ನಂಜನಗೂಡು: ಮೈಸೂರು ಜಿಲ್ಲೆಯ ಕೋವಿಡ್ ರೋಗಿಗಳಿಗೆ ಪ್ರತಿನಿತ್ಯ ಬೇಕಾಗಬಹುದಾದ ರೆಮ್‌ಡೆಸಿವಿಯರ್ ಕುರಿತು ಬೇಡಿಕೆ ಇಟ್ಟಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸೋಮವಾರ ನಂಜನಗೂಡು ಕೈಗಾರಿಕಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಯುಬಿಲಿಯಂಟ್ಸ್ ಜೆನರಿಕ್ ಕಾರ್ಖಾನೆಗೆ ಮೈಸೂರಿನ ಸಂಸದ ಪ್ರತಾಪಸಿಂಹ ಅವರೊಡಗೂಡಿ ಆಗಮಿಸಿ ಮಾತನಾಡಿದರು.
ನಮಗೆ ರೆಮ್‌ಡೆಸಿವಿಯರ್ ಅತ್ಯಂತ ಅವಶ್ಯಕತೆಗಳಲ್ಲೊಂದಾಗಿದೆ. ಅದನ್ನು ಉತ್ಪಾದಿಸುವ ಕಂಪನಿಗಳಲ್ಲೊಂದಾದ ಜ್ಯುಬಿಲಿಯಂಟ್ಸ್ ಜೆನರಿಕ್ ಕಾರ್ಖಾನೆ ನಮ್ಮಲ್ಲೇ ಇದ್ದು ಅವರೊಂದಿಗೆ ಚರ್ಚಿಸಿದರೆ ಕೊರತೆ ನೀಗಬಹುದು ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದರಿಂದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದೇವೆಂದರು.
ಜಿಲ್ಲೆಗೆ ಬೇಕಾಗಬಹುದಾದ 2000 ರೆಮ್‌ಡೆಸಿವಿಯರ್ ಅನ್ನು ನೇರವಾಗಿ ಜಿಲ್ಲೆಗೇ ನೀಡುವಂತೆ ಬೇಡಿಕೆ ಸಲ್ಲಿಸಿದ್ದೇವೆ. ಆಡಳಿತ ಮಂಡಳಿಯೂ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದೆ ಎಂದರು.
ಬೇಡಿಕೆ ಪತ್ರ ಸಿದ್ಧಪಡಿಸಿ ಕಾರ್ಖಾನೆಯವರಿಗೆ ನೀಡುತ್ತಿದ್ದು ಶೀಘ್ರ ಕೊರತೆಗೆ ಮುಕ್ತಿಸಿಗಬಹುದು ಎಂಬ ಆಶಯ ವ್ಯಕ್ತಪಡಿಸಿದರು.ನಂಜನಗೂಡು ಶಾಸಕ ಹರ್ಷವರ್ಧನ್,ಕಾರ್ಖಾನೆಯ ಎಚ್‌ಆರ್ ವಿಭಾಗದ ನಿರ್ದೇಶಕ ಸುಬ್ರಹ್ಮಣ್ಯ, ಲಕ್ಷ್ಮೀ ನಾರಾಯಣ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ನಂಜನಗೂಡು ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ,ನಂಜನಗೂಡು ತಾಲೂಕು ಅಧ್ಯಕ್ಷ ಮಹೇಶ, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ವಂತ್, ಡಿವೈಎಸ್‌ಪಿ ಗೋವಿಂದರಾಜ್ ಮತ್ತಿತರರಿದ್ದರು.