Advertisement

ಕಲಾಪ ಕಲಹಕ್ಕೆ ಬಿಜೆಪಿ ನಿರ್ಧಾರ: ದಲಿತರ ಹಣ ಗ್ಯಾರಂಟಿಗೆ, ವಾಲ್ಮೀಕಿ, ಮುಡಾ ಹಗರಣ ಪ್ರಸ್ತಾವ

12:42 AM Jul 12, 2024 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಜು. 15ರಿಂದ ಜು. 26ರ ವರೆಗೆ ನಡೆಯಲಿದ್ದು, ಅಧಿವೇಶನದ ಮೊದಲ ದಿನವೇ ಸರಕಾರದ ವಿರುದ್ಧ ರಣ ಕಹಳೆ ಮೊಳಗಿಸಲು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಜು. 15ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್‌ ರೆಡ್ಡಿ ಉಪಸ್ಥಿತಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯ ಬಳಿಕ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಈ ವಿಷಯ ತಿಳಿಸಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಪಾದಯಾತ್ರೆಯಲ್ಲಿ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಲಾಗುವುದು ಎಂದರು.

ಪದಾಧಿಕಾರಿಗಳ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ವಾಲ್ಮೀಕಿ ಹಗರಣ ಹಾಗೂ ಮುಡಾ ಅವ್ಯವಹಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿಯನ್ನು ಹೆಚ್ಚು ಮಾಡಲಾಗಿತ್ತು. ಆದರೆ ರಾಜ್ಯ ಕಾಂಗ್ರೆಸ್‌ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭಾರೀ ಅವ್ಯವಹಾರ ನಡೆಸಿದೆ. ಹೀಗಾಗಿ ದಲಿತ ವಿರೋಧಿ ಸರಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದರು.

ಸಿಎಂ ರಾಜೀನಾಮೆ ನೀಡಲಿ
ಸರಕಾರದ ನಾಯಕನಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಇಡೀ ಸಚಿವ ಸಂಪುಟ ದಲಿತರ ಹಣ ನುಂಗಲು ತಯಾರಿ ಮಾಡಿಕೊಂಡಿರುವುದು ವಿಷಾದನೀಯ. ಸರಕಾರ ಹೊಸ ಯೋಜನೆಗಳ ಮೂಲಕ ದಲಿತ ಸಮುದಾಯದ ಏಳಿಗೆ ಮಾಡಬೇಕಿತ್ತು. ಆದರೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ ಸೇರಿದಂತೆ ವಾಲ್ಮೀಕಿ ಹಗರಣ, ಕಾರ್ಮಿಕರ ಇಲಾಖೆ ಹಗರಣದ ಸರಮಾಲೆಯನ್ನು ಈ ಸರಕಾರ ಸೃಷ್ಟಿಸಿದೆ.

ಹೀಗಾಗಿ ಜು. 15ರಂದು ವಿಧಾನಸೌಧ ಚಲೋಗೆ ಕರೆ ನಿಡಲಾಗಿದೆ. ವಾಲ್ಮೀಕಿ ಸಮುದಾಯದ ಜನರು ದೊಡ್ಡ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದಲಿತರ ಹಣ ಲೂಟಿ ಮಾಡಿದ್ದಕ್ಕಾಗಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ದಲಿತರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನೆ
ಮುಡಾ ಅವ್ಯವಹಾರ ಖಂಡಿಸಿ ಶುಕ್ರವಾರ ಮೈಸೂರಿನಲ್ಲಿ ಬಿಜೆಪಿಯು ಬೃಹತ್‌ ಪ್ರತಿಭಟನೆ ನಡೆಸಲಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜು. 30ರೊಳಗೆ ಎಲ್ಲ ಜಿಲ್ಲಾ ಮತ್ತು ಮಂಡಲ ಕಾರ್ಯಕಾರಿಣಿ ಮುಕ್ತಾಯಗೊಳಿಸಲು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಸರಕಾರದ ಭ್ರಷ್ಟಾಚಾರದ ವಿರುದ್ಧ ಗ್ರಾಮ ಮಟ್ಟದಲ್ಲೂ ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ ಎಂದರು.

ಹಿಂದುಳಿದ
ವರ್ಗಕ್ಕೆ ಸೇರಿದ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ. ಅದಕ್ಕಾಗಿ ಕುತಂತ್ರ ಮಾಡುತ್ತಿದ್ದಾರೆ. ಈ ಷಡ್ಯಂತ್ರಕ್ಕೆ ಹೆದರುವುದಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next