ಕಾರವಾರ: ಜಿಲ್ಲೆಯ ಗ್ರಾಪಂಗಳ ಮುಖ್ಯ ಪುಸ್ತಕ ಬರಹಗಾರ್ತಿಯರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ತಮ್ಮ ಗೌರವ ಧನ ಹೆಚ್ಚಿಸುವಂತೆ ಆಗ್ರಹಿಸಿ ಜಿಪಂ ಸಿಇಒ ಪ್ರಿಯಾಂಕಾಗೆ ಮನವಿ ಸಲ್ಲಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ನೆರವು ನೀಡುವುದು ಹಾಗೂ ಸರ್ಕಾರದ ಯೋಜನೆಗಳಾದ ವಿಪಿ ಆರ್‌ಪಿ ಜಿಪಿಡಿಪಿ ಸರ್ವೇ ಕೆಲಸ ಮಾಡುವುದು, ಸ್ವತ್ಛ ಭಾರತ ಅಭಿಯಾನದಡಿ ಅರಿವು ಮೂಡಿಸುವ ಕೆಲಸವನ್ನು ಮುಖ್ಯ ಬರಹಗಾರ್ತಿಯಾರಾದ ನಾವು ಮಾಡುತ್ತಿದ್ದೇವೆ. ಮನೆ ಮನೆ ಅರಿವು ಕಾರ್ಯಕ್ರಮದ ಬಗ್ಗೆ ಮಹಿಳಾ ಸಂಘಗಳಿಗೆ ಮಾಹಿತಿ ನೀಡುವ ಮುಖ್ಯ ಪುಸ್ತಕ ಬರಹಗಾರ್ತಿಯರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಗೌರವ ಧನ ಹೆಚ್ಚಿಸಲು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಜಿಲ್ಲೆಯ ಪ್ರತಿ ಗ್ರಾಪಂನಿಂದ ಆಗಮಿಸಿದ್ದ ಸಂಜೀವಿನಿ ಗ್ರಾಪಂ ಒಕ್ಕೂಟದಲ್ಲಿ ಕೆಲಸ ಮಾಡುವ ಮುಖ್ಯ ಪುಸ್ತಕ ಬರಹಗಾರ್ತಿಯರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಸಮವಸ್ತ್ರದಲ್ಲಿ ಏಕರೂಪತೆ ರೂಪಿಸಬೇಕು, ಗುರುತಿನ ಚೀಟಿ ಸೌಲಭ್ಯ ನೀಡಬೇಕು ಹಾಗೂ ತಿಂಗಳ ಗೌರವಧನವನ್ನು 15000 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. 300ಕ್ಕೂ ಹೆಚ್ಚು ಮುಖ್ಯ ಪುಸ್ತಕ ಬರಹಗಾರ್ತಿಯರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವವರು ಕಾರವಾರಕ್ಕೆ ಆಗಮಿಸಿ, ವಿವಿಧ ಬೇಡಿಕೆಗಳನ್ನು ಸರ್ಕರದ ಮುಂದಿಟ್ಟರು.
ಗ್ರಾಪಂ ಲೆಕ್ಕಪತ್ರ ಪುಸ್ತಕ ನಿರ್ವಹಿಸುತ್ತಿದ್ದು, ದಿನನಿತ್ಯದ ದಾಖಲಾತಿ ನಿರ್ವಹಣೆ ಸಹ ಮಾಡುತ್ತಿದ್ದೇವೆ. ಸ್ವಸಹಾಯ ಸಂಘಗಳ ಬಂಡವಾಳ ಮರುಪಾವತಿ ನಿಧಿ ನಿರ್ವಹಣೆ ಮಾಡುವುದರ ಜೊತೆಗೆ ಜೀವನೋಪಾಯ ನಿರ್ವಹಣೆ ಸಲಹೆಗಳನ್ನು ನೀಡುತ್ತಿದ್ದೇವೆ. ಗ್ರಾಪಂಗೆ ಸಂಜೀವಿನಿಯಂತೆ ಕೆಲಸ ಮಾಡುವ ನಮಗೆ ಕಡಿಮೆ ಗೌರವಧನ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಗೌರವ ಧನ ಹೆಚ್ಚು ಮಾಡುವ ಅಧಿಕಾರ ನನ್ನ ಬಳಿ ಇಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆಯುವೆ. ನಿಮ್ಮ ಬೇಡಿಕೆಯನ್ನು ಅವರಿಗೆ ತಿಳಿಸುವೆ. ವರ್ಷದ ರಜಾ ದಿನ ಬಿಟ್ಟು ಎಲ್ಲಾ ದಿನ ಪಂಚಾಯಿತಿಗಳಲ್ಲಿ ಕೆಲಸ ಮಾಡುವುದು ಗಮನಕ್ಕೆ ಬಂದಿದೆ. ಪಂಚಾಯಿತಿಯ ಎಲ್ಲಾ ಮಾಹಿತಿಗಳನ್ನು ಜನರಿಗೆ, ಸ್ವಸಹಾಯ ಸಂಘಗಳಿಗೆ ತಿಳಿಸಲು ಮೊಬೈಲ್ ಹಾಗೂ ನೆಟ್ ಪ್ಯಾಕ್ ಬಳಸುವುದು ಅನಿವಾರ್ಯ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನಿಮ್ಮ ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ, ಇಲಾಖೆ ಎಂಡಿ ಹಾಗೂ ಕಾರ್ಯದರ್ಶಿಗಳ ಗಮನಕ್ಕೆ ತರುವೆನು ಎಂದು ಮುಖ್ಯ ಪುಸ್ತಕ ಬರಹಗಾರ್ತಿಯರಿಗೆ ಸಿಇಒ ಪ್ರಿಯಾಂಕಾ ಭರವಸೆ ನೀಡಿದರು.
ಜಿಲ್ಲೆಯ ಎಲ್ಲಾ 12 ತಾಲೂಕಿನಿಂದ ಪಂಚಾಯತ್ ಸಂಜೀವಿನಿ ಸದಸ್ಯರು ಆಗಮಿಸಿದ್ದರು.
ಹೇಮಾವತಿ ನಾಯ್ಕ, ಸವಿತಾ ನಾಯ್ಕ, ಭುವನೇಶ್ವರಿ ನಾಯ್ಕ, ಸವಿತಾ ಪಟಗಾರ, ಗೀತಾ ನಾಯಕ, ಸುಮಿತ್ರಾ ಹರಿಕಂತ್ರ, ಮಮತಾ, ಸಾವಿತ್ರಿ ಗೌಡ, ಮಂಗಲಾ ನಾಯ್ಕ, ರಮ್ಯ ಶೆಟ್ಟಿ, ನೇತ್ರಾವತಿ ಮುಕ್ರಿ, ನಿಖೀತಾ ಮಾಂಜ್ರೆàಕರ್, ಗ್ರೀಷ್ಮಾ ನಾಯ್ಕ, ಸಾಧನಾ, ಜ್ಯೋತಿ ದೇವಳಿ, ಮೋಹಿನಿ ನಾಯ್ಕ, ಭಾರತಿ, ಶ್ವೇತಾ, ವರ್ಷಾ, ಸುಜಾತಾ ಮುಂತಾದವರು ನೇತೃತ್ವ ವಹಿಸಿದ್ದರು.