Advertisement

ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಕ್ಕೆ ಆಗ್ರಹ

03:38 PM Feb 10, 2020 | Suhan S |

ಸಕಲೇಶಪುರ: ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಯುವ ರೈತ ಸಂಘದ ಪದಾಧಿಕಾರಿಗಳು ಕಾಲೇಜು ಕಟ್ಟಡದ ಎದುರು ಪ್ರತಿಭಟನೆ ನಡೆಸಿದರು.

Advertisement

1990ರಲ್ಲಿ ಆರಂಭವಾದ ಕಾಲೇಜಿಗೆ ಮೂರು ಕೊಠಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಕೊಠಡಿ ಶಿಥಿಲಗೊಂಡ ಕಾರಣದಿಂದ ಗ್ರಾಮಸ್ಥರು ಕಾಲೇಜಿಗೆ ಹೆಚ್ಚುವರಿ ಕೊಠಡಿ ನಿರ್ಮಿಸುವಂತೆ ಮನವಿ ಮಾಡಿದ್ದರು. ಹೀಗಾಗಿ 2006ರಲ್ಲಿ ಗ್ರಂಥಾಲಯ ಸೇರಿದಂತೆ 6 ಕೊಠಡಿಗಳ ಹೊಸ ಕಾಲೇಜು ಕಟ್ಟಡದ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ನಿರ್ಮಾಣ ವೇಗವಾಗಿ ನಡೆದಿತ್ತು. 2008ರ ವೇಳೆಗೆ ಕಟ್ಟಡದ ಕಾಮಗಾರಿ ಶೇ.90 ಮುಗಿದಿದ್ದು, ಅನುದಾನದ ಕೊರತೆ ಕಾರಣ ನೀಡಿ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಪಾಳು ಬಿದ್ದ ಕಟ್ಟಡ:ಕಟ್ಟಡ ಕಾಮಗಾರಿ ಸ್ಥಗಿತಗೊಂಡು 15 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ವಾಗಿಲ್ಲ. ಪಾಳುಬಿದ್ದ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಿಡಿಗೇಡಿಗಳು ಕಿಟಕಿ, ಬಾಗಿಲು ಧ್ವಂಸಗೊಳಿಸಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು ವಾಣಿಜ್ಯ ಹಾಗೂ ಕಲಾ ವಿಭಾಗಗಳು ನಡೆಯುತ್ತಿವೆ. ಆದರೆ, ಕಟ್ಟಡದ ಕೊರತೆ ಕಾರಣ ಹೆಚ್ಚಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿಲ್ಲದಾಗಿದೆ ಎಂದರು.

ಇನ್ನೂ 15ದಿನದೊಳಗಾಗಿ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಹೆತ್ತೂರು ಪಿಡಿಒ ವೀರಭದ್ರಪ್ಪಗೆ ಮನವಿ ಸಲ್ಲಿಸಲಾಯಿತು. ಯುವ ರೈತ ಸಂಘದ ಅಧ್ಯಕ್ಷ ಡಿಲಾಕ್ಷ, ಮಧುಸೂದನ್‌, ಕಿಶೋರ್‌, ಕೀರ್ತಿಕುಮಾರ್‌, ವಿಜಯ್‌, ಮಧುಚಂದ್ರ, ಗ್ರಾಪಂ ಸದಸ್ಯ ಕೃಷ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next