ಕೂಡಲಸಂಗಮ: ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಸೋಮವಾರ ರಾಯಚೂರಿನ ರಂಜಾನಭಿ, ರೇಣಕಮ್ಮ, ಅಭಯ, ಬಳ್ಳಾರಿಯ ಕೊಟ್ರಮ್ಮ, ಶಂಕ್ರಮ್ಮ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಸಂಗಮೇಶ್ವರ ದೇವಾಲಯ ಹೊರ ಆವರಣದ ರಥ ಬೀದಿಯ ರಸ್ತೆ ಬಯಲು ಜಾಗದಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ರಾಜ್ಯದ 15 ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮದ್ಯ ನಿಷೇಧ ಆಂದೋಲನ ಸಂಚಾಲಕ ಅಭಯ ಎಂ ಪತ್ರಿಕೆಯೊಂದಿಗೆ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯ ಸಾವಿರಾರು ಕುಟುಂಬಗಳು ಮದ್ಯಪಾನದಿಂದ ಬೀದಿಗೆ ಬೀಳುತ್ತಿವೆ. ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮದ್ಯಪಾನ ನಿಷೇಧಿಸಬೇಕು ಎಂದು ಆಗ್ರಹಿಸಿದರು. ಮದ್ಯಪಾನ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮದಲ್ಲಿ ನಾಲ್ಕು ದಿನಗಳ ಕಾಲ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಅನೇಕ ಮಠಾಧೀಶರು, ಚಿಂತಕರು ಭಾಗವಹಿಸುವರು. 54ಕ್ಕೂ ಅಧಿಕ ಸಂಘಟನೆಗಳು ಪಾಲ್ಗೊಳ್ಳಲಿವೆ. ಬರುವ ದಿನಗಳಲ್ಲಿ ಮದ್ಯಪಾನ ನಿಷೇಧ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ರಾಷ್ಟ್ರಮಟ್ಟದಲ್ಲಿ ನಶಾ ಮುಕ್ತ ಭಾರತ ಆಂದೋಲನ ಆರಂಭಗೊಂಡಿದೆ. ಮಂಗಳವಾರ-ಬುಧವಾರ ಜಲ ಸತ್ಯಾಗ್ರಹ ನಡೆಯಲಿದ್ದು, ಹೋರಾಟಗಾರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವರೆಂದು ತಿಳಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಸ್ವರ್ಣ ಭಟ್ಟ ಮಾತನಾಡಿ, ಮದ್ಯ ನಿಷೇಧ ಹೋರಾಟಗಾರ್ತಿ ರೇಣುಕಮ್ಮ ಅವರ ಒಂದನೇ ವರ್ಷದ ಸ್ಮರಣಾರ್ಥ ಕೂಡಲಸಂಗಮದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಗೌರವ ರಕ್ಷಿಸುವುದು, ಕುಡಿತದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕುಟುಂಬಗಳ ನಾಶವಾಗಬಾರದೆಂಬ ಉದ್ದೇಶದಿಂದ ಈ ಹೋರಾಟ ಹಮ್ಮಿಕೊಂಡಿದೆ.
2019ರಲ್ಲಿ ಬೆಂಗಳೂರಿನಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಉಪ ಮುಖ್ಯಮಂತ್ರಿ ಅಶ್ವತ ನಾರಾಯಣ ಎರಡು ವಾರದೊಳಗೆ ಮುಖ್ಯಮಂತ್ರಿ ಭೇಟಿ ಮಾಡಿಸುವ ಭರವಸೆ ನೀಡಿದ್ದರು. ಎರಡು ತಿಂಗಳು ಕಳೆದರೂ ಇನ್ನೂ ಭೇಟಿಗೆ ಆಹ್ವಾನ ನೀಡಿಲ್ಲ. ಈ ನಿರ್ಲಕ್ಷ್ಯ ಖಂಡಿಸುವುದಾಗಿ ತಿಳಿಸಿದರು.