ಮದ್ದೂರು: ಪುರಸಭೆ ಕಚೇರಿಯಲ್ಲಿ ಸ್ಥಳೀಯ ಸಾರ್ವಜನಿಕರಿಗೆ ಇ-ಸ್ವತ್ತು ನೀಡದೆ ವಂಚಿಸುತ್ತಿದ್ದು, ಕೆಲ ರೆವಿನ್ಯೂ ಇಲಾಖೆ ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಶ್ರೀನಿವಾಸಶೆಟ್ಟಿ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಪಟ್ಟಣದ ಪುರಸಭೆ ಸಿಡಿಎಸ್ ಭವನದಲ್ಲಿ ನಡೆದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರು. ಕಳೆದ 6 ತಿಂಗಳಿಂದಲೂ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಇ-ಸ್ವತ್ತು ನೀಡಲು 7 ಸಾವಿರ ರೂ. ಗಳ ಹಣದ ಬೇಡಿಕೆ ಇಡುತ್ತಾರೆಂದು ದೂರಿದರು.
ಕ್ರಮಕ್ಕೆ ಆಗ್ರಹ: ಪುರಸಭೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಕಾರಣ ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿವೆ. ಕೂಡಲೇ ಮುಖ್ಯಾಧಿಕಾರಿ ಮುರುಗೇಶ್ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಎಸಿಬಿ ಇನ್ಸ್‌ಪೆಕ್ಟರ್ ರವಿಶಂಕರ್ ಮಾತನಾಡಿ, ಕೂಡಲೇ ಸಂಬಂಧಿಸಿ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಅಗತ್ಯ ಕೆಲಸಗಳನ್ನು ನಿರ್ವಹಿಸುವಂತೆ ವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಸೂಚಿಸಿದರು.
ಅಕ್ರಮಗಳಿಗೆ ಕಡಿವಾಣ: ಮುಂದಿನ ದಿನಗಳಲ್ಲಿ ಎಸಿಬಿ ಅಧಿಕಾರಿಗಳು ಪ್ರತಿ ಗ್ರಾಪಂ ವ್ಯಾಪ್ತಿ ಹಾಗೂ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲಿದ್ದು, ಸಾರ್ವಜನಿಕರು ಅಕ್ರಮ, ಅವ್ಯವಹಾರ ಕಂಡುಬಂದಲ್ಲಿ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಎಸಿಬಿ ಇನ್ಸ್‌ಸ್ಪೆಕ್ಟರ್ ರವಿಶಂಕರ್ ತಿಳಿಸಿದರು.
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಭ ಮಾಡದೆ ತ್ವರಿತಗತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈ ವೇಳೆ ಎಸಿಬಿ ಅಧಿಕಾರಿ ಮಹೇಶ್ ಸೇರಿದಂತೆ ಇತರರಿದ್ದರು.