Advertisement
ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಜಾನಿಗೆರೆ ಎಂಬ ಗ್ರಾಮವಿದೆ. ಅಲ್ಲಿ ರೈತರೊಬ್ಬರು ಹಲಸಿನ ಮರ ಬೆಳೆಸಿದ್ದಾರೆ. ಈ ಹಣ್ಣಿನ ರುಚಿ ಮತ್ಯಾವ ಹಣ್ಣಿನಲ್ಲೂ ಸಿಗದು. ಜಾನಿಗೆರೆ ಹಲಸಿನ ಹಣ್ಣು ಎಂದರೆ ಸಾಕು ಜೇನುತುಪ್ಪದಂತೆ ಬಾಯಿಂದ ನೀರು ಬರುತ್ತದೆ. ಏಕೆಂದರೆ, ಆ ಹಣ್ಣಿನ ರುಚಿಯೂ ಜೇನಿನಷ್ಟೆ ಸಿಹಿಯಾಗಿರುತ್ತದೆ. ಈ ಹಣ್ಣಿಗೆ ಬೇಡಿಕೆ ಜಾಸ್ತಿ ಇದ್ದು, ಹಣ್ಣನ್ನು ಎರಡು ಪಟ್ಟು ಹಣ ಕೊಟ್ಟು ಖರೀದಿಸುತ್ತಾರೆ.
Related Articles
Advertisement
ಆರೋಗ್ಯಕ್ಕೆ ಒಳ್ಳೆಯದು ಹೇಗೆ: ಖನಿಜಾಂಶ, ವಿಟಮಿನ್‌ಗಳು ಮತ್ತು ಆಹಾರದ ನಾರಿನಾಂಶ ಹೊಂದಿರುವಂತಹ ಹಲಸಿನ ಹಣ್ಣು ನೈಸರ್ಗಿಕ ವಿರೇಚಕ ಗುಣ ಹೊಂದಿದೆ ಮತ್ತು ಇದು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆ ದೂರ ಮಾಡುವುದು. ವಿಟಮಿನ್ ಎ ಒಳಗೊಂಡಿರುವ ಹಲಸಿನ ಹಣ್ಣು ಕಣ್ಣಿಗೆ ಕೂಡ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬು ಇಲ್ಲದಿರುವುದು ಇದರ ಮತ್ತೂಂದು ಗುಣವಾಗಿದೆ. ವಿಟಮಿನ್ ಬಿಯಿಂದ ಸಮೃದ್ಧವಾಗಿರುವ ಇದರಲ್ಲಿ ನಿಯಾಸಿನ್, ಪಿರಿಡಾಕ್ಸಿನ್, ರಿಬೋಫ್ಲಾವಿನ್ ಮತ್ತು ಫೋಲಿಕ್ ಆಮ್ಲವಿದೆ. ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರೀತಿಯ ಪೈಥೋ ಕೆಮಿಕಲ್ ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ. ಹಲಸಿನ ಹಣ್ಣಿನಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಫಿರ್ಯಾಡಿಕಲ್‌ನ್ನು ತಟಸ್ಥಗೊಳಿಸುವುದು ಮತ್ತು ಕೆಲವು ಕ್ಯಾನ್ಸರ್‌ನ್ನು ಇದು ತಡೆಯುವುದು. ಹಲಸಿನ ಹಣ್ಣಿನಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡು ವುದು ಎಂದು ಅಧ್ಯಯನವು ಹೇಳಿವೆ.
ನಿದ್ರಾಹೀನತೆ ನಿವಾರಣೆ: ಹಲಸಿನ ಹಣ್ಣು ತಿಂದರೆ ಅದರಿಂದ ನಿದ್ರೆಯ ಸಮಸ್ಯೆ ನಿವಾರಣೆ ಮಾಡಬಹುದು. ಇದರಲ್ಲಿ ಮೆಗ್ನಿಶಿಯಂ ಮತ್ತು ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ. ಮೆಗ್ನಿಶಿಯಂ ನಿದ್ರಾಹೀನತೆಗೆ ಕಾರಣವಾಗುವಂತಹ ರಕ್ತಹೀನತೆಯನ್ನು ಕೂಡ ಕಡಿಮೆ ಮಾಡುವುದು.
