ಕೋಲಾರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ನಗರದ 8ನೇ ವಾರ್ಡ್ ನ ಬೊಂಬೂಬಜಾರ್‌ನ ನಿವಾಸಿಗಳು ಹಾಗೂ ಮಹಿಳೆಯರು ಪೌರಾಯುಕ್ತರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, 3 ತಿಂಗಳಿಂದ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಒಂದೂವರೆ ವರ್ಷದ ಹಿಂದೆ ಬೋರ್‌ವೆಲ್ ರೀಡ್ರಿಲ್ ಮಾಡಲಾ ಗಿದ್ದು, 3 ತಿಂಗಳ ಹಿಂದೆ ನೀರು ನಿಂತು ಹೋಗಿದೆ. ಇದೀಗ ಮತ್ತೆ ರೀಡ್ರಿಲ್ ಮಾಡ ಬೇಕಿದ್ದು, ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ತೀವ್ರವಾಗಿದ್ದು, ಸದ್ಯಕ್ಕೆ ಟ್ಯಾಂಕರ್‌ಗಳ ಮೂಲಕವಾದ್ರೂ ಪೂರೈಕೆ ಮಾಡಬೇಕು. ಇಲ್ಲವೆ, ಹೊಸ ಕೊಳವೆಬಾವಿ ಯನ್ನಾದರೂ ಕೊರೆಯಿಸಿಕೊಡಿ ಎಂದು ಆಗ್ರಹಿಸಿದರು.
ಮಹಿಳೆಯರ ದೂರು ಸ್ವೀಕರಿಸಿ ಮಾತ ನಾಡಿದ ಪೌರಾಯುಕ್ತ ಟಿ.ಆರ್.ಸತ್ಯನಾರಾ ಯಣ, ಈ ಬಗ್ಗೆ ನನ್ನ ಗಮನಕ್ಕೆ ಯಾರೂ ದೂರು ಸಲ್ಲಿಸಿಲ್ಲ. ಕೂಡಲೇ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸ್ಥಳದಲ್ಲೇ ಬೋರ್‌ವೆಲ್ ಏಜೆನ್ಸಿಯವರಿಗೆ ಕರೆ ಮಾಡಿ ರೀಡ್ರಿಲ್ ಕುರಿತು ಚರ್ಚಿಸಿದರು. ಸದ್ಯ ನಗರಸಭೆಗೆ ಡಿಸಿಯವರೇ ಅಧ್ಯಕ್ಷರಿದ್ದಾರೆ. ಅನುದಾನಕ್ಕೂ ಯಾವುದೇ ರೀತಿಯ ಸಮಸ್ಯೆಯಿಲ್ಲ, ಶೀಘ್ರ ಬಗೆಹರಿಸುವ ಭರವಸೆ ನೀಡಿದರು. ಬೋರ್‌ವೆಲ್ ವಿಚಾರವಾಗಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಸದ್ಯ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೊಂಬುಬಜಾರ್ ಭಾಗದ ಲಕ್ಷ್ಮೀ, ಭಾಗ್ಯಮ್ಮ, ಈಶ್ವರಮ್ಮ, ಭಾರತಮ್ಮ, ಜಯಲಕ್ಷ್ಮ್ಮಮ್ಮ, ತುಳಸಿ, ಕೃಷ್ಣಪ್ಪ, ಸರೋಜಮ್ಮ, ಮುನಿಯಮ್ಮ, ಭವಾನಿ, ಸರಸ್ವತಿ, ಮೌನಿಕ ಮತ್ತಿತರರು ಭಾಗವಹಿಸಿದ್ದರು.