ಕಲಬುರಗಿ: ಶಹಾಬಾದ ನಗರವನ್ನು ತಾಲೂಕಾ ಕೇಂದ್ರವಾಗಿಸಬೇಕೆಂದು ಆಗ್ರಹಿಸಿ ಶಹಾಬಾದ ನಾಗರಿಕರ ಹೋರಾಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.ಜಗದೀಶ ಶೆಟ್ಟರ್ ಅವರ ಅವಧಿಯಲ್ಲಿ 43 ಹೊಸ ತಾಲೂಕುಗಳನ್ನು ಘೋಷಿಸಲಾಗಿತ್ತು.
ಅದರಲ್ಲಿ ಚಿತ್ತಾಪುರ ತಾಲೂಕಿನ ಶಹಾಬಾದ ನಗರವು ಒಂದು.ಶಹಾಬಾದ ನಗರವು ಚಿತ್ತಾಪುರ ತಾಲೂಕಿನಿಂದ ಸುಮಾರು 25 ಕಿ.ಮೀ.ಅಂತರದಲ್ಲಿದ್ದು, ಸುಮಾರು ಒಂದು ಲಕ್ಷ ಜನಸಂಖ್ಯೆ ಹೊಂದಿದೆ. ಸೂಚಿತ ಶಹಾಬಾದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 43 ಗ್ರಾಮಗಳ ಜನಸಂಖ್ಯೆ ಸೇರಿದಂತೆ 2.5 ಲಕ್ಷ ಜನಸಂಖ್ಯೆ ಹೊಂದಿದೆ.
ಶಹಾಬಾದ ನಗರದಲ್ಲಿ ಎರಡು ಬೃಹತ್ ಕಾರ್ಖಾನೆಗಳಿದ್ದು, ವಾಡಿಯಲ್ಲಿ ಏಷ್ಯಾದಲ್ಲಿಯೇ ದೊಡ್ಡದಾದ ಸಿಮೆಂಟ್ ಕಾರ್ಖಾನೆಯಿದೆ.ಶಹಾಬಾದ ಸುತ್ತಮುತ್ತ ಕಲ್ಲುಗಣಿಗಳಿವೆ. ಈ ನಗರಕ್ಕೆ ಬರಲು ಸುತ್ತಲಿನ ಗ್ರಾಮಸ್ಥರಿಗೆ ರೈಲು ಸಂಪರ್ಕ, ರಸ್ತೆ ಸಂಪರ್ಕವಿದೆ. ಸೂಚಿತ ಶಹಾಬಾದ ತಾಲೂಕಿನ ಅಡಿಯಲ್ಲಿಬರುವ 43 ಗ್ರಾಮಗಳು ನಗರದಿಂದ ಕೇವಲ 5 ಕಿ.ಮಿ.ನಿಂದ 15 ಕಿ.ಮೀ.ವ್ಯಾಪ್ತಿಯಲ್ಲಿವೆ.
ಶಹಾಬಾದನಲ್ಲಿ ಉಪತಹಶೀಲ್ದಾರ ಕಚೇರಿ, ಉಪ ಖಜಾಂಚಿ ಕಚೇರಿ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಕಚೇರಿ, ಸರ್ಕಾರಿ, ಅನುದಾನಿತ, ಅನುದಾನರಹಿತ 270 ಶಾಲಾ ಕಾಲೇಜುಗಳು ಇದ್ದು, ಉಪ ವಲಯ ಪೊಲೀಸ್ ಅಧೀಕ್ಷಕರಕಚೇರಿ ಹೊಂದಿದೆ. ಈಗಿರುವ ಚಿತ್ತಾಪುರ ತಾಲೂಕಾ ಕೇಂದ್ರ ಶಹಾಬಾದದಿಂದ 30 ಕಿ.ಮೀ.ಅಂತರದಲ್ಲಿದ್ದು, ಸಾರ್ವಜನಿಕರು ತಾಲೂಕಾ ಕಚೇರಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಹಾಗೂ ಹಿಂದಿನ ಸರ್ಕಾರಗಳು ಹೊಸ ತಾಲೂಕಿನ ಶಿಫಾರಸ್ಸಿಗಾಗಿ ರಚಿಸಿದ ಸಮಿತಿಗಳು ಶಹಾಬಾದನ್ನು ತಾಲೂಕಾಕೇಂದ್ರವಾಗಿಸಲು ಶಿಫಾರಸ್ಸು ಮಾಡಿರುವುದರಿಂದ ಶಹಾಬಾದ ನಗರವನ್ನು ತಾಲೂಕಾ ಕೇಂದ್ರವಾಗಿಸಬೇಕು ಹಾಗೂ ಅವಶ್ಯಕವಾದ ತಾಲೂಕಾ ಕಚೇರಿಗಳನ್ನು ಆರಂಭಿಸಬೇಕೆಂದು ಧರಣಿ ನಿರತರು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಧರಣಿಯಲ್ಲಿ ಶಹಾಬಾದ ನಾಗರೀಕರ ಹೋರಾಟ ಸಮಿತಿಯ ಅಧ್ಯಕ್ಷ ಮಹ್ಮದ ಅಲಿ ಖಾನ್ ಜಮಾದಾರ, ಕಾರ್ಯದರ್ಶಿ ಕೃಷ್ಣಪ್ಪ, ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.