ಕಡೂರು: ತಾಲೂಕಿನ ತೆಂಗು ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರದ ಗಮನ ಸೆಳೆಯಲು ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಒತ್ತಾಯಿಸಿ ಜೂ. 10ರಂದು ಬೆಂಗಳೂರಿಗೆ ರೈತರ, ತೆಂಗು ಬೆಳೆಗಾರರ ನಿಯೋಗ ಹೋಗಿ ಸಂಬಂಧಿ ಸಿದ ಸಚಿವರಿಗೆ ಮನವಿ ನೀಡಲಾಗುವುದು ಎಂದು ಮಾಜಿ ಶಾಸಕ ವೈ.ಎಸ್ .ವಿ. ದತ್ತ ತಿಳಿಸಿದರು.
ಪಟ್ಟಣದ ಶಂಕರ ಮಠದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಈಗಾಗಲೇ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಕಡೂರು ತೆಂಗು ಬೆಳೆಗಾರರ ಕೊಬ್ಬರಿಗೆ ಬೆಂಬಲ ಬೆಲೆ ಇಲ್ಲದೆ ಪರಿತಪಿಸುತ್ತಿದ್ದಾರೆ. ರೈತರ ಸಂಕಷ್ಟವನ್ನು ಕಂಡ ತಾವು ಕೇಂದ್ರ, ರಾಜ್ಯ ಸರ್ಕಾರದ ಗಮನಕ್ಕೆ ತರಲು ಜೂ. 10ರಂದು ಬೆಂಗಳೂರಿಗೆ ರೈತರ ನಿಯೋಗವನ್ನು ಕರೆದೊಯ್ದು ಅಲ್ಲಿನ ತೋಟಗಾರಿಕೆ ಇಲಾಖೆಯ ಮಂತ್ರಿಗಳನ್ನು ಕಂಡು ತೆಂಗು ಬೆಳೆಗಾರರ ಬೇಡಿಕೆಗಳನ್ನು ಖುದ್ದಾಗಿ ಹೇಳಿ ಜೊತೆಗೆ ಮನವಿ ಪತ್ರ ಸಲ್ಲಿಸಿ ಕೊಬ್ಬರಿಗೆ ಕನಿಷ್ಟ 14 ಸಾವಿರ ಬೆಂಬಲ ಬೆಲೆಯನ್ನು ನೀಡಬೇಕೆಂದು ಒತ್ತಾಯ ಮಾಡಲಾಗುವುದು ಎಂದರು.
ಈಗಾಗಲೇ ರಾಗಿ ಖರೀದಿ ಕೇಂದ್ರ ತೆರೆದು ರೈತರ ರಾಗಿಯನ್ನು ಖರೀದಿಸಲು ಸಹಕರಿಸಿದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಬಿನಂದಿಸುತ್ತೇನೆ. ಅದೇ ರೀತಿ ಕೊಬ್ಬರಿಗೂ ಸಹ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಲಿ ಎಂದು ಆಗ್ರಹಿಸುತ್ತೇನೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಸಭೆಯ ಚುನಾವಣೆಗೆ ಸ್ಪ ರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದತ್ತ ಅವರು, ಸೋನಿಯಾ ಗಾಂಧಿ ಈಗಾಗಲೇ ಗೌಡರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಕಾಂಗ್ರೆಸ್ -ಜೆಡಿಎಸ್ ಹೊಂದಾಣಿಕೆಯ ಮೂಲಕ ರಾಜ್ಯಸಭೆ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾತುಕತೆ ನಡೆದಿದೆ. ಜೆಡಿಎಸ್ ಶಾಸಕರು ಸಹ ಒಮ್ಮತದ ಒಪ್ಪಿಗೆ ನೀಡಿದ್ದಾರೆ. ಆದರೆ ಗೌಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಾದು ನೋಡಬೇಕಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿಮಹೇಶ್ವರಪ್ಪ, ಕಡೂರು ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಬೀರೂರು ಪುರಸಭೆಯ ಸದಸ್ಯ ಮೋಹನ್, ಬೀರೂರು ನಗರ ಅಧ್ಯಕ್ಷ ಬಾವಿಮನೆ ಮಧು, ಕೆ. ಬಿದರೆ ಜಗದೀಶ್, ಎಚ್.ಎಂ. ಲೋಕೇಶ್, ಶೂದ್ರ ಶ್ರೀನಿವಾಸ್, ಜೆಡಿಎಸ್ ಜಿಲ್ಲಾ ಸಾಮಾಜಿಕ ಜಾಲತಾಣ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಎಸ್. ರಂಜನ್ ಗೌಡ, ಚಂದ್ರಪ್ಪ ಇದ್ದರು.