Advertisement

ಬೆಳೆದ ಎಲ್ಲ ತೊಗರಿ ಖರೀದಿಸಲು ಆಗ್ರಹ

10:20 AM Feb 21, 2018 | |

ಕಲಬುರಗಿ: ರೈತರು ಬೆಳೆದ ಎಲ್ಲ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎತ್ತಿನ ಬಂಡಿಗಳೊಂದಿಗೆ ಬೃಹತ್‌ ಪ್ರತಿಭಟನೆಗೆ ಮುಂದಾದ ಮಾರುತಿ ಮಾನ್ಪಡೆ ಸೇರಿದಂತೆ ರೈತ ಮುಖಂಡರನ್ನು ಬಂಧಿಸಿದ ಘಟನೆ ಮಂಗಳವಾರ ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ನಡೆಯಿತು.

Advertisement

ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಎತ್ತಿನ ಬಂಡಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಲು ಹೋಗುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ, ಅಖೀಲ ಕಿಸಾನ್‌ ಸಭಾ, ಸಹಕಾರಿ ಸಂಘಗಳ ಒಕ್ಕೂಟ, ರೈತ ಉತ್ಪಾದಕರ ಸಂಘಟನೆ, ತೊಗರಿ ಬೆಳೆಗಾರರ ಹೋರಾಟ ಸಮಿತಿ ಚಿತ್ತಾಪೂರ, ಹೈ.ಕ. ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೈನ್ಯ, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಸಮಿತಿಯ ಕಾರ್ಯಕರ್ತರನ್ನು ಪೊಲೀಸರು ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ತಡೆದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ತೊಗರಿ ಬೆಳೆಗಾರರ ನೋಂದಣಿ ಅವಧಿ ಇನ್ನೊಂದು ತಿಂಗಳು ವಿಸ್ತರಿಸಬೇಕು, ಎಫ್‌ಪಿಒ, ಟಿಎಪಿಸಿಎಂಎಸ್‌ ಒಳಗೊಂಡಂತೆ ಇನ್ನು ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಬೇಕು, ಹೊರದೇಶದಿಂದ ಆಮದಾಗುವ ಬೇಳೆಕಾಳುಗಳ ಮೇಲೆ ಶೇ.35ರಷ್ಟು ಆಮದು ಶುಲ್ಕ ಹಾಕಬೇಕು, ಡಾ| ಎಂ.ಎಸ್‌. ಸ್ವಾಮಿನಾಥನ್‌ ವರದಿಯಂತೆ 7500 ರೂ.ಗಳ ಬೆಂಬಲ ಬೆಲೆ ನೀಡಬೇಕು. 2015-16ರಲ್ಲಿ ಬಾಕಿ ಉಳಿದ ಬೆಳೆವಿಮೆ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮಾರುತಿ ಮಾನ್ಪಡೆ, ಮೌಲಾಮುಲ್ಲಾ, ಬಸವರಾಜ ಪವಾಡಶೆಟ್ಟಿ, ಮೊಬಿನ್‌ ಅಹ್ಮದ್‌, ಮಲ್ಲಿಕಾರ್ಜುನ ಸತ್ಯಂಪೇಟ್‌, ಮಂಜುನಾಥಗೌಡ, ಮಲ್ಲಣ್ಣಗೌಡರು, ಪಾಂಡುರಂಗ ಮಾವಿನಕರ್‌, ಶಂಕರಗೌಡ ಭಂಕೂರ, ಶರಣಬಸಪ್ಪ ಮಮಶೆಟ್ಟಿ, ಶರಣಬಸಪ್ಪ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದರು. 

20 ಕ್ವಿಂಟಲ್‌ ತೊಗರಿ ಖರೀದಿಗೆ ಆಗ್ರಹ
ಕಲಬುರಗಿ: ರಾಜ್ಯ ಸರಕಾರದ ನಿರ್ಧಾರಗಳು ತೊಗತಿ ಬೆಳೆಗಾರರನ್ನು ಸಂಪೂರ್ಣ ಅಧೀರರನ್ನಾಗಿಸಿವೆ. ಬೆಂಬಲ ಬೆಲೆಯಂತೆ ಖರೀದಿ ಆರಂಭಿಸಿತು. ಅದನ್ನು ಕೂಡಲೇ ನಿಲ್ಲಿಸಿಬಿಟ್ಟತು. ಈಗ ಪುನಃ ಖರೀದಿ ಮಾಡುವುದಾಗಿ ಹೇಳಿದ್ದರೂ 10 ಕ್ವಿಂಟಲ್‌ ಮಿತಿ ಹೇರಿದೆ. ಆದ್ದರಿಂದ ಇಂತಹ ಮೇಲಾಟದಿಂದ ಹಿಂದೆ ಸರಿದು ಕೂಡಲೇ ಮಾತು ಕೊಟ್ಟಂತೆ 20 ಕ್ವಿಂಟಲ್‌ ತೊಗರಿ ಖರೀದಿ ಮಾಡಬೇಕು ಎಂದು ಎಂಎಲ್‌ಸಿ ಅಮರನಾಥ ಪಾಟೀಲ ಆಗ್ರಹಿಸಿದ್ದಾರೆ.
ಈ ನಿಟ್ಟಿನಲ್ಲಿ ಸಭಾಪತಿಗಳಿಗೆ ಪತ್ರ ಬರೆದ ಅವರು, ರಾಜ್ಯ ಸರಕಾರದ ಬೇಜವಾಬ್ದಾರಿತನದಿಂದಾಗಿ ಇವತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 9 ಜಿಲ್ಲೆಗಳಲ್ಲಿ ತೊಗರಿ ಖರೀದಿ ಕೇಂದ್ರಗಳಲ್ಲಿ ಒಟ್ಟು 3.15 ಲಕ್ಷ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ಈ ಪೈಕಿ ಕೇವಲ 91 ಸಾವಿರ ರೈತರಿಂದ ಮಾತ್ರವೇ ತೊಗರಿ ಖರೀದಿ ಮಾಡಲಾಗಿದೆ. ಇನ್ನುಳಿದ ತೊಗರಿ ಖರೀದಿ ಮಾಡಲು ಸರಕಾರ ಮೀನಾಮೇಷ ಎಣಿಸುತ್ತಿದೆ. ಇನ್ನೊಂದೆಡೆ ತೊಗರಿ ಖರೀದಿ ಮಾಡಿ ತಿಂಗಳಾದರೂ ಇನ್ನೂ ರೈತರ ಖಾತೆಗಳಿಗೆ ಹಣ ಹಾಕಿಲ್ಲ ಎಂದು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next