Advertisement

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿಗೆ ಆಗ್ರಹ

03:41 PM Feb 19, 2020 | Suhan S |

ಕಾರವಾರ: ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಜನಸಂಖ್ಯೆ ಆಧರಿಸಿ ಶೇ.15 ರಿಂದ ಶೇ. 22.5ಗೆ ಹೆಚ್ಚಿಸಬೇಕು ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7.5 ಕ್ಕೆ ಹೆಚ್ಚಿಸಿ ಒಳಮೀಸಲಾತಿ ವರ್ಗಿಕರಣ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಕಾರವಾರದ ಡಿಸಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಮಾಡಿತು.

Advertisement

ಎಸ್‌.ಫಕ್ಕೀರಪ್ಪ, ಬಸವಂತಪ್ಪ ಮಡ್ಲಿ ಹಾಗೂ ದೀಪಕ್‌ ಕುಡಾಳಕರ್‌ ನೇತೃತ್ವದಲ್ಲಿ ಸಾಂಕೇತಿಕ ಧರಣಿ ಮಾಡಿ ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರಾ ಅವರಿಗೆ ಮನವಿ ಸಲ್ಲಿಸಲಾಯಿತು. ದಲಿತ ಸಮುದಾಯದ ಮುಖಂಡರು ಮಾತನಾಡಿ, ಸುಪ್ರೀಂ ಕೋರ್ಟ್‌ ಈಚೆಗೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಿರುವ ಸಂಗತಿಯನ್ನು ಪ್ರಸ್ತಾಪಿಸಿ ಇದಕ್ಕೆ ಕೇಂದ್ರ ಸರ್ಕಾರ ಧ್ವನಿ ಎತ್ತಬೇಕು. ದಲಿತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ಎಸ್‌.ಫಕೀರಪ್ಪ ಮಾತನಾಡಿ ಪಿಟಿಸಿಎಲ್‌ 1978-79 ಕಾಯ್ದೆಗೆ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಕೆಲ ಪ್ರಕರಣಗಳಲ್ಲಿ ಸೆಕ್ಷನ್‌ 05ರ ವಿರುದ್ಧ ತೀರ್ಪು ನೀಡಿರುವುದರಿಂದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಕೋರ್ಟ್‌ಗಳಲ್ಲಿ ದಲಿತರ ಪ್ರಕರಣಗಳು ವಜಾಗೊಳ್ಳುತ್ತಿವೆ. ಪ್ರಸ್ತುತ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಪಿಟಿಸಿಎಲ್‌ 1978-79 ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಆಗ್ರಹಿಸಿದರು.

ದೀಪಕ್‌ ಕುಡಾಳಕರ್‌ ಮಾತನಾಡಿ ದಲಿತರಿಗೆ ಎಲ್ಲಾ ಹಂತಗಳಲ್ಲಿ ಈಗ ಅಧಿಕಾರದಲ್ಲಿರುವ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು. ದಲಿತರು ಈಗ ಒಂದಾಗಬೇಕಿದೆ ಎಂದ ಅವರು, ಬಗರ ಹುಕುಂ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ಕರ್ನಾಟಕ ಭೂ ಮಂಜೂರಾತಿ ನಿಯಮ 1969 ಪ್ರಕಾರ ಎಸ್‌ಸಿ ಎಸ್ಟಿಗಳಿಗೆ ಶೇ.50 ರಷ್ಟು ಭೂಮಿ ಮೀಸಲಿಡಲು ಭೂಮಿತಿ ಶಾಸನ ರಚಿಸಬೇಕು. ದಲಿತರಿಗೆ ಭೂಮಿ ಹಂಚಿಕೆಯಾಗಬೇಕು. ಬಜೆಟ್‌ನಲ್ಲಿ ಕೋಟಿಗಟ್ಟಲೆ ಹಣ ದಲಿತರಿಗೆ ಮೀಸಲಿಟ್ಟರೂ ಅದನ್ನು ಹಂಚದೇ ವಾಪಸ್‌ ಸರ್ಕಾರಕ್ಕೆ ಕಳಿಸಲಾಗುತ್ತಿದೆ. ಹಣ ವಾಪಸ್‌ ಕಳಿಸಿದರೆ ಅದಕ್ಕೆ ಜಿಲ್ಲಾಧಿಕಾರಿಯನ್ನೇ ನೇರ ಹೊಣೆ ಮಾಡುವ ಕಠಿಣ ನಿಯಮ ಜಾರಿಯಾಗಬೇಕೆಂದು ಒತ್ತಾಯಿಸಿದರು.

