ಕುಮಟಾ: ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯನ್ನು ಕೂಡಲೇ ದುರಸ್ತಿಗೊಳಿಸಿ, ಮರು ಡಾಂಬರೀಕರಣ ಗೊಳಿಸಬೇಕೆಂದು ಆಗ್ರಹಿಸಿ ಕರವೇ ಮುಂದಾಳತ್ವದಲ್ಲಿ ಗ್ರಾಪಂ ಒಕ್ಕೂಟ ಸೇರಿದಂತೆ ಸಾರ್ವಜನಿಕರು ಸೋಮವಾರ ಕತಗಾಲ ಚೆಕ್ ಪೋಸ್ಟ್ ಬಳಿ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಕುಮಟಾದಿಂದ ಶಿರಸಿವರೆಗೂ ರಸ್ತೆ ಹಾಳಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಜನಪ್ರತಿನಿಧಿಗಳುಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ಬೇಸರದ ಸಂಗತಿ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷದಿಂದ ರಸ್ತೆ ದುರಸ್ತಿ ನಡೆದಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗ ಚುನಾವಣಾ ನೀತಿ ಸಂಹಿತೆಯ ನೆಪ ಹೇಳುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯನ್ನೇ ಸಮರ್ಪಕವಾಗಿ ನಿರ್ವಹಿಸಲಾಗದ ಆಡಳಿತ ವ್ಯವಸ್ಥೆಯಿಂದ ಗ್ರಾಮೀಣ ರಸ್ತೆ ಸರಿಪಡಿಸುವ ವಿಶ್ವಾಸ ದೂರವಾಗಿದೆ. ನಮ್ಮ ಬೇಡಿಕೆಯಂತೆ ಕೂಡಲೇ ರಸ್ತೆ ನಿರ್ವಹಣಾ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿ ಮನೆಯ ಸದಸ್ಯರನ್ನು ಬೀದಿಗಿಳಿಸಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಮಾತನಾಡಿ, ಹೊಂಡಮಯವಾದ ರಸ್ತೆಯಿಂದ ಜನ ಸಾಮಾನ್ಯರು 3 ತಿಂಗಳಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಜನ ಸಾಮಾನ್ಯರು ಹೋರಾಟದ ಮೂಲಕವೇ ನ್ಯಾಯ ಒದಗಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರಕ್ಕೆ ಕೋಟಿಗಟ್ಟಲೆ ಹಣ ಮಂಜೂರಾಗಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ಯಾವ ರಸ್ತೆಯನ್ನೂ ಸರಿಪಡಿಸಲಿಲ್ಲ. ಕನಿಷ್ಠ ಪಕ್ಷ ಕುಮಟಾ-ಶಿರಸಿ ರಸ್ತೆಯನ್ನು ಪ್ರಕೃತಿ ವಿಕೋಪದಡಿ ತುರ್ತಾಗಿ ಸರಿಪಡಿಸಬಹುದಿತ್ತು ಎಂದರು.
ಅಳಕೋಡ ಗ್ರಾಪಂ ಅಧ್ಯಕ್ಷ ಕೃಷ್ಣಾನಂದ ವೆರ್ಣೇಕರ ಮಾತನಾಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈಗ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳು ಸುಳ್ಳು ಆಶ್ವಾಸನೆ ಮೂಲಕವೇ ಜನರನ್ನು ನಂಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ರಸ್ತೆಯಲ್ಲಿ ಅಳಕೋಡ ಪಂಚಾಯತ 18 ಕಿ.ಮೀ ಹಾಗೂ ದಿವಗಿ ಪಂಚಾಯತ 7 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಶೀಘ್ರದಲ್ಲೇ ರಸ್ತೆ ದುರಸ್ತಿ ನಡೆಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆ ಅಭಿಯಂತರ ಶಶಿಕಾಂತ ಹಾಗೂ ರಾಜು ಶಾನಭಾಗ ಪ್ರತಿಭಟನಾಕಾರರಿಗೆ ವಸ್ತುಸ್ಥಿತಿಯ ಮಾಹಿತಿ ನೀಡಿದರು.
ಕುಮಟಾ-ಶಿರಸಿ ರಸ್ತೆಯನ್ನು ರಾಷ್ಟ್ಟೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ರಸ್ತೆ ಲೋಕೋಪಯೋಗಿ ಇಲಾಖೆ ಅಡಿಯಲ್ಲಿಲ್ಲ. ಅಲ್ಲದೇ, ಪರಿಸರದ ಸಮಸ್ಯೆಯಿಂದ ಈಗಾಗಲೇ ಟೆಂಡರ್ ಆಗಿರುವ ಹೆದ್ದಾರಿಯ ಅಭಿವೃದ್ಧಿ ಕಾರ್ಯ ನಿಂತಿದೆ. ಆದರೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಶಾಸಕ ದಿನಕರ ಶೆಟ್ಟಿಯವರ ಸೂಚನೆಯಂತೆ ತುರ್ತಾಗಿ ರಸ್ತೆಗೆ ಮರುಡಾಂಬರೀಕರಣ ಮಾಡಲು ಮುಂದಾಗಿದ್ದೆವು. ಚುನಾವಣಾ ನೀತಿ ಸಂಹಿತೆಯಿಂದ ಮತ್ತೆ ಸಮಸ್ಯೆಯಾಗಿದೆ ಎಂದರು.
ಬಳಿಕ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆ ಸರಿಪಡಿಸುವ ಬಗ್ಗೆ ಸ್ಪಷ್ಟನಿಲುವು ತಳೆಯುವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಅಂತಿಮವಾಗಿ ಜಿಲ್ಲಾಧಿಕಾರಿಗಳಿಂದ ವಿಶೇಷ ಅನುಮತಿ ಪಡೆದು ನ.26 ರಿಂದ ಕುಮಟಾ-ಶಿರಸಿ ರಸ್ತೆ ನಿರ್ವಹಣಾ ಕಾಮಗಾರಿ ಆರಂಭಿಸುತ್ತೇವೆ ಎಂದು ಲೋಕೋಪಯೋಗಿ ಅಧಿಕಾರಿಗಳು ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಪ್ರತಿಭಟನಾನಿರತರು ರಸ್ತೆ ತಡೆ ಹಿಂಪಡೆದರು. ಗ್ರಾ.ಪಂ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ರಾಮ ಪಟಗಾರ, ಕಾಂಗ್ರೆಸ್ ಘಟಕಾಧ್ಯಕ್ಷ ಎಸ್.ಎನ್. ಹೆಗಡೆ, ದಿವಗಿ ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೌಡ, ಹೊಲನಗದ್ದೆ ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ಪಟಗಾರ, ಅಳಕೋಡ ಗ್ರಾ.ಪಂ. ಸದಸ್ಯ ದೀಪಕ ನಾಯ್ಕ, ಪ್ರಮುಖರಾದ ತಿಮ್ಮಪ್ಪ ನಾಯ್ಕ, ಮಹೇಂದ್ರ ನಾಯ್ಕ, ವಿನಾಯಕ ಹರಿಕಂತ್ರ ಸೇರಿದಂತೆ ನೂರಾರು ಜನ ಇದ್ದರು.