ಮಂಡ್ಯ: ಮದ್ದೂರು ತಾಲೂಕು ಬೆಸಗರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ (ಪಶ್ಚಿಮ) ಶಾಲೆಯನ್ನು ಮುಚ್ಚದೇ ಕರ್ನಾಟಕ ಪಬ್ಲಿಕ್ ಶಾಲೆ ನಡೆಸುವಂತೆ ಒತ್ತಾಯಿಸಿ ಶಾಲೆಯ ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಡೀಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ನಮ್ಮೂರ ಶಾಲೆ ನಮ್ಮ ಶಾಲೆ ಉಳಿಸಿ ಎಂಬ ಘೋಷಣೆ ಯೊಂದಿಗೆ ಧರಣಿ ನಡೆಸಿದರು.
ಬೆಸಗರಹಳ್ಳಿ ಗ್ರಾಮದ ಹೃದಯ ಭಾಗದಲ್ಲೇ ಬೆಸಗರಹಳ್ಳಿ ಪೂರ್ವ, ಬೆಸಗರಹಳ್ಳಿ ಪಶ್ಚಿಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಶಾಲೆಗಳಿವೆ. ಬೆಸಗರಹಳ್ಳಿ ಪಶ್ಚಿಮ ಶಾಲೆಯಲ್ಲಿ 85 ಮಕ್ಕಳು, ಪೂರ್ವ ಶಾಲೆಯಲ್ಲಿ 40 ಮಕ್ಕಳು ಹಾಗೂ ಉರ್ದು ಶಾಲೆಯಲ್ಲಿ 68 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಮೂರು ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ನೂತನವಾಗಿ ಪ್ರಾರಂಭವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ವಿಲೀನಗೊಳಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮೌಖೀಕ ಸೂಚನೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿಕ್ಷಕರನ್ನು ಪಬ್ಲಿಕ್ ಶಾಲೆಗೆ ವರ್ಗಾವಣೆ: ಈಗಾಗಲೇ ಶಾಲೆಯ ಐವರು ಶಿಕ್ಷಕರನ್ನು ಪಬ್ಲಿಕ್ ಶಾಲೆಗೆ ವರ್ಗಾಯಿಸಲಾಗಿದೆ. ಎರಡು ದಿನಗಳಿಂದ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನಡೆದಿಲ್ಲ. ಶಾಲೆ ಮುಚ್ಚುವುದರಿಂದ ಸ್ಥಳೀಯ ವಿದ್ಯಾರ್ಥಿ ಗಳಿಗೆ ತೊಂದರೆಯಾಗಲಿದ್ದು, ಅನೈತಿಕ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟಂತಾ ಗುವುದು. ಅಲ್ಲದೆ, ಹಾಲಿ ಇರುವ ಶಾಲೆ ದೂರದಲ್ಲಿದ್ದು, ತಾತ್ಕಾಲಿಕವಾಗಿ ಮಕ್ಕಳನ್ನು ಕರೆತರುವುದಕ್ಕೆ ವಾಹನ ವ್ಯವಸ್ಥೆ ಮಾಡುವುದಾಗಿ ಶಿಕ್ಷಕರು ಹೇಳಿದರೂ ಅದು ಶಾಶ್ವತವಾಗಿಲ್ಲದಿರುವ ಕಾರಣ ಪೋಷಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಲೋಕೇಶ್, ನಾಗರಾಜು, ರಾಮಗಿರಿಯಯ್ಯ, ಖೀಜರ್‌ಖಾನ್, ಚೇತನ್, ಗಿರೀಶ್, ಪಲ್ಲವಿ, ಗೀತಾ, ಪುಷ್ಪಲತಾ, ಶೋಭಾ, ಪ್ರೇಮಾ, ಚನ್ನಮ್ಮ, ಶ್ವೇತಾ ಮತ್ತಿತರರು ಹಾಜರಿದ್ದರು.