ಕಾಮಗಾರಿಗಳಲ್ಲಿ ದಲಿತರಿಗೆ 50 ಲಕ್ಷದ ವರೆಗಿನ ಕಾಮಗಾರಿ ಮಾತ್ರ ನೀಡಲಾಗುತ್ತಿದೆ. ಇಲ್ಲಿ ಸಹ ದಲಿತ ಗುತ್ತಿಗೆದಾರರಿಗೆ ಅನ್ಯಾಯ ವಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಹಿಡಿತದ ಕೆಲ ಇಲಾಖೆಗಳು ಖಾಸಗೀಕರಣವಾಗುತ್ತಿವೆ. ಇದರಿಂದ ಮೀಸಲಾತಿಗೆ ಕೊಡಲಿಪೆಟ್ಟು ಬಿದ್ದಿದೆ. ಮುಂದೆ ಇದು ಶಾಶ್ವತವಾಗಿ ದಲಿತ ವಿರೋಧಿಯಾಗಲಿದೆ. ಹಾಗಾಗಿ ಸರ್ಕಾರಿ ಸ್ವಾಮ್ಯದ ಇಲಾಖೆಗಳ ಖಾಸಗೀಕರಣ ತಪ್ಪಬೇಕು. ಕೇಂದ್ರ ಸರ್ಕಾರ ಇಂಥ ಧೋರಣೆ ಕೈಬಿಡಬೇಕೆಂದು ಆಗ್ರಹಿಸಿದರು.

Advertisement

ದಲಿತ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ನಿಧಾನಕ್ಕೆ ಕಡಿತ ಮಾಡಲಾಗುತ್ತಿದೆ. ಇದು ಅನ್ಯಾಯ, ಕೇಂದ್ರ ಸರ್ಕಾರ ಪೂರ್ಣವಾಗಿ ದುಡ್ಡಿದ್ದವರ ಪರ ನಿಲ್ಲತೊಡಗಿದೆ. ಈ ಅನ್ಯಾಯ ನಿಲ್ಲಲಿ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಟ್ಟು 16 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಲಿಖೀತ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಎಚ್‌.ಕೆ. ಶಿವಾನಂದ, ಬಾಬು ತಂಗಪ್ಪ ಸಿದ್ದಿ, ಮಂಜುನಾಥ ಹಳ್ಳೇರ, ಬಸವಂತಪ್ಪ ಮಡ್ಲಿ, ಕೃಷ್ಣಾ ಬಳಗಾರ, ಶಾಂತರಾಮ ಹುಲಸ್ವಾರ, ಅಶೋಕ ಹಳದನಕರ, ಭವ್ಯಾ ಹಳ್ಳೇರ, ಬಸವರಾಜ ಮೇತ್ರಿ, ಕಲ್ಲಪ್ಪ ಹೋಳಿ, ಮಾದೇವ, ತಿರುಪತಿ, ಬೊಮ್ಮಯ್ಯ ಹಳ್ಳೇರ, ರಾಜು ಹಳ್ಳೇರ, ಗೋವಿಂದ ಹಳ್ಳೆರ, ಶ್ರೀಧರ, ಮಂಜುನಾಥ ಆಗೇರ, ಶ್ರೀಕಾಂತ ಕಾಂಬಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next