Advertisement

ಎಪಿಎಂಸಿ ಹಿಂಭಾಗದ ರಸ್ತೆ ನಿರ್ಮಾಣಕ್ಕೆ ಆಗ್ರಹ

02:08 PM Dec 14, 2019 | Team Udayavani |

ಬ್ಯಾಡಗಿ: ಪಟ್ಟಣದ ಮೆಣಸಿನಕಾಯಿ ಮಾರುಕಟ್ಟೆಯ (ಎಪಿಎಂಸಿ ಯಾರ್ಡ್‌) ಹಿಂದಿನ ಭಾಗದಲ್ಲಿರುವ ಮುಕ್ತಿಧಾಮದಿಂದ ಗುಮ್ಮನಹಳ್ಳಿ ಹಳ್ಳದವರೆಗೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯ ವರ್ತಕ ಸಂಘದ ಸದಸ್ಯರು ಶುಕ್ರವಾರ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

Advertisement

ನಿರ್ದೇಶಕ ಸುರೇಶ ಮೇಲಗಿರಿ ಮಾತನಾಡಿ, ಗುಮ್ಮನಹಳ್ಳಿ ರಸ್ತೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಖಾರದಪುಡಿ ಫ್ಯಾಕ್ಟರಿಗಳು ನಿರ್ಮಾಣವಾಗಿವೆ. ಮಲ್ಲೂರ ಹಾಗೂ ಮುಕ್ತಿಧಾಮ ರಸ್ತೆಗಳಲ್ಲಿ ಕೋಲ್ಡ್‌ ಸ್ಟೋರೆಜ್‌ಗಳು ನಿರ್ಮಾಣವಾಗಿವೆ. ನಿತ್ಯವೂ ಸಾವಿರಾರು ಸಂಖ್ಯೆಯ ಚೀಲಗಳನ್ನು ಮಲ್ಲೂರ ಹಾಗೂ ಮುಕ್ತಿಧಾಮ ರಸ್ತೆಗಳಿಂದ ಗುಮ್ಮನಹಳ್ಳಿ ರಸ್ತೆಯ ಖಾರದಪುಡಿ ಫ್ಯಾಕ್ಟರಿಗಳಿಗೆ ಸಾಗಾಟ ನಡೆಯುತ್ತಿದ್ದು, ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಗೌರವ ಕಾರ್ಯದರ್ಶಿ ಮಹಾಂತೇಶ ಆಲದಗೇರಿ ಮಾತನಾಡಿ, ಇವರೆಡಕ್ಕೂ ಸಂಪರ್ಕ ರಸ್ತೆ ಇಲ್ಲದ ಕಾರಣ ಚೀಲಗಳನ್ನು ತುಂಬಿಕೊಂಡ ನೂರಾರು ವಾಹನಗಳು ಸುಮಾರು 3 ಕಿ.ಮೀ ಹೆಚ್ಚುವರಿ ರಸ್ತೆಯನ್ನು ಸುತ್ತಿ ಬಳಸಿಕೊಂಡು ತೆರಳಬೇಕಾಗಿದೆ. ಇದರಿಂದ ಪಟ್ಟಣದೊಳಗೆಆಗುತ್ತಿರುವ ವಾಹನ ದಟ್ಟಣೆ ಕೂಡ ನಿಯಂತ್ರಣಕ್ಕೆ ಬರಲಿದೆ. ಕೂಡಲೇ ಒಂದು ಕಿ.ಮೀನಷ್ಟು ಸಂಪರ್ಕ ರಸ್ತೆ ನಿರ್ಮಿಸಿಕೊಟ್ಟಲ್ಲಿ ಮೇಲಿನ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಲಹೆ ನೀಡಿದರು.

ಹನುಮಂತಪ್ಪ ಛತ್ರದ ಮಾತನಾಡಿ, ಮುಕ್ತಿಧಾಮದವರೆಗಿನ ರಸ್ತೆಯು ಪುರಸಭೆಗೆ ವ್ಯಾಪ್ತಿಗೆ ಬರುತ್ತದೆ. ಇನ್ನುಳಿದ ರಸ್ತೆ ಗ್ರಾಮೀಣ ರಸ್ತೆಯಾಗಿದ್ದು ತರೇದಹಳ್ಳಿಯಲ್ಲಿರುವ ಕೃಷಿ ಜಮೀನು ಸಂರ್ಕಿಸುತ್ತಿದ್ದು, ಅದೂ ಸಹ ಕಿಷ್ಕಿಂದೆಯಂತಾಗಿದೆ. ರೈತರಿಗೂ ಸಹ ತಮ್ಮ ಹೊಲಗಳಿಗೆ ಹೋಗಲು ಹಾಗೂ ಬೆಳೆ ಮನೆಗೆ ತರಲು ಹರಸಾಹಸ ಪಡಬೇಕಾಗಿದೆ. ಈ ಎಲ್ಲ ಕಾರಣಗಳಿಂದ ಪುರಸಭೆ ಮತ್ತು ಎಪಿಎಂಸಿಗಳು ಜಂಟಿಯಾಗಿ ಸಂಪರ್ಕ ರಸ್ತೆಯನ್ನು ಅಗಲೀಕರಣ ಮಾಡುವ ಮೂಲಕ ಅಭಿವೃದ್ಧಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಕೆ.ಎಸ್‌. ನಾಯ್ಕರ್‌, ಸಂಪರ್ಕ ರಸ್ತೆ ನಿರ್ಮಿಸಲು ಸಮಿತಿಯಲ್ಲಿ ಅವಕಾಶವಿದ್ದರೆ ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ವಹಿಸುವುವದಾಗಿ ತಿಳಿಸಿದರು. ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ಸಹಾಯಕ ಕಾರ್ಯದರ್ಶಿ ಫಕ್ಕಿರೇಶ ದೊಡ್ಡಮನಿ, ಪ್ರಭು ದೊಡ್ಡಮನಿ, ರಾಜಶೇಖರ ಲಮಾಣಿ, ವರ್ತಕ ಸಿ.ಆರ್‌. ಆಲದಗೇರಿ, ಎಂ.ಟಿ. ಹಾವೇರಿ, ನಾಗರಾಜ ದೇಸೂರ, ಮಾಲತೇಶ ಅರಳಿಮಟ್ಟಿ, ಅಶೋಕ ಮೂಲಿಮನಿ, ಕೈಲಾಸಯ್ಯ ಆರಾಧ್ಯಮಠ, ರೈತ ಮುಖಂಡ ಬಸವರಾಜ ಸಂಕಣ್ಣನವರ, ಮಲ್ಲೇಶ ಬಣಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next