Advertisement

ಬಿಡುಗಡೆಯಾದ ಚಿತ್ರಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

11:06 AM Mar 13, 2018 | Team Udayavani |

ಯುಎಫ್ಓ ಮತ್ತು ಕ್ಯೂಬ್‌ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ಭಾರತದ ಚಲನಚಿತ್ರರಂಗ, ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾರ್ಚ್‌ 2ರಿಂದ ಹೊಸ ಚಿತ್ರಗಳ ಬಿಡುಗಡೆ ರದ್ದಾದರೆ, ಕರ್ನಾಟಕದಲ್ಲಿ ಕಳೆದ ಶುಕ್ರವಾರದಿಂದ (ಮಾರ್ಚ್‌ 9ರಿಂದ) ಯಾವುದೇ ಹೊಸ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ.

Advertisement

ಅಷ್ಟೇ ಅಲ್ಲ, ಸಮಸ್ಯೆ ಬಗೆಹರಿಯುವವರೆಗೂ ಅನಿರ್ಧಿಷ್ಟ ಕಾಲ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಲಾಗಿದೆ. ಮುಂದಿನ ವಾರ ಹೇಗೋ ಗೊತ್ತಿಲ್ಲ. ಆದರೆ, ಈ ವಾರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ಕೆಲವೇ ದಿನಗಳ ಹಿಂದಿನ ವಿಷಯವನ್ನು ತೆಗೆದುಕೊಂಡರೆ, ವಾರಕ್ಕೆ ಏಳೆಂಟು ಸಿನಿಮಾಗಳು ಬಿಡುಗಡೆಯಾದ ಉದಾಹರಣೆಗಳಿದ್ದವು. ಇದರಿಂದ ಚಿತ್ರಮಂದಿರಗಳಿಗೆ ಹಾಹಾಕಾರ ಎದ್ದಿತ್ತು ಎಂದರೂ ತಪ್ಪಿಲ್ಲ.

ಆದರೆ, ಈಗ ಹೊಸ ಬಿಡುಗಡೆ ಇಲ್ಲದಿರುವುದರಿಂದ, ಚಿತ್ರಮಂದಿರದವರು ಪರ್ಯಾಯವಾಗಿ ಬೇರೆಬೇರೆ ಚಿತ್ರಗಳಿಗಾಗಿ ಎದುರು ನೋಡುವಂತಾಗಿದೆ. ಹೊಸ ಚಿತ್ರಗಳು ಇಲ್ಲದ ಸಂದರ್ಭದಲ್ಲಿ ಹಿಂದೆ ಬಿಡುಗಡೆಯಾದ ಕೆಲವು ಜನಪ್ರಿಯ ಚಿತ್ರಗಳನ್ನೇ ಪುನಃ ಬಿಡುಗಡೆ ಮಾಡುವಂತಾಗಿದೆ. ಪುನೀತ್‌ ರಾಜಕುಮಾರ್‌ ಅಭಿನಯದ “ರಾಜಕುಮಾರ’, “ಅಂಜನಿಪುತ್ರ’, ಗಣೇಶ್‌ ಅಭಿನಯದ “ಚಮಕ್‌’, ಗುರುನಂದನ್‌ರ “ರಾಜು ಕನ್ನಡ ಮೀಡಿಯಂ’ ಮುಂತಾದ ಚಿತ್ರಗಳು ಮರುಪ್ರದರ್ಶನವಾಗುತ್ತಿವೆ.

ಇನ್ನು ಈ ಹಿಂದೆ ಬಿಡುಗಡೆಯಾಗಿ, ಕಾರಣಾಂತರಗಳಿಂದ ಚಿತ್ರಮಂದಿರಗಳಿಂದ ಬೇಗ ಎತ್ತಂಗಡಿಯಾದ ಚಿತ್ರಗಳು ಸಹ ಮತ್ತೂಮ್ಮೆ ಬಿಡುಗಡೆಯಾಗುತ್ತಿವೆ. ಈಗ ಚಿತ್ರಗಳ ಅಭಾವದಿಂದಾಗಿ ಅಂತಹ ಚಿತ್ರಗಳಿಗೂ ಬೇಡಿಕೆ ಹೆಚ್ಚುತ್ತಿರುವುದು ವಿಶೇಷ. ಇನ್ನು ಈಗಾಗಲೇ ಬಿಡುಗಡೆಯಾದ ಚಿತ್ರಗಳಿಗೆ ಈ ಕಾಲ ಬಹಳ ಅನುಕೂಲಕರ ಎಂದರೆ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದು “ಟಗರು’. ಕನ್ನಡವಷ್ಟೇ ಅಲ್ಲದೆ, ಪರಭಾಷೆಯ ಚಿತ್ರಗಳಿಂದಲೂ ಯಾವುದೇ ಸ್ಪರ್ಧೆ ಇರದ ಕಾರಣದ, ಚಿತ್ರದ ಪ್ರದರ್ಶನ ಚೆನ್ನಾಗಿದೆ.

ಅರ್ಜುನ್‌ ಸರ್ಜಾ ಅವರ “ಪ್ರೇಮ ಬರಹ’ ಚಿತ್ರವು ಎರಡ್ಮೂರು ವಾರಗಳ ನಂತರ ಬೇರೆ ಚಿತ್ರಗಳಿಗೆ ಚಿತ್ರಮಂದಿರವನ್ನು ಬಿಟ್ಟುಕೊಡಬಹುದು ಎಂಬ ನಂಬಿಕೆ ಚಿತ್ರರಂಗದ ವಲಯದಲ್ಲಿತ್ತು. ಆದರೆ, ಯಾವುದೇ ಸ್ಪರ್ಧೆ ಇಲ್ಲದ ಕಾರಣ ಚಿತ್ರವು ಯಶಸ್ವಿಯಾಗಿ ಐದನೇ ವಾರಕ್ಕೆ ಕಾಲಿಟ್ಟು ಪ್ರದರ್ಶನವಾಗುತ್ತಿದೆ. ಇನ್ನು ಮಾರ್ಚ್‌ 2ರಂದು ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ, ಸ್ವಲ್ಪ ಸುಧಾರಣೆ ಕಂಡಿರುವುದು “ಪ್ರೀತಿಯ ರಾಯಭಾರಿ’ ಮಾತ್ರ. ಮಿಕ್ಕಂತೆ ಮೂರು ಚಿತ್ರಗಳು ಬದಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next