ಬಂಗಾರಪೇಟೆ: ತಾಲೂಕಿನ ಗಡಿಭಾಗದ ಕಾಮಸಮುದ್ರ ಹಾಗೂ ಬೂದಿಕೋಟೆ ಹೋಬಳಿಯ ಗ್ರಾಮಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆಗಳ ಉಪಟಳ ಮಿತಿಮೀರಿದೆ. ಸತತ ಬರಗಾಲದ ನಡುವೆಯೂ ಬೆಳೆದ ಬೆಳೆಗಳನ್ನು ನಾಶ ಮಾಡಿದ್ದರಿಂದ ಅಪಾರ ನಷ್ಟವಾಗಿದೆ. ಆದರೂ ಸರ್ಕಾರ ಕಾಡಾನೆಗಳ ಉಪಟಳದಿಂದ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಿಸಿದ ಅರಣ್ಯ ಇಲಾಖೆ ಕಾಡಾನೆಗಳ ದಾಳಿಯಿಂದ ಶಾಶ್ವತ ಮುಕ್ತಿ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆನೆಗಳ ದಾಳಿಯಿಂದ ರೈತರಿಗೆ ನಷ್ಟ: ಹಲವು ವರ್ಷಗಳಿಂದ ಕಾಡಾನೆಗಳ ಹಿಂಡು ತಮಿಳುನಾಡಿನಿಂದ ನೀರು ಹಾಗೂ ಆಹಾರಕ್ಕಾಗಿ ರಾಜ್ಯದ ಗಡಿಯಾಗಿರುವ ಕಾಮಸಮುದ್ರ ಹೋಬಳಿಯ ಗ್ರಾಮಗಳಾದ ಬಲಮಂದೆ, ದೊಡ್ಡಪನ್ನಾಂಡಹಳ್ಳಿ, ಭೀಮಗಾನಹಳ್ಳಿ, ತೊಪ್ಪನಹಳ್ಳಿ, ಕದರಿನತ್ತ ಅರಣ್ಯ ಪ್ರದೇಶದ ಮೂಲಕ ಪ್ರವೇಶ ಮಾಡಿ ರಾಜ್ಯಕ್ಕೆ ಪ್ರವೇಶಿಸುತ್ತವೆ. ಬಳಿಕ ಕಾಡಿನಲ್ಲಿ ನೀರು, ಆಹಾರ ಸಿಗದೇ ಗ್ರಾಮಗಳತ್ತ ಲಗ್ಗೆಯಿಟ್ಟು ಬರದಲ್ಲಿಯೂ ಬೆವರು ಸುರಿಸಿ ರೈತರು ಬೆಳೆದಿರುವ ವಾಣಿಜ್ಯ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ಮೊದಲೇ ನಷ್ಟದಲ್ಲಿರುವ ರೈತರು ಆನೆಗಳ ಹಾವಳಿಯಿಂದ ಮತ್ತಷ್ಟು ಹೈರಾಣಾಗುವಂತಾಗಿದೆ ಎಂದು ದೂರಿದ್ದಾರೆ.
ಕಾಡಾನೆಗಳೆಂದರೆ ಗ್ರಾಮಸ್ಥರು ಮೊದಲು ಹೆದರುವಂತಾಗಿತ್ತು. ಆನೆಗಳು ಗ್ರಾಮದ ಸುತ್ತಮುತ್ತ ಹೊಲಗಳಿಗೆ ಬಂದರೆ ಮನೆಯಿಂದ ಹೊರಗಡೆ ಬರಲೂ ಹೆದರುವಂತಾಗಿತ್ತು. ಆದರೆ ಈಗ ಮಾಮೂಲಾಗಿದೆ. ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲುವ ಸಲುವಾಗಿ ಆನೆಗಳನ್ನು ಹಿಮ್ಮಟ್ಟಿಸಲು ರೈತರು ಮುಂದಾಗಿ ಹತ್ತಾರು ಮಂದಿ ಜೀವ ಕಳೆದುಕೊಂಡರೂ ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಾರ ಪ್ರಮಾಣದ ಬೆಳೆ ನಾಶ: ಎರಡು ತಿಂಗಳಿಂದ ಕಾಮಸಮುದ್ರ ಮತ್ತು ಬೂದಿಕೋಟೆ ಹೋಬಳಿಯ ಸುತ್ತಮುತ್ತಲಿನ ಗಡಿ ಭಾಗದಲ್ಲಿ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ನಾಶಗೊಳಿಸುತ್ತಿದೆ. ಆನೆಗಳನ್ನು ಓಡಿಸಲು ಹೋದರೆ ಎಲ್ಲಿ ಪ್ರಾಣ ಹಾನಿಯಾಗುವುದೋ ಎಂಬ ಭಯಯೊಂದೆಡೆಯಾದರೆ, ಹಗಲು ರಾತ್ರಿ ಬೆವರು ಸುರಿಸಿದ ಬೆಳೆ ಕಣ್ಣಮುಂದೆಯೇ ಹಾಳಾಗುವುದನ್ನು ನೋಡಲಾಗದೆ ಪರದಾಡುವರು. ಅರಣ್ಯ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಅವರು ಕಾಡಾನೆಗಳನ್ನು ಹಿಮ್ಮಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿದ್ದರಿಂದ ರೈತರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಕಡತದಲ್ಲಷ್ಟೇ ಉಳಿದಿರುವ ಆನೆ ಕಾರಿಡಾರ್!: ಪದೇ ಪದೆ ಆನೆಗಳು ಬಂದು ಹೋಗುವುದರಿಂದ ಕಾಮಸಮುದ್ರ ಹೋಬಳಿಯ ಪ್ರದೇಶವನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಬೇಕೆಂದು ರೈತರು ಸರ್ಕಾರಕ್ಕೆ ಹತ್ತು ವರ್ಷಗಳ ಹಿಂದೆಯೇ ಪ್ರಸ್ತಾಪವೆ ಸಲ್ಲಿಸಿದರು. ವನ್ಯಜೀವಿ ಧಾಮ ಮಾಡುವುದರಿಂದ ಕಾಡಿನಿಂದ ಗ್ರಾಮಗಳ ಕಡೆಗೆ ಬಾರದಂತೆ ಬೇಲಿ ಅಳವಡಿಸಲಾಗುತ್ತದೆ. ಅವುಗಳಿಗೆ ಆಹಾರ ಸಸ್ಯ, ಗಿಡಗಳನ್ನು ಬೆಳೆಸಿ ನೀರು ಪೂರೈಕೆ ಮಾಡುವುದು ಸೇರಿದಂತೆ ಅದಕ್ಕಾಗಿಯೇ ಅರಣ್ಯ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡುವರು. ಈ ಕಡತ ಸಹ ಹತ್ತು ವರ್ಷಗಳಿಂದ ಧೂಳು ತಿನ್ನುತ್ತಿದೆ.
ಸರ್ಕಾರ ಹಾಗೂ ಅರಣ್ಯ ಇಲಾಖೆಯು ಕಾರಿಡಾರ್ ಯೋಜನೆಗೆ ಅನುದಾನ ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆಯೇ ವಿನಃ ಇದುವರೆಗೂ ಕಾರ್ಯಗತವಾಗಿಲ್ಲ, ಇನ್ನೂ ಎಷ್ಟು ಪ್ರಾಣ ಹಾನಿ, ಬೆಳೆ ಹಾನಿ ಆದ ಮೇಲೆ ಸರ್ಕಾರ ಈ ಕಡೆ ಕಣ್ಣಾಕುವುದೋ, ಬರೀ ಪರಿಹಾರ ನೀಡಿದರೆ ಸಾಕೇ, ಶಾಶ್ವತವಾದ ಪರಿಹಾರ ಬೇಡವೇ ಎಂದು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ದ ಕಿಡಿಕಾರಿದ್ದಾರೆ.
ಕಾಡಾನೆಗಳ ದಾಳಿಯಿಂದ ನಾಶ ಮಾಡಿದ ಬೆಳೆಗಳಿಗೆ ಪರಿಹಾರ ನೀಡಲಾಗುತ್ತಿದೆ. 2019-20ನೇ ಸಾಲಿನ ಪ್ರಸ್ತುತ 40 ಲಕ್ಷ ಪರಿಹಾರ ನೀಡಿದ್ದು, ತಮಿಳುನಾಡಿನಿಂದ ಬರುವ ಕಾಡಾನೆ ತಡೆಯಲು ಸಾಧ್ಯವಾಗುತ್ತಿಲ್ಲ. ಕಾಡಾನೆ ತಡೆಯಲು ಸುತ್ತಲು 30 ಕೀ.ಮಿ. ಉದ್ದದ ರೈಲ್ವೆ ಇಲಾಖೆ ಬ್ಯಾರಿಕೇಡ್ಸ್ ಕಾರಿಡಾರ್ ನಿರ್ಮಾಣಕ್ಕೆ 35 ಕೋಟಿ ಯೋಜನೆ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
-ಸಂತೋಷಕುಮಾರ್, ವಲಯ ಅರಣ್ಯಾಧಿಕಾರಿ
ಗಡಿಭಾಗದ ಗ್ರಾಮಗಳಿಗೆ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿರುವುದರಿಂದ ರೈತರು ಬದುಕು ಸಂಕಷ್ಟದಲ್ಲಿದೆ. ಕೃಷಿ ಚಟುವಟಿಕೆ ಮಾಡಲಾಗುತ್ತಿಲ್ಲ. ಸರ್ಕಾರದ ಪರಿಹಾರ ಸಾಕಾಗುತ್ತಿಲ್ಲ. ಬೆಳೆಗಳಿಗೆ ರೈತರು ಹಾಕಿರುವ ಬಂಡವಾಳದಲ್ಲಿ ಕೆವಲ ಶೇ.10ರಷ್ಟು ಮಾತ್ರ ನೀಡಿದರೆ ಉಳಿದ ನಷ್ಟ ಭರಿಸುವವರು ಯಾರು? ಕಾಡಾನೆಗಳಿಂದ ಶಾಶ್ವತ ಮುಕ್ತಿಗೆ ಸರ್ಕಾರ ಕ್ರಮಕೈಗೊಳ್ಳಬೇಕು.
-ಪಿಚ್ಚಹಳ್ಳಿ ಗೋವಿಂದರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರು
* ಎಂ.ಸಿ.ಮಂಜುನಾಥ್