ನವಲಗುಂದ: ಮಹಾದಾಯಿ, ಕಳಸಾ-ಬಂಡೂರಿ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ರಾಜಿ ಸಂಧಾನ ಮೂಲಕ ಬಗೆಹರಿಸುವಂತೆ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಕ್ಷಾತೀತ ಹೋರಾಟ ಸಮಿತಿ ರೈತ ಹೋರಾಟಗಾರರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿ ಕಾರ ಸ್ವೀಕರಿಸಿ ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರು ನಷ್ಟ ಅನುಭವಿಸಿದ್ದು ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿ ಸುಮಾರು ಎರಡು ತಿಂಗಳು ಗತಿಸಿದರೂ ರೈತರ ಖಾತೆಗಳಿಗೆ ಹಣ ಪಾವತಿಯಾಗಿಲ್ಲ. ಕೂಡಲೇ ಹಣ ಜಮಾ ಮಾಡದಿದ್ದರೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡ ಅಲ್ಲಾಭಕ್ಷ ಹಂಚಿನಾಳ ಮಾತನಾಡಿ, ಗೋಧಿ, ಜೋಳದ ಖರೀದಿ ಕೇಂದ್ರ ಆರಂಭಿಸಬೇಕು. ಕೆಲವು ಹೋಬಳಿ ಪ್ರದೇಶದಲ್ಲಿ ಹತ್ತಿ, ಮೆಣಸಿನಕಾಯಿ ಈರುಳ್ಳಿ, ಬೆಳೆಗಳ ಬೆಳೆ ವಿಮಾ ಪರಿಹಾರ ಬರದೇ ಸಂಕಷ್ಟ ಅನುಭವಿಸುವಂತಾಗಿದ್ದು ಕೂಡಲೇ ವಿಮಾ ಕಂತು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಆರ್.ಎಂ.ನಾಯ್ಕರ, ಫಕ್ಕಿರಗೌಡ ವೆಂಕನಗೌಡರ, ಶಿವಪ್ಪ ಸಂಗಳದ, ಬಸಯ್ಯ ಮಠಪತಿ, ಗುರುಸಿದ್ದಪ್ಪ ಕಾಲುಂಗರ, ಯಲ್ಲರಡ್ಡಿ ವನಹಳ್ಳಿ, ಮಲ್ಲಪ್ಪ ರಡ್ಡೇರ, ರಾಮಣ್ಣ ಕಿಲಾರಿ, ಫಕ್ಕಿರಪ್ಪ ಚಿಲಕೂಡಿ, ಶಿದ್ದಪ್ಪ ಮುಪ್ಪಯ್ಯನವರ, ತಿಪ್ಪಣ್ಣ ಕರಿಗಾರ, ಮಲ್ಲಪ್ಪ ಹತ್ತಿಕಟಗಿ, ಬಸನಗೌಡ ಪಾಟೀಲ, ಯಲ್ಲಪ್ಪ ದಾಡಿಬಾಯಿ, ಗಂಗಪ್ಪ ಸಂಗಟಿ ಮತ್ತಿತರರು ಇದ್ದರು.