ಮಧುಮೇಹಿ ಸ್ನೇಹಿ: ಹಲಸಿನ ಹಣ್ಣು ತುಂಬಾ ಸಿಹಿ ಯಾಗಿ ಇದ್ದರೂ, ಇದನ್ನು ಮಧುಮೇಹಿಗಳು ತಿಂದರೂ ತುಂಬಾ ಸುರಕ್ಷಿತವಾಗಿರುವುದು. ಯಾಕೆಂ ದರೆ ಇದರ ಲ್ಲಿನ ಸಕ್ಕರೆಯು ರಕ್ತನಾಳದಲ್ಲಿ ತುಂಬಾ ನಿಧಾನವಾಗಿ ಹೀರಿಕೊಳ್ಳುವುದು. ಹೀಗಾಗಿ ಮಧುಮೇಹಿಗಳು ಈ ಹಣ್ಣನ್ನು ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು. ಎರಡೂ ರೀತಿಯ ಮಧುಮೇಹಿಗಳಲ್ಲಿ ಇದು ಗ್ಲೂಕೋಸ್ ಸಹಿಷ್ಣತೆಯನ್ನು ಹೆಚ್ಚಿಸುವುದು.
ತೂಕ ಇಳಿಸಲು ಅನುಕೂಲ : ಬೊಜ್ಜು ದೇಹಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲಿದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಹಲಸಿನ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು. ಪೊಟಾಷಿಯಂ ಅಂಶವು ಅತ್ಯಧಿಕವಾಗಿ ಇರುವಂತಹ ಹಲಸಿನ ಹಣ್ಣು ರಕ್ತದೊತ್ತಡ ಕಡಿಮೆ ಮಾಡುವುದು ಮತ್ತು ಇದನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುವುದು.
ಸರ್ಕಾರ ಸೂಕ್ತ ಮಾರುಕಟ್ಟೆ ಒದಗಿಸಲಿ : ಮಾಗಡಿ ತಾಲೂಕಿನಲ್ಲಿ ರೈತರು ಹಲಸಿನ ಹಣ್ಣನ್ನು ಯಥೇಚ್ಚವಾಗಿ ಬೆಳೆಯುತ್ತಿದ್ದಾರೆ. ಆದರೆ, ವರ್ಷ ಕಾದು ಬೆಳೆದ ಹಲಸಿನ ಹಣ್ಣಿನ ಮಾರುಕಟ್ಟೆ ಇಲ್ಲದೆ ರಸ್ತೆ ಬದಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ಪರಿಸ್ಥಿತಿಯಿದೆ. ಮಾರಾಟ ದಳ್ಳಾಳಿಗಳ ಪಾಲಾಗುತ್ತಿದೆ. ರೈತರ ಮನೆ ಬಳಿಗೆ ತೆರಳಿ 100 ರೂ.ನ ಬೆಲೆಯ ಹಲಸಿನ ಹಣ್ಣನ್ನು 20ರಿಂದ 30 ರೂ.ಗೆ ದಳ್ಳಾಳಿಗಳು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ. ಸೂಕ್ತ ಮಾರುಕಟ್ಟೆ ಕೊರತೆಯಿಂದ ರೈತ ಮಾತ್ರ ಸಂಕಷ್ಟದಿಂದ ಪಾರಾಗಲೇ ಇಲ್ಲ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು, ದಳ್ಳಾಳಿಗಳನ್ನು ಮುಕ್ತಗೊಳಿಸಲು ಸೂಕ್ತ ಮಾರುಕಟ್ಟೆಯನ್ನು ಸರ್ಕಾರ ಒದಗಿಸಿದರೆ ಕೊಂಚ ಅನ್ನದಾತನ ಬದುಕು ಹಸನಾಗಬಹುದು ಎಂದು ಹಲಸಿನ ಹಣ್ಣಿನ ಬೆಳೆಗಾರ ರಂಗಸ್ವಾಮಯ್ಯ ಹೇಳುತ್ತಾರೆ.
ಮೊದಲು ಹಲಸಿನ ಹಣ್ಣಿಗೆ ಬೇಡಿಕೆ ಕಡಿಮೆಯಿತ್ತು. ಹಲಸಿನ ಹಣ್ಣಿನಲ್ಲಿ ಔಷಧ ಗುಣವಿದೆ. ಜತೆಗೆ ಇದನ್ನು ಈಗ ಔಷಧ ತಯಾರಿಕೆಗೆ ಹಾಗೂ ಸೌಂದರ್ಯ ವರ್ಧಕಕ್ಕೂ ಬಳಸಲಾಗುತ್ತಿದೆ. ವಿವಿಧ ಖ್ಯಾದಗಳು ತಯಾರಿಸಲು ಹಲಸಿನಕಾಯಿ, ಹಣ್ಣಿನ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಹಲಸಿನ ಹಣ್ಣಿನ ಖರೀದಿ ಭರಾಟೆಯೂ ಜೋರಾಗಿಯೇ ಇದೆ. – ರಾಜಣ್ಣ , ಪ್ರಗತಿಪರ ರೈತ
-ತಿರುಮಲೆ ಶ್ರೀನಿವಾಸ್