ಚಿಕ್ಕೋಡಿ: ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೇ ಅಥಣಿ ತಾಲೂಕು ತೆಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳುವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಹೇಳಿದರು.
ರವಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಭಿವೃದ್ಧಿ ದೃಷ್ಠಿಯಿಂದ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಕಳೆದ 25 ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗುತ್ತಿದೆ. ಆದರೆ ಇನ್ನ ಮೇಲೆ ಹೋರಾಟದ ರೂಪುರೇಷ ಉಗ್ರರೂಪ ತಾಳಲಿದೆ ಎಂದರು.
ಕಳೆದ ಒಂದು ವಾರದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದಾಗ ಜಿಲ್ಲಾ ಹೋರಾಟ ಸಮಿತಿ ಭೇಟಿ ಮಾಡಿ ಮನವಿ ಮಾಡುವ ವೇಳೆಯಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ನೀಡುತ್ತಿದ್ದರು ಆದರೆ ಹೋರಾಟದ ಮತ್ತು ಜಿಲ್ಲೆಯ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡುವ ವೇಳೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಧ್ಯಸ್ಥಿಕೆ ವಹಿಸಿದಾಗ ಕೆಲಹೊತ್ತು ಮಾತಿನ ಚಕಮಕಿ ನಡೆದಿದೆ. ಸವದಿ ಅವರ ಮನಸ್ಸಿಗೆ ನೋವಾಗಿದ್ದರೇ ಜಿಲ್ಲಾ ಹೋರಾಟ ಸಮಿತಿ ಕ್ಷೇಮೆಯಾಚಿಸುತ್ತದೆ. ಆದರೆ ಜಿಲ್ಲೆ ಮಾಡಲು ಹಿಂದೆ ಸರಿಯದು ಎಂದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೇನೆಂದು ಭರವಸೆ ನೀಡಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನ ದೊಡ್ಡದಿದೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು, ರಾಜ್ಯಸಭೆ ಸದಸ್ಯರು ಮತ್ತು ಶಾಸಕರು ಇರುವುದರಿಂದ ಜಿಲ್ಲೆ ಘೋಷಣೆಗೆ ಒತ್ತಾಯ ಮಾಡಬೇಕು.
ಬಳ್ಳಾರಿ ಜಿಲ್ಲೆಯ ಒಬ್ಬ ಶಾಸಕ ಜಿಲ್ಲೆಗಾಗಿ ರಾಜೀನಾಮೆ ನೀಡಿದ ಬಳಿಕ ವಿಜಯನಗರ ಜಿಲ್ಲೆ ಮಾಡಲು ಸರ್ಕಾರ ಹೊರಟಿದೆ. ಆದರೆ ಬೆಳಗಾವಿ ಜಿಲ್ಲೆಯ ನಾಯಕರಿಗೆ ಏನಾಗಿದೆ ಎಂದು ಪ್ರಶ್ನಿಸಿದರು. ಸಾಹಿತಿ ಪ್ರೊ| ಎಸ್. ವೈ. ಹಂಜಿ, ಕರವೇ ಜಿಲ್ಲಾ ಸಂಚಾಲಕ ಸಂಜು ಬಡಿಗೇರ, ತುಕರಾಮ ಕೋಳಿ ಮುಂತಾದವರು ಇದ್ದರು.