ಕೋಲಾರ: ಜಿಲ್ಲಾ ಕೇಂದ್ರವಾಗಿದ್ದು, 13 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದರೂ ಸುಸಜ್ಜಿತ ಕಟ್ಟಡ ನೀಡುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿ ವಕೀಲರು ಕಲಾಪಗಳಿಂದ ಹೊರಗುಳಿದು ಸೋಮವಾರ ಪ್ರತಿಭಟನೆ ನಡೆಸಿದರು.
ಕೇಂದ್ರ ವಕೀಲರ ಸಂಘದ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 10.30ರ ವೇಳೆಗೆ ಜಿಲ್ಲಾ ವಕೀಲರ ಸಂಘದಲ್ಲಿ ಸೇರಿದ್ದ ಸಭೆಗೆ ಆಗಮಿಸಿದ ಜಿಲ್ಲಾ ನ್ಯಾಯಾಧೀಶ ಐ.ಎಫ್.ಬಿದರಿ, ಪ್ರತಿಭಟನೆ ಕೈಬಿಡುವಂತೆ ವಕೀಲರ ಮನವೊಲಿಸುವ ಪ್ರಯತ್ನ ನಡೆಸಿದರು.
ಈ ಸಂದರ್ಭದಲ್ಲಿ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶ ಐ.ಎಫ್ ಬಿದರಿ, ತಾವು ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಾಗಲೇ ಜಿಲ್ಲಾ ನ್ಯಾಯಾಲಯಕ್ಕೆ ಸುಸಜ್ಜಿತ ಕಟ್ಟಡಬೇಕು ಎಂದು ಅನಿಸಿತ್ತು ಎಂದರು.
ದಾಖಲೆ ಸಂಗ್ರಹಕ್ಕೆ ಪ್ರಯತ್ನ: ಜಿಲ್ಲಾ ಕೇಂದ್ರದಲ್ಲಿ 13 ಕೋರ್ಟ್‌ಗಳು ಇರುವುದರಿಂದ ಅವಶ್ಯವಿರುವಷ್ಟು ಸೌಲಭ್ಯ ಇಲ್ಲ ಎಂದು ಮನವರಿಕೆ ಆಯಿತು. ಹೊಸ ಕಟ್ಟಡ ಮಂಜೂರಾತಿಗಾಗಿ ಆಡಳಿತಾತ್ಮಕ ನ್ಯಾಯಮೂರ್ತಿಗಳ ಜತೆ 2 ಗಂಟೆ ಕಾಲ ಚರ್ಚಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕಟ್ಟಡಕ್ಕೆ ಹಳೇ ಜಿಲ್ಲಾಧಿಕಾರಿ ಕಚೇರಿಯ ಜಾಗವಿರುವ ಸ್ಥಳಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ಹೋರಾಟದ ನಿರ್ಧಾರ ಬದಲಿಸಿ: ಹಳೇ ಕಚೇರಿ ಕಟ್ಟಡ ಹೊರತುಪಡಿಸಿ ಉಳಿದ ಜಾಗ ನೀಡಲು ಒಪ್ಪಿಗೆ ಸಿಕ್ಕಿದೆ. ಈ ಜಾಗಕ್ಕೆ 41 ಲಕ್ಷ ರೂ. ಪಾವತಿಸಬೇಕಿದ್ದು, ಸರ್ಕಾರದ ಹಂತದಲ್ಲಿ ಸ್ವಲ್ಪ ವಿಳಂಬ ಆಗಿರಬಹುದು. ಆಡಳಿತಾತ್ಮಕ ನ್ಯಾಯಮೂರ್ತಿಗಳು ಸೋಮವಾರ ಸಂಜೆ ಬರಲು ಹೇಳಿದ್ದಾರೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಜತೆಗೆ ಬನ್ನಿ, ಚರ್ಚಿಸೋಣ. ಸಕಾರಾತ್ಮಕ ಬೆಳವಣಿಗೆ ಆಗುತ್ತಿರುವ ಸಂದರ್ಭದಲ್ಲಿ ಹೋರಾಟದ ನಿರ್ಧಾರವನ್ನು ಬದಲಿಸಿ ಎಂದು ನುಡಿದರು.
ಕ್ರಮ ಕೈಗೊಂಡಿಲ್ಲ: ವಕೀಲರ ಸಂಘದ ಪದಾಧಿಕಾರಿಗಳು ಮಾತನಾಡಿ, ಕೋಲಾರದಲ್ಲಿ ಹೊಸ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ಜಿಲ್ಲಾ ಸತ್ರ ನ್ಯಾಯಾಧೀಶರು ಹೈಕೋರ್ಟ್‌ನ ಆಡಳಿತಾತ್ಮಕ ನ್ಯಾಯಮೂರ್ತಿಗಳ ಗಮನಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇರುವ ನ್ಯಾಯಾಲಯದ ಕಟ್ಟಡದಲ್ಲಿ ಮೂಲ ಸೌಲಭ್ಯಗಳಿಲ್ಲ, ಕಿರಿದಾಗಿರುವುದರಿಂದ ಹಾಜರಿರುವ ಕಕ್ಷೀದಾರರಿಗೆ ಕೋರ್ಟ್ ಹಾಲ್ ಒಳಗೆ ಹೋಗಲು ಕಷ್ಟವಾಗುತ್ತಿದೆ.
ಹೋರಾಟಕ್ಕೆ ಸ್ಪಂದಿಸದಿದ್ದಲ್ಲಿ ನಿರಂತರವಾಗಿ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದ ವಕೀಲರು, ಬೇಡಿಕೆ ಈಡೇರದಿದ್ದಲ್ಲಿ ಜು.13ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಆರ್ ಜಯರಾಂ ಎಚ್ಚರಿಸಿದರು. ಹಿರಿಯ ವಕೀಲ ಕೆ.ವಿ.ಶಂಕರಪ್ಪ ಸಾ.ನಾ.ಮೂರ್ತಿ, ಹನುಮಂತಪ್ಪ, ಜಾಕೀರ್ ಹುಸೇನ್, ಶ್ರೀಧರಮೂರ್ತಿ, ಶ್ರೀನಿವಾಸ್, ಎಂ.ಮುನೇಗೌಡ, ಅಮರೇಂದ್ರ, ಅಲ್ಲಿಕುಂಟೆ ಶ್ರೀನಿವಾಸ್ ಇದ್ದರು.