ದೇವನಹಳ್ಳಿ : ರಾಜ್ಯದ ಎಲ್ಲಾ ಗ್ರಾಪಂ ನೌಕರರ ವೇತನಕ್ಕೆ ಬಾಕಿ ಇರುವ 390 ಕೋಟಿ ರೂ. ಹಣವನ್ನು ಸರ್ಕಾರ ಬಜೆಟ್ ನಲ್ಲಿ ಸೇರಿಸಿ ನೀಡಬೇಕು ಹಾಗೂ ಕನಿಷ್ಠ ವೇತನ ಜಾರಿ ಗೊಳಿಸಿ ಇಎಫೆಎಸ್ ಮೂಲಕ ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಜಿಲ್ಲಾ ಗ್ರಾಪಂ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬೇಡಿಕೆಗಳು: ಕರ ವಸೂಲಿ ಗಾರರ ಬಡ್ತಿಗೆ ಕಾರ್ಯದರ್ಶಿ ಗ್ರೇಡ್ 2 ಹುದ್ದೆ ಶೇ.70 ರಿಂದ 100ಕ್ಕೆ ಹೆಚ್ಚಿಸಬೇಕು. ಲೆಕ್ಕ ಸಹಾಯಕರ ಹುದ್ದೆ ಶೇ.30 ರಿಂದ 50ಕ್ಕೆ , ಕಂಪ್ಯುಟರ್ ಆಪರೇಟರ್ ಹುದ್ದೆ ಬಡ್ತಿಗೆ ಪ್ರತ್ಯೇತ ಜೇಷ್ಠತಾ ನಿಯಮಾನುಸಾರ ತಯಾರಿಸಿ ಶೇ.10 ಹುದ್ದೆ ನಿಗದಿ ಪಡಿಸಬೇಕು. ಕರ್ನಾಟಕ ರಾಜ್ಯದಲ್ಲಿ 6 ಸಾವಿರ ಜನ ಸಂಖ್ಯೆ ಮೇಲ್ಪಟ್ಟು ಜನ ವಸತಿ ಗ್ರಾಪಂಗಳನ್ನು ಗ್ರೇಡ್ 2 ಪಂಚಾಯಿತಿಯಿಂದ ಗ್ರೇಡ್ 1 ಪಂಚಾಯಿತಿಗಳನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಜೆಟ್‌ನಲ್ಲಿ ಘೋಷಿಸಿ: ಈ ವೇಳೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ರಾಜ್ಯದ ಗ್ರಾಪಂ ಯಲ್ಲಿ 61 ಸಾವಿರ ನೌಕರರು ಅಧಿಕೃತ ಪಟ್ಟಿಯಲ್ಲಿದ್ದು, ನೌಕರರಿಗೆ ಸರ್ಕಾರ ಇಎಫೆಎಸ್ ಮೂಲಕ ವೇತನ ನೀಡಬೇಕಾಗಿದೆ. ಹಿಂದಿನ ಸರ್ಕಾರದಲ್ಲಿ 518 ಕೋಟಿ ನೀಡಿದ್ದು, ತ್ತೈಮಾಸಿಕ ಕಂತಿನ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಸುಮಾರು 5-6 ತಿಂಗಳುಗಳ ಸಂಬಳ ಬಾಕಿ ಇದೆ. ಸರ್ಕಾರ ಬಾಕಿ ವೇತನಕ್ಕೆ ಬಜೆಟ್‌ನಲ್ಲಿ 390 ಕೋಟಿ ನೀಡಿದರೆ ಮಾತ್ರ, ರಾಜ್ಯದ ಎಲ್ಲಾ ನೌಕರರಿಗೂ ಬಾಕಿ ಸಮೇತ ವೇತನ ಸಿಗಲಿದ್ದು, ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಿಐಟಿಯು ಉಪಾಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಎಸ್‌ಎಸ್‌ಎಲ್‌ಎಸಿ ಪಾಸಾದ ಕಚೇರಿ ಸಹಾಯಕ , ವಾಟರ್ ಮ್ಯಾನ್, ಸ್ವತ್ಛತಾಗಾರರು, ಇನ್ನಿತರೆ ನೌಕಕರಿಗೆ ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆ ಗಳಿಗೆ ಬಡ್ತಿ ನೀಡಬೇಕು. ಜಿಲ್ಲೆಯ ಸಿಇಒ ನ್ಯಾಯಾಲಯದಲ್ಲಿ ಕಳೆದ ಐದು ವರ್ಷಗಳಿಂದ ಇತ್ಯರ್ಥವಾಗದೇ ಹಲವಾರು ನೌಕರರ ಪ್ರಕರಣಗಳು ನೆನೆಗುದ್ದಿಗೆ ಬಿದ್ದಿವೆ. ಇಂತಹ ಪ್ರಕರಣಗಳನ್ನು ಪರಿಶೀಲಿಸಿ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ನೌಕರರಿಗೂ ತುಟಿ ಭತ್ಯೆ ಸಹಿತ ಕನಿಷ್ಠ ವೇತನ ಹಾಗೂ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸಬೇಕು. ವೇತನ ನೀಡದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಎಂದರು.
ಮನವಿ:ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಎಂನಾಗರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಖಜಾಂಚಿ ಮಧುಕುಮಾರ್, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬೈರೇಗೌಡ, ಕಾರ್ಯದರ್ಶಿ ಮುರುಳೀಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.