ಕುಷ್ಟಗಿ: ಪಟ್ಟಣದ ಮುಖ್ಯ ರಸ್ತೆಯ ಕೆಇಬಿ ಪಕ್ಕದ ಪುರಸಭೆ ಮಳಿಗೆಗಳು ಮೇಲ್ನೋಟಕ್ಕೆ ಸರ್ಕಾರಿ ನಿಯಮದಲ್ಲಿ ಒಳ ಒಪ್ಪಂದದಲ್ಲಿ ಖಾಸಗಿ ನಿಯಮದಲ್ಲಿ ಹರಾಜಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಕ್ರಮ ಹರಾಜು ರದ್ದುಗೊಳಿಸಿ ಮರು ಟೆಂಡರ್ ಮಾಡಬೇಕೆಂದು ಪುರಸಭೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಟೆಂಡರ್ ಹರಾಜು ಪ್ರಕ್ರಿಯೆ ವಿರೋಧಿಸಿದ ಪುರಸಭೆ ಕಾಂಗ್ರೆಸ್ ಸದಸ್ಯರು, ಕೆಇಬಿ ಪಕ್ಕದ ಪುರಸಭೆ ಕೆಳಗೆ 9 ಹಾಗೂ ಮೇಲಂತಸ್ತಿನಲ್ಲಿ 7 ಸೇರಿದಂತೆ ಒಟ್ಟು 16 ಮಳಿಗೆಗಳಿವೆ. ಕಳೆದ ಸೆ. 5ರಂದು ಈ ಮಳಿಗೆಗಳ ಟೆಂಡರ್ ಹರಾಜು ಪ್ರಕ್ರಿಯೆಯಲ್ಲಿ 68 ಜನ ಅರ್ಜಿ ಸಲ್ಲಿಸಿದ್ದರು.
ಹರಾಜು ಪ್ರಕ್ರಿಯೆಗೆ ಒಂದು ದಿನ ಮೊದಲೇ (ಸೆ. 4) ಇದೇ ಹಳೆ ಪ್ರವಾಸಿ ಮಂದಿರದಲ್ಲಿ ಖಾಸಗಿಯಾಗಿ, ಹರಾಜುದಾರರ ಸಮ್ಮುಖದಲ್ಲಿ ಪ್ರತಿ ಮಳಿಗೆ 1 ಲಕ್ಷ ರೂ.ದಿಂದ 4.80 ಲಕ್ಷ ರೂ.ವರೆಗೆ ಬಿಡ್ ಹೆಚ್ಚಿಸಿದ್ದಾರೆ. ಈ ಹೆಚ್ಚಿನ ದರ ಬಿಡ್ ಮಾಡಿದವರಿಗೆ ಮಾತ್ರ ಮಳಿಗೆ ನೀಡಿದ್ದಾರೆ. ಸೆ. 5ರಂದು ನಿಯಮಬದ್ಧವಾಗಿ ಸೀಮಿತ ಸಂಖ್ಯೆಯಲ್ಲಿ ಹರಾಜುದಾರರ ಟೆಂಡರ್ ಪ್ರಕ್ರಿಯೆ ನಡೆಸಿ, 6 ಸಾವಿರ ರೂ. ದಿಂದ 7 ಸಾವಿರ ರೂ. ಒಳಗಿನ ದರದಲ್ಲಿ ಅದರ ಮೇಲೆ 50 ರೂ. ದಿಂದ 300 ರೂ.ವರೆಗೆ ವ್ಯತ್ಯಾಸ ಮಾಡಿ ವ್ಯವಸ್ಥಿತವಾಗಿ ಮಾಡಿಕೊಳ್ಳಲಾಗಿದೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.
ಇದರಿಂದ ಪುರಸಭೆ ಈ 16 ಮಳಿಗೆಗಳಿಂದ ಪ್ರತಿ ತಿಂಗಳ ಲಕ್ಷಾಂತರ ರೂ. ಬರುವ ಆದಾಯಕ್ಕೆ ಕೊಕ್ಕೆ ಹಾಕಿದೆ. ಮೇಲ್ನೋಟಕ್ಕೆ ಮಳಿಗೆಗಳು ಸರ್ಕಾರಿ ದರದಲ್ಲಿ, ಒಳ ಒಪ್ಪಂದದಲ್ಲಿ ಖಾಸಗಿ ವ್ಯವಹಾರ ನಡೆದಿದೆ. ಇದಕ್ಕೆ ಪುರಸಭೆ ಅಧ್ಯಕ್ಷರ ಸಹೋದರ ನಾಗಯ್ಯ ಹಿರೇಮಠ ನೇತೃತ್ವ ವಹಿಸಿದ್ದಾರೆ. ಇದಕ್ಕೆಲ್ಲಾ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಕುಮ್ಮಕ್ಕು ಇದೆ ಎಂದು ಪುರಸಭೆ ಸದಸ್ಯರಾದ ಚಿಂರಂಜೀವಿ ಹಿರೇಮಠ, ಮಹಿಬೂಬಸಾಬ್ ಕಮ್ಮಾರ, ರಾಮಣ್ಣ ಬಿನ್ನಾಳ ಹಾಗೂ ಶೌಕತ್ ಕಾಯಕಗಡ್ಡಿ, ಯಮನೂರು ಸಂಗಟಿ, ಶರಣಪ್ಪ ನಾಯಕ್, ಉಸ್ಮಾನ್ ಕಲಬುರಗಿ ತಿಳಿಸಿದರು.
16 ಮಳಿಗೆಗಳ ಹರಾಜು ಪಾರದರ್ಶಕವಾಗಿ ನಡೆದಿಲ್ಲ. ಈ ಟೆಂಡರ್ ರದ್ದುಗೊಳಿಸಿ, ಜಿಲ್ಲಾ ಧಿಕಾರಿಗಳ ಅ ಧೀನದಲ್ಲಿ ಮರು ಟೆಂಡರ್ ಮಾಡಬೇಕಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಈ ಮಳಿಗೆಗಳ ಪಕ್ಕದ ಮಳಿಗೆಗಳ ಬಾಡಿಗೆ 10ರಿಂದ 15 ಸಾವಿರ ರೂ. ಇದೆ. ಪುರಸಭೆ ಈ ಮಳಿಗೆಗಳು 12 ವರ್ಷದವರೆಗೆ ಕೇವಲ 6 ಸಾವಿರ ರೂ. ಮೇಲ್ಪಟ್ಟು ಅಗ್ಗದ ದರದಲ್ಲಿವೆ. ಬಿಡ್ ಹೆಚ್ಚಿಸಿದರೂ, ಕಡಿಮೆ ಬೆಲೆಗೆ ನೀಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಪ್ರಕಾಶ ಬೆದವಟ್ಟಿ 28,400 ರೂ. ಮಳಿಗೆ ನಂಬರ್ 8ಕ್ಕೆ ಬಿಡ್ ಮಾಡಿದ್ದರು. ಆದರೆ ಇವರನ್ನು ಹಿಂದೆ ಸರಿಸಿ 6,900 ರೂ. ಸದರಿ 8ನೇ ನಂಬರ್ ಮಳಿಗೆ ಬೇರೊಬ್ಬರಿಗೆ ಹರಾಜಾಗಿದೆ. ಇದರಿಂದ ಪ್ರತಿ ತಿಂಗಳ ಪುರಸಭೆಗೆ ಸಂದಾಯವಾಗುವ ಒಂದೂವರೆ ಲಕ್ಷ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. –
ಚಿರಂಜೀವಿ ಹಿರೇಮಠ, ಪುರಸಭೆ ಸದಸ್ಯ