ತಾಳಿಕೋಟೆ: ಕೃಷಿ ಹಾಗೂ ಕೂಲಿಯನ್ನೆ ನಂಬಿರುವ ರೈತರು ಸಾಲ ಮಾಡಿ ಸತತ ಕಳೆದ ಮೂರು ವರ್ಷದಿಂದ ವಿಮೆ ಕಂತು ತುಂಬಿದ್ದಾರೆ. ಇತ್ತ ಬೆಳೆಯೂ ಬಂದಿಲ್ಲ, ಮತ್ತೂಂದೆಡೆ ಪರಿಹಾರವೂ ಬಂದಿಲ್ಲ. ಕೂಡಲೇ ಫಸಲ್ ಬೀಮಾ ಯೋಜನೆ ಮೇಲೆ ರೈತರು ನಂಬಿಕೆ ಕಳೆದುಕೊಳ್ಳುವ ಮುಂಚೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದರು.
ಸೋಮವಾರ ಉಪ ತಹಶೀಲ್ದಾರ್ ಗೆ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಅವರು, ತಾಲೂಕಿನ ಕೆಲವು ಕಡೆಗಳಲ್ಲಿ ಒಂದು ಪ್ರದೇಶದ ಕೆಲವು ರೈತರಿಗೆ ಫಸಲ್ ಬೀಮಾ ಯೋಜನೆ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಹಣ ಜಮೆಯಾಗಿಲ್ಲ. ಕೆಲವು ಪ್ರದೇಶದ ರೈತರಿಗೆ ಹೆಚ್ಚಿಗೆ ಹಣ ಜಮೆಯಾದರೆ ಇನ್ನೊಂದು ಪ್ರದೇಶದ ರೈತರಿಗೆ ಕಡಿಮೆ ಹಣ ಜಮೆಯಾಗಿದೆ ಎಂದರು.
ವಿಮೆ ಕಂಪನಿಯವರು ಅವೈಜ್ಞಾನಿಕವಾಗಿ ವರದಿ ಸಲ್ಲಿಸಿದ ಅಧಿಕಾರಿಗಳ ಕುಮ್ಮಕ್ಕಿನಿಂದ ವಿಮೆ ಹಣ ಗೋಲಮಾಲ್ ಮಾಡಲು ನಡೆದಿರುವ ಕುತಂತ್ರವೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ವೀಕ್ಷಣೆ ಮಾಡುವವರು ಬೇರೆ ಕಡೆ ಕುಳಿತು ಅಂದಾಜು ವರದಿ ಸಲ್ಲಿಸಿದಾಗಲೂ ಈ ಘಟನೆ ನಡೆದಿರಲು ಸಾಧ್ಯತೆಗಳಿವೆ ಎಂದು ಆರೋಪಿಸಿದರು.
ಫಸಲ್ ಬಿಮಾ ಯೋಜನೆ ಬಗ್ಗೆ ರೈತರು ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೂ ಮುಂಚೆ ಜನರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಅದೇ ರೀತಿ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈ ಕೊಟ್ಟು ರೈತರು ಬೀಜ ಗೊಬ್ಬರ ಭೂಮಿಗೆ ಚೆಲ್ಲಿ ಮುಗಿಲಿನತ್ತ ಮುಖ ಮಾಡಿದ್ದಾರೆ. ಅದಕ್ಕೆ ಮಾಡಿದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಲ್ಲಿದ್ದಾರೆ. ಆದಷ್ಟು ಬೇಗ ಹಳೆಯ ವಿಮೆ ಜಮಾ ಆಗುವಂತೆ ಮತ್ತು ಈ ವರ್ಷದ ಮುಂಗಾರು ವಿಫಲ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಕಲಕೇರಿ ಪಟ್ಟಣದ ಅಧ್ಯಕ್ಷ ಶಾಂತಯ್ಯ ಗಣಾಚಾರಿ, ಹೋಬಳಿ ಅಧ್ಯಕ್ಷ ಮೆಹಬೂಬ ಭಾಷಾ ಮನಗೂಳಿ, ಉಪಾಧ್ಯಕ್ಷ ಪುಂಡಲೀಕ ಚವ್ಹಾಣ ಇದ್ದರು.