Advertisement

ಕಳಸಾ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

03:17 PM Dec 27, 2019 | Team Udayavani |

ಬೈಲಹೊಂಗಲ: ಮಲಪ್ರಭಾ ನದಿಗೆ ಮಹದಾಯಿ ಮತ್ತು ಕಳಸಾ ಬಂಡೂರಿ ನಾಲಾ ಜೋಡಣೆಗೆ ರಾಜ್ಯ-ಕೇಂದ್ರ ಸರ್ಕಾರ, ರಾಜ್ಯದ ಎಲ್ಲ ಜನಪ್ರತಿನಿಧಿ  ಗಳು, ಸರ್ವಪಕ್ಷದ ನಾಯಕರು ಒಗ್ಗಟ್ಟಿನಿಂದ ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹಾಕಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಕಳಸಾ ಬಂಡೂರಿ ನಾಲಾ ಜೋಡನಾ ಹೋರಾಟ ಸಮಿತಿ ವತಿಯಿಂದ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಪಟ್ಟಣದ ರಾಯಣ್ಣ ವೃತ್ತದಲ್ಲಿ ಸ್ವಯಂ ಪ್ರೇರಣೆಯಿಂದ ಸೇರಿದ ಪ್ರತಿಭಟನಾಕಾರರು ಮಲತಾಯಿ ಧೋರಣೆಗೆ ಒಳಗಾದ ಉತ್ತರ ಕರ್ನಾಟಕ ಭಾಗದ, ಅಸಮರ್ಥ ಜನಪ್ರತಿನಿಧಿಗಳಿಂದ 3 ದಶಕಗಳಿಂದ ನೆನಗುದಿಗೆ ಬಿದ್ದು ದಿನಕ್ಕೊಂದು ಹೇಳಿಕೆಗೆ ವಿಷಯ ವಸ್ತುವಾಗಿರುವ ಕಳಸಾ-ಬಂಡೂರಿ ನಾಲೆಗಳ ಶೀಘ್ರ ಜೋಡನೆಗೆ ಒತ್ತಾಯಿಸಿದರು.

ಹೋರಾಟ ಸಮಿತಿ ಮುಖಂಡ ಶಿವರಂಜನ ಬೋಳನ್ನವರ ಮಾತನಾಡಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ವಿಚಾರಕ್ಕೆ ಕೇಂದ್ರ ಸಚಿವರು ದಿನಕ್ಕೊಂದು ಪತ್ರ ಬರೆಯುತ್ತಿರುವುದು ರಾಜಕೀಯ ಗೊಂದಲಕ್ಕೆ ಕಾರಣವಾಗುತ್ತಿದೆ. ಹೋರಾಟ ನಡೆಸುತ್ತಿರುವ ರೈತ ಮುಖಂಡರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಮಹದಾಯಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಮೊದಲು ಕೇಂದ್ರ-ರಾಜ್ಯ ಸರ್ಕಾರ, ಸರ್ವ ರಾಜಕೀಯ ಪಕ್ಷಗಳ ಮುಖಂಡರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

ಮುಖಂಡರಾದ ಸಿ.ಕೆ.ಮೆಕ್ಕೇದ, ಮಹಾಂತೇಶ ತುರಮರಿ, ಜಿಪಂ ಸದಸ್ಯ ಶಂಕರ ಮಾಡಲಗಿ, ಮುಖಂಡರಾದ ಮಡಿವಾಳಪ್ಪ ಹೋಟಿ, ಎಫ್‌. ಎಸ್‌. ಸಿದ್ಧನಗೌಡರ ಮಾತನಾಡಿ, ಮಹದಾಯಿ ಹೋರಾಟದ ಕಿಚ್ಚು ಮತ್ತೆ ಭುಗಿಲೇಳುವಂತೆ ಮಾಡಿದೆ. ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ರಾಜ್ಯದ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಯಾವುದೇ ಹುರುಳಿಲ್ಲ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣ ಗೆಜೆಟ್‌ ಅ ಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಕರ್ನಾಟಕದ ಜನರ ಸಮಸ್ಯೆಯನ್ನು ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ತಕ್ಷಣ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೂ ಮೊದಲು ಕಳಸಾ ಬಂಡೂರಿ ನಾಲಾ ಜೋಡನಾ ಹೋರಾಟ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ವಕೀಲ ಮಹಾಂತೇಶ ಮತ್ತಿಕೊಪ್ಪ, ಮುರುಗೇಶ ಗುಂಡೂರ, ಮಹೇಶ ಹರಕುಣಿ, ರುದ್ರಪ್ಪ ಹೊಸಮನಿ, ಬುಡ್ಡೇಸಾಬ ಶಿರಸಂಗಿ, ಈಶ್ವರ ಬೋರಕನವರ, ಮಂಜುನಾಥ ಜ್ಯೋತಿ, ಸುಭಾಸ ತುರಮರಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ ಗುಂಡೂರ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next