ಚಿತ್ರದುರ್ಗ: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಎಐಟಿಯುಸಿ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯೂನಿಸ್ಟ್ ಪಕ್ಷದ ಕಾರ್ಯಾಲಯದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಕಡಿಮೆ ವೇತನ ನೀಡುತ್ತಿವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ತಿಂಗಳಿಗೆ ಹದಿನೆಂಟು ಸಾವಿರ ರೂ. ನಿಗದಿಪಡಿಸಬೇಕು. ಕಾರ್ಯಕರ್ತೆಯರಿಗೆ 6000 ಮತ್ತು ಸಹಾಯಕಿಯರಿಗೆ 3000 ರೂ. ಪಿಂಚಣಿ ನೀಡುವ ಯೋಜನೆ ಜಾರಿಯಾಗಬೇಕು. ಸೇವಾ ಹಿರಿತನದ ಆಧಾರದ ಮೇಲೆ ವೇತನವನ್ನು ಹೆಚ್ಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಎಸ್‌ಐ ಮತ್ತು ಪಿಎಫ್ ಜಾರಿ ಮಾಡಬೇಕು ಎಂದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಹತ್ತಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕನಿಷ್ಠ ವೇತನ, ಕೆಲಸದ ಭದ್ರತೆ, ಪಿಂಚಣಿ, ಇಎಸ್‌ಐ,
ಭವಿಷ್ಯ ನಿಧಿ ಸೇಇದಂತೆ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ. 2011ರಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಗೌರವಧನ ಹೆಚ್ಚಳ ಮಾಡಿರುವುದನ್ನು ಬಿಟ್ಟರೆ ಇದುವರೆಗೂ ಯಾವುದೇ ಸರ್ಕಾರಗಳು ಗೌರವಧನವನ್ನು ಹೆಚ್ಚಿಸಿಲ್ಲ. ಕಾರ್ಯಕರ್ತೆಯರು ಮಾಸಿಕ ಮೂರು ಸಾವಿರ ರೂ. ಹಾಗೂ ಸಹಾಯಕಿಯರು 1500 ರೂ.ಗಳಿಗೆ ಕಳೆದ ಒಂಭತ್ತು ವರ್ಷಗಳಿಂದ ದುಡಿಯುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಿಂದ ನಯಾಪೈಸೆ ಜಾಸ್ತಿ ಮಾಡಿಲ್ಲ. ಅಕ್ಟೋಬರ್ 2018ಕ್ಕೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಶೇ. 50 ರಷ್ಟು ಹೆಚ್ಚಳ ಮಾಡಿ ಆದೇಶಿಸಿದ್ದರೂ ಇನ್ನೂ ಜಾರಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಗೌರವಧನವನ್ನು ಕೂಡಲೆ ಬಿಡುಗಡೆ ಮಾಡಿದರು. ಇಎಸ್‌ಐ ಮತ್ತು ಪಿಎಫ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜಮುನಾಬಾಯಿ, ಭಾಗ್ಯಮ್ಮ, ವಿನೋದಮ್ಮ, ರತ್ನಮ್ಮ, ಗಣೇಶ್, ಸತ್ಯಕೀರ್ತಿ, ಸಾವಿತ್ರಮ್ಮ, ರಾಧಮ್ಮ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.