ಮಹಾನಗರ: ಬೀಡಿ ಉದ್ಯಮದಲ್ಲಿ ಕೆಲಸ ನಿರ್ವಹಿಸುವ ಬೀಡಿ ಕಾರ್ಮಿಕರು ಭವಿಷ್ಯ ನಿಧಿಗೆ (ಪಿಎಫ್) ಸಂಬಂಧಿಸಿದಂತೆ ಭವಿಷ್ಯನಿಧಿ ಇಲಾಖೆಯ ಹೊಸ ಕಾನೂನು ಹಾಗೂ ನಿಯಮದಿಂದ ತೀವ್ರ ಸಮಸ್ಯೆಗೆ ಸಿಲುಕಿದ್ದು ತತ್‌ಕ್ಷಣ ಇವುಗಳನ್ನು ಬಗೆ ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕರಾವಳಿ ಬೀಡಿ ವರ್ಕರ್ ಯೂನಿಯನ್, ಸೌತ್‌ಕೆನರಾ -ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್ ( ಎಚ್‌ಎಂಎಸ್) ವತಿಯಿಂದ ಮಂಗಳವಾರ ಮಂಗಳೂರಿನ ಭವಿಷ್ಯನಿಧಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಜರಗಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಹಮ್ಮದ್ ರಫಿ ಭವಿಷ್ಯ ನಿಧಿ ಇಲಾಖೆಯ ಕೆಲವು ಅನಗತ್ಯ, ಅಸಂಬದ್ಧ ನಿಯಮ, ಧೋರಣೆಯಿಂದಾಗಿ ಬಡ ಬೀಡಿ ಕಾರ್ಮಿಕರು ಕಷ್ಟ ಅನುಭವಿಸುವಂತಾಗಿದೆ ಎಂದರು.
ವಂತಿಗೆದಾರರ ದಾಖಲೆಗಳನ್ನು ತಿದ್ದುಪಡಿ ಮಾಡಲು ಯಾವುದೇ ಅಡಚಣೆ ಮಾಡಬಾರದು, ವಂತಿಗೆದಾರರ ಹೆಸರು, ತಂದೆಯ ಹೆಸರು, ಜನ್ಮದಿನಾಂಕದ ತಿದ್ದುಪಡಿಯನ್ನು ಆಧಾರ್‌ನಲ್ಲಿ ನಮೂದಿಸಿದಂತೆ ಸರಿಪಡಿಸಬೇಕು. ಆಧಾರ್ ಅಲ್ಲದೆ ಬೇರೆ ಯಾವ ದಾಖಲೆಯನ್ನು ಕೇಳಬಾರದು, ಭವಿಷ್ಯನಿಧಿ ಪಿಂಚಣಿ ನೀಡುವ ಬ್ಯಾಂಕ್‌ಗಳಿಗೆ ಜೀವನ ಪ್ರಮಾಣ ಪತ್ರವನ್ನು ಪಿಂಚಣಿದಾರರಿಗೆ ಸಹಾಯವಾಗುವಂತೆ ವರ್ಷಪೂರ್ತಿ ಮಾಡಲು ಆದೇಶಿಸಬೇಕು. ಇದರಿಂದ ದೂರದ ಊರುಗಳಿಂದ ಬರುವ ವೃದ್ಧ ಪಿಂಚಣಿದಾರರು ಭವಿಷ್ಯನಿಧಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಬೀಡಿ ಕಾರ್ಮಿಕರು ತನ್ನ ಸರ್ವಿಸ್ ಅವಧಿಗೂ ಮುನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಲ್ಲಿ ಪಿಎಫ್‌ನಲ್ಲಿ ಜಮೆಯಾದ ಹಣಕ್ಕಾಗಿ ಅರ್ಜಿ ಸಲ್ಲಿಸಿದರೆ, ಸಂಪೂರ್ಣ ಪಾವತಿ ಮಾಡದೆ ವಿನಾ ಕಾರಣ ಸತಾಯಿಸಬಾರದು ಎಂದು ಒತ್ತಾಯಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಎಸ್., ಉಪಾಧ್ಯಕ್ಷೆ ಭವಾನಿ, ಸಂಘಟನ ಕಾರ್ಯದರ್ಶಿ ನಮೃತಾ, ಕೋಶಾಧಿಕಾರಿ ಪಿ.ಎಚ್. ಮಹಮ್ಮದ್, ಜತೆ ಕಾರ್ಯದರ್ಶಿಗಳಾದ ಗಿರಿಜಾ, ಪದ್ಮಾವತಿ ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಭವಿಷ್ಯ ನಿಧಿ ವಲಯ ಆಯುಕ್ತರಿಗೆ ಬೇಡಿಕೆಗಳ ಮನವಿ ಅರ್ಪಿಸಲಾಯಿತು. ಕಾರ್ಮಿಕರು ಸಂಕಷ್ಟವನ್ನು ಅನುಭವಿಸುವಂತಾಗಿದೆ
ಸಂಘಟನೆ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಂತಿಗೆದಾರರ ಹೆಸರು, ಗಂಡನ /ತಂದೆಯ ಹೆಸರು, ಜನ್ಮ ದಿನಾಂಕವನ್ನು ಸರಿಪಡಿಸಿಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ವಂತಿಗೆದಾರನ ಜನ್ಮದಿನಾಂಕ ಒಂದು ವರ್ಷಕ್ಕಿಂತ ಹೆಚ್ಚು ಅಥವಾ ಕಡಿಮೆ ಇರುವುದನ್ನು ಆನ್‌ಲೈನ್‌ನಲ್ಲಿ ದಾಖಲೆ ಸಹಿತ ನೀಡಿದಾಗ ಅದನ್ನು ಅನಗತ್ಯವಾಗಿ ತಿರಸ್ಕರಿಸಲಾಗುತ್ತದೆ. ಇದರಿಂದ ಭವಿಷ್ಯ ನಿಧಿಗೆ ಸಂಬಂಧಪಟ್ಟು ಕಾರ್ಮಿಕರು ಬಹಳಷ್ಟು ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕೂಡಲೇ ಇಲಾಖೆ ಈ ಬಗ್ಗೆ ಗಮನ ಹರಿಸಿ, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.