ಕಲಬುರಗಿ: ಬೀಜ, ರಸಗೊಬ್ಬರಕ್ಕೆ ನೀಡಿರುವ ಸಹಾಯಧನ ಹೆಚ್ಚಿಸುವಂತೆ, ಸ್ಪಿಂಕ್ಲರ್ ಪೈಪ್ ಹಣ ಆರ್ಟಿಜಿಎಸ್ ಮಾಡಿಸಿಕೊಂಡ ರೈತರಿಗೆ ರಾಜ್ಯ ಸರ್ಕಾರ ತಕ್ಷಣ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಕಾರರು ಜಂಟಿ ಕೃಷಿ ನಿರ್ದೇಶಕರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಪತ್ರ ಸಲ್ಲಿಸಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರೈತರಿಂದ ಹಣ ಸುಲಿಗೆ ಮಾಡಿ ರಿಲಯನ್ಸ್ ನಂತಹ ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿರುವುದು ಕೇಂದ್ರ ಸರಕಾರದ ಕುತಂತ್ರವಾಗಿದ್ದು, ಬೆಳೆ ವಿಮೆ ಕಟ್ಟಿದ ರೈತರಿಗೆ ವಿಮೆ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಮುಂಗಾರು ಬಿತ್ತನೆಗಾಗಿ ಬೀಜ, ರಸಗೊಬ್ಬರ ಖರೀದಿಸಲು ರೈತರು ಪರದಾಡುತ್ತಿದ್ದಾರೆ. ಬೀಜ ಭೂಮಿಗೆ ಹಾಕಲು ಮಳೆರಾಯನ ಸಲುವಾಗಿ ಕಾಯುತ್ತಿರುವ ರೈತರು, ಇನ್ನೊಂದೆಡೆ ಮತ್ತು ಮಡ್ಡಿ ಭೂಮಿ ಅಥವಾ ಬಂಜರು ಭೂಮಿಯಲ್ಲಿ ರೈತರು ಒಣ ಮಣ್ಣಿನಲ್ಲಿ ಬಿತ್ತನೆ ಪ್ರಾರಂಭಿಸುತ್ತಾರೆ. ರೈತರು ಹೀಗಾಗಿ ಒಣ ಮಣ್ಣಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆ ಹಿಂಪಡೆಯುವಂತೆ ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಬೀಜ ಮತ್ತು ರಸಗೊಬ್ಬರದ ಸಹಾಯಧನ ಹೆಚ್ಚಿಸಬೇಕು. ಸ್ಪಿಂಕ್ಲರ್ ಪೈಪ್‌ಗೆ ಅರ್ಜಿ ಹಾಕಿ ಮತ್ತು ವಂತಿಗೆ ಹಣ ಆರ್‌ಟಿಜಿಎಸ್ ಮಾಡಿ ಹಣ ಕಟ್ಟಿಕೊಂಡು ರಾಜ್ಯ ಸರಕಾರ ಹಣ ಬಿಡುಗಡೆ ಮಾಡಲಾರದೇ ರೈತರಿಗೆ ಅನ್ಯಾಯ ಮಾಡಿದೆ. ಜಿಲ್ಲೆಯ ಪ್ರತಿಯೊಂದು ರೈತ ಸಂರ್ಪ ಕೇಂದ್ರದಿಂದ ಸರಾಸರಿ ರೈತರ ಅರ್ಜಿಗಳಲ್ಲಿ 35 ಜನ ರೈತರ ಅರ್ಜಿಗಳು ಬಾಕಿ ಉಳಿದಿವೆ. ಅರ್ಜಿಗಳು ಧೂಳು ತಿನ್ನುತ್ತಿವೆ. ಕೋಟ್ಯಂತರ ರೂ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರ ವೆಚ್ಚದಲ್ಲಿ ವಿಮಾ ಸಂಸ್ಥೆಗಳು ಲಾಭ ಗಳಿಸಲು ಉದ್ದೆಶಪೂರ್ವಕವಾಗಿ ದೋಷಪೂರಿತ ನೀತಿ ರೂಪಿಸಲಾಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ಗುರ್ನಾಮಾ ಚಾರುಣಿ ಆರೋಪಿಸಿದರು.
ಫಲಾನುಭವಿಗಳೆಂದು ಕರೆಯಲ್ಪಡುವ ರೈತರಿಗೆ ವಿಮಾ ಮೊತ್ತವೇ ಸಿಕ್ಕಿಲ್ಲ. ಅವರಲ್ಲಿ ಹೆಚ್ಚಿನವರು ಸಾಲ ಪಡೆದ ರೈತರಾಗಿರುವುದರಿಂದ ಬ್ಯಾಂಕ್‌ಗಳು ರೈತರಿಗೆ ವಿಮಾ ರಕ್ಷಣೆಗಾಗಿ ಪಡೆಯುವ ಹಣವನ್ನು ಸಾಲಕ್ಕೆ ಬಂದ ತಕ್ಷಣ ಕಡಿತಗೊಳಿಸುತ್ತವೆ. ಎನ್‌ಡಿಎ ಸರ್ಕಾರದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ) ರಫೇಲ್ ಹಗರಣಕ್ಕಿಂತಲೂ ದೊಡ್ಡ ಹಗರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಪಾಂಡುರಂಗ್ ಮಾವಿನಕರ್, ಗೌರಮ್ಮ ಪಿ. ಪಾಟೀಲ್, ಸುಭಾಷ ಜೇವರ್ಗಿ, ಸಾಯಿಬಣ್ಣಾ ಗುಡಬಾ, ದೇವಿಂದ್ರಪ್ಪ ಪಾಟೀಲ್ ಕೊರವಿ, ದಿಲೀಪಕುಮಾರ್, ಸಿದ್ಧಪ್ಪ, ಎಂ.ಬಿ. ಸಜ್ಜನ್, ವಿಠಲ್ ಯಳವಂತಗಿ ಮುಂತಾದವರು ಪಾಲ್ಗೊಂಡಿದ್ದರು.