ಬಾಗಲಕೋಟೆ: ಶತಮಾನ ಪೂರೈಸಿದ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣ ಬೇಡಿಕೆ ಅರ್ಧಕ್ಕೆ ನಿಂತಿದ್ದು, ಅದಕ್ಕೆ ಮತ್ತೇ ಮರುಜೀವ ಬಂದಿದೆ,
ಶತಮಾನದ ಬೇಡಿಕೆ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣದ ಬೇಡಿಕೆ ಬ್ರಿಟಿಷರ ಕಾಲದ್ದು. 1912ರಲ್ಲೇ ಮೊದಲ ಬಾರಿಗೆ ಈ ಮಾರ್ಗಕ್ಕೆ ಸರ್ವೇ ಕೂಡ ನಡೆದಿತ್ತು. ಆಗ ಲಾಭದಾಯಕವಾಗಿಲ್ಲ ಎಂಬ ಕಾರಣದಿಂದ ಕೈಬಿಡಲಾಗಿತ್ತು. ಬಳಿಕ ಹಲವು ಹೋರಾಟ ಬಳಿಕ ದಿ. ಸಿದ್ದು ನ್ಯಾಮಗೌಡ ಅವರು ಕೇಂದ್ರ ಸಚಿವರಾಗಿದ್ದ ವೇಳೆ ಈ ಬೇಡಿಕೆ ಪುನಃ ಚಿಗುರೊಡೆದು, ಸರ್ವೇ ಕೂಡ ನಡೆದು, ರೈಲ್ವೆ ಸಚಿವಾಲಯದ ಎದುರು ಪ್ರಸ್ತಾವನೆ ಇತ್ತು.ಯುಪಿಎ ಸರ್ಕಾರದ ಅವಧಿಯಲ್ಲಿ ಮಮತಾ ಬ್ಯಾನರ್ಜಿ ಕೇಂದ್ರದ ರೈಲ್ವೆ ಸಚಿವರಾಗಿದ್ದ ವೇಳೆ 2010ರಲ್ಲಿ ಒಟ್ಟು 141 ಕಿ.ಮೀ ದೂರ, 820 ಕೋಟಿ ಮೊತ್ತದ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಯೋಜನೆಗೆ ಅನುಮೋದನೆ ಕೊಟ್ಟಿದ್ದರು.
2011ರಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನವೂ ಆರಂಭವಾಯಿತು. ಎರಡು ಜಿಲ್ಲೆ, ಮೂರು ಉಪ ವಿಭಾಗ ವ್ಯಾಪ್ತಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದ್ದು, ಬಾಗಲಕೋಟೆ ಉಪ ವಿಭಾಗದಲ್ಲಿ ಮಾತ್ರ ವೇಗವಾಗಿ ನಡೆದು, ಮಾರ್ಗವೂ ಕೂಡ 33 ಕಿ.ಮೀ ವರೆಗೆ ನಿರ್ಮಾಣಗೊಂಡಿತು. ಆದರೆ, ಚಿಕ್ಕೋಡಿ ಮತ್ತು ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಈವರೆಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ.
ಯೋಜನಾ ವೆಚ್ಚದ ದುಪ್ಪಟ್ಟು: ಈ ಮಾರ್ಗದ ಯೋಜನೆಗೆ ಅನುಮೋದನೆ ಕೊಡುವ ವೇಳೆ ಒಟ್ಟು 820 ಕೋಟಿ ಖರ್ಚಿನಲ್ಲಿ 141 ಕಿ.ಮೀ ರೈಲ್ವೆ ಮಾರ್ಗ ಪೂರ್ಣಗೊಳ್ಳುತ್ತಿತ್ತು. ಆದರೆ, ವಿಳಂಬವಾದಂತೆ, ಯೋಜನಾ ವೆಚ್ಚದ ಹೆಚ್ಚುತ್ತಲೇ ಇದೆ. ರೈಲ್ವೆ ಇಲಾಖೆ ಲೆಕ್ಕದ ಪ್ರಕಾರ ಒಂದು ಕಿ.ಮೀ ರೈಲು ಮಾರ್ಗ ನಿರ್ಮಾಣಕ್ಕೆ 8 ಕೋಟಿ ಹಣ ಬೇಕು. ಈಗ 33 ಕಿ.ಮೀ ಮಾರ್ಗ ಪೂರ್ಣಗೊಂಡಿದ್ದು, ಇನ್ನೂ 110 ಕಿ.ಮೀ ನಿರ್ಮಾಣಗೊಳ್ಳಬೇಕಿದೆ. ಆದ್ದರಿಂದ ಮಾರ್ಗ ಪೂರ್ಣಗೊಳ್ಳಲು ಇನ್ನೂ ಹೆಚ್ಚುವರಿಯಾಗಿ 880 ಕೋಟಿ ಅನುