ಉಳಿಸಲು ಆಗ್ರಹ

09:33 PM Nov 18, 2019 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ 1995 ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಎಂದು ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ಸಮನ್ವಯ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿತು.

Advertisement

ಶಾಲೆ ಮುಚ್ಚುವ ಸ್ಥಿತಿ: ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿಗಳು ಡೀಸಿ ಆರ್‌.ಲತಾಗೆ ಮನವಿ ಸಲ್ಲಿಸಿ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡಕ್ಕೆ ಆದ್ಯತೆ ಸಿಗಬೇಕಾಗಿದೆ. ಆದರೆ ಇಂದು ಕನ್ನಡ ಮಾಧ್ಯಮ ಶಾಲೆಗಳು ಹಂತ ಹಂತವಾಗಿ ಮುಚ್ಚುವ ಸ್ಥಿತಿ ತಲುಪಿವೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಸಮಿತಿ ವತಿಯಿಂದ “ಕನ್ನಡ ಶಾಲೆ ಉಳಿಸಿ’ ಅಭಿಯಾನ ಹಮ್ಮಿಕೊಂಡಿದ್ದು, ಕಳೆದ ಹತ್ತಾರು ವರ್ಷಗಳಿಂದ ಕರ್ನಾಟಕದಲ್ಲಿ ಮಠ ಮಾನ್ಯಗಳು ಹಾಗೂ ಶಿಕ್ಷಣ ಪ್ರೇಮಿ ಖಾಸಗಿ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಸರಿಸಮನಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಈ ಹಿಂದಿನಿಂದಲೂ ಹಲವಾರು ಕಷ್ಟನಷ್ಟಗಳ ನಡುವೆ ಶಾಲೆಗಳನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿವೆ.

ಶಿಕ್ಷಕರು ಬೀದಿಗೆ ಬೀಳುವ ಸ್ಥಿತಿ: ಇತ್ತೀಚಿನ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಅಲ್ಲಿ ಹತ್ತಾರು ವರ್ಷಗಳಿಂದ ಅಲ್ಪ ಸಂಬಳಕ್ಕೆ ದುಡಿಯುತ್ತಿದ್ದ ಶಿಕ್ಷಕ ವರ್ಗ ಬೀದಿಗೆ ಬೀಳುವ ಸರಿಸ್ಥಿತಿ ಬಂದಿದೆ. 2006 ರಲ್ಲಿ ಸಮ್ಮಿಶ್ರ ಸರ್ಕಾರ 1987- 1992 ರವರೆಗೂ ನಂತರ 2008 ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 1992- 1995 ರವರೆಗಿನ ಶಾಲೆಗಳಿಗೆ ಅನುದಾನ ನೀಡಿ ಕನ್ನಡ ಶಾಲಾ ಕಾಲೇಜುಗಳನ್ನು ಉಳಿಸಿದ್ದಾರೆ.

ಆದರೆ ನಂತರ ಬಂದ ಯಾವುದೇ ಸರ್ಕಾರ ಅನುದಾನವನ್ನು ಮುಂದುವರಿಸದೆ ಕನ್ನಡ ಶಾಲೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ವಿವೇಕಾನಂದ ಶಾಲೆಯ ಶ್ರೀನಿವಾಸ್‌, ಕಲ್ಪವೃಕ್ಷ ಮುನಿರಾಜು, ಎಸ್‌ಎಫ್ಎಸ್‌ ನ ಗೋಪಾಲ್‌ ರೆಡ್ಡಿ, ವೆಂಕಟೇಶಮೂರ್ತಿ, ವೆಂಕಟೇಶ್‌, ಹರೀಶ್‌, ಶ್ರೀರಾಮ್‌, ಸಾವಿತ್ರಮ್ಮ, ನಳಿನ, ದಿಲ್‌ಶಾದ್‌, ಗೋಪಾಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಪ್ರಸ್ತುತ ರಾಜ್ಯ ಸರ್ಕಾರ ನಮ್ಮ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ನೌಕರರ ಸ್ಥಿತಿಗತಿಗಳನ್ನು ಗಮನಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಅದಕ್ಕಾಗಿ ನಾಡಿನ ಸ್ವಾಮೀಜಿಗಳು, ಹಿರಿಯರು, ಶಿಕ್ಷಣ ಕ್ಷೇತ್ರದ ಭೀಷ್ಮರು ಆದ ಮಾಜಿ ಶಿಕ್ಷಣ ಸಚಿವರಾದ ಹೊರಟ್ಟಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೋದರೆ ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು.
-ನರಸಿಂಹಮೂರ್ತಿ, ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಜಿಲ್ಲಾದ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next