Advertisement

ಕಲಗುರ್ಕಿ ಬಳಿ ರೈಲ್ವೆ ಸೇತುವೆ ಕಾಮಗಾರಿ ತ್ವರಿತಕ್ಕೆ ಆಗ್ರಹ

03:25 PM Sep 17, 2019 | Suhan S |

ವಿಜಯಪುರ: ನೀರಾವರಿ ಕಾಲುವೆಗೆ ನೀರು ಹರಿಸಲು ಕಲಗುರ್ಕಿ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಐದು ದಿನಗಳಲ್ಲಿ ಕಾಮಗಾರಿ ಮುಗಿಸದಿದ್ದರೆ ರೈಲ್ವೆ ಹಳಿ ಮೇಲೆ ಮಲಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.

Advertisement

ಸೋಮವಾರ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪಾದಯಾತ್ರೆ ನಡೆಸಿದರು. ನಗರದ ಗಾಂಧಿಧೀಜಿ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಅನ್ನದಾತರು, ನಗರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ತೆರಳಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯ ನೀರಾವರಿ ಯೋಜನೆಗಳ ಕಾಮಗಾರಿ ವಿಷಯದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಕಲಗುರ್ಕಿ ರೈಲ್ವೆ ಸೇತುವೆಗಳ ಕೆಳಗೆ ಪುಸ್ಸಿಂಗ್‌ ಬಾಕ್ಸ್‌ ನಿರ್ಮಾಣ ನೆಪದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸುತ್ತಿದ್ದಾರೆ. ಆರೇಳು ತಿಂಗಳ ಹಿಂದೆ ಕೂಡ ಕೂಡಗಿ ಬಳಿ ಪುಸ್ಸಿಂಗ್‌ ಬಾಕ್ಸ್‌ ಕಾಮಗಾರಿ ವಿಷಯದಲ್ಲೂ ಇದೇ ರೀತಿ ಸಮಸ್ಯೆ ಮಾಡಿದ್ದರಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದರು. ನಮ್ಮ ಸಂಘಟನೆ ಮೂಲಕ ರೈತರು ಪ್ರತಿಭಟನೆ ನಡೆಸಿದ ಬಳಿಕ ನೀರು ಹರಿಸಲು ಅವಕಾಶ ಕಲ್ಪಿಸಿದ್ದರು ಎಂದು ದೂರಿದರು.

ಇದೀಗ ಕಲಗುಕಿ-ತಳೆವಾಡ ಗ್ರಾಮದ ಬಳಿ ಹಾದು ಹೋಗಿರುವ ರೈಲ್ವೆ ಹಳಿ ಕೆಳಗಡೆ ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮನಗೂಳಿ ಶಾಖಾ ಕಾಲುವೆ ಹಾಯ್ದು ಹೋಗಿದ್ದು ಅಲ್ಲಿ ಪುಸ್ಸಿಂಗ್‌ ಬಾಕ್ಸ್‌ ಕಾಮಗಾರಿ ನಡೆಯುತ್ತಿದೆ. ಈ ನೆಪದಲ್ಲಿ ನೀರು ಹರಿಸುವುದನ್ನು ರೈಲ್ವೆ ಇಲಾಖೆ ತಡೆ ಹಿಡಿದಿದೆ. ಇದರಿಂದ ಆ ಭಾಗದ ಸುಮಾರು 15 ಹಳ್ಳಿಗಳಲ್ಲಿ ಕುಡಿಯುವ ನೀರಿನ ತತ್ವಾರ ಉಂಟಾಗಿದೆ. ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ತಕ್ಷಣ ಕಾಮಗಾರಿ ನಿಲ್ಲಿಸಿ ಅಥವಾ ಪಕ್ಕದಲ್ಲಿ ಬೇರೆ ಕಾಲುವೆ ತೋಡಿ ಪೈಪ್‌ ಅಳವಡಿಸಿ ಕಾಲುವೆಗೆ ನೀರು ಹರಿಸಿ ಕೆರೆ ತುಂಬಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಅಧಿಕಾರಿಗಳು, ಶೀಘ್ರವೇ ಸೇತುವೆ ಕಾಮಗಾರಿ ಮುಗಿಸಿ ನಾಲೆಗೆ ನೀರು ಹರಿಸಲು ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪದ ರೈತರು ಕಾಮಗಾರಿ ಮುಗಿಸುವ ಕುರಿತು ನಿರ್ದಿಷ್ಟ ದಿನವನ್ನು ಪ್ರಕಟಿಸಬೇಕು ಎಂದು ಪಟ್ಟು ಹಿಡಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಮಜಾಯಿಸಿ ನೀಡಿದರು.

Advertisement

ಸಂಘಟನೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಮುಖಂಡರಾದ ಅಪ್ಪುಗೌಡ ಪಾಟೀಲ (ಮನಗೂಳಿ), ಹುಣಶ್ಯಾಳ ಶ್ರೀಮಠದ ಸಂಗನಬಸವ ಶ್ರೀಗಳು ಹೋರಾಟ ಬೆಂಬಲಿಸಿ ಮಾತನಾಡಿದರು.

ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಹೊನಕೇರಪ್ಪ ತೆಲಗಿ, ಈರಣ್ಣ ದೇವರಗುಡಿ, ಶಾರದಾ ಲಮಾಣಿ, ಕೃಷ್ಣಪ್ಪ ಬಮರಡ್ಡಿ, ಮಲ್ಲಯ್ಯ ಮಠಪತಿ, ದಯಾನಂದ ವಸ್ತ್ರದ, ಶ್ರೀಶೈಲ ನಾಗೋಡ, ರಾಮಣ್ಣ ಶೀರಾಗೋಳ, ಸಿದ್ದನಗೌಡ ಬಿರಾದಾರ, ಚನ್ನಪ್ಪ ತೋಟದ, ವಿಠuಲ ಕರಿಗೇರ, ಮಹೇಶ ಬಿರಾದಾರ, ದ್ಯಾಮಣ್ಣ ಕಾಡಸಿದ್ದ, ಬಾಪು ಬೆಲ್ಲದ, ಸಿದ್ದು ದೇಸಾಯಿ, ರೇವಣಪ್ಪ ಕಾಡಸಿದ್ದ, ಶ್ರೀಶೈಲ ಸಂಗಾಪುರ, ಶಂಕ್ರಪ್ಪ ತೋಟದ, ಸಿದ್ದಪ್ಪ ಕಲಬೀಳಗಿ, ಪ್ರಭು ಬಸ್ತವಾಡ, ಯಲ್ಲಪ್ಪ ಬಿರಾದಾರ, ಬಸವರಾಜ ಬಮರಡ್ಡಿ, ಮಲ್ಲಪ್ಪ ತೋಟದ, ಲಕ್ಷ್ಮಣ ಬಾಲ್ಯಾಳ, ಈರಣ್ಣ ಪೂಜಾರಿ, ಚಿದಯ್ಯ ಮಠಪತಿ, ಕಲ್ಲಯ್ಯ ವಸ್ತ್ರದ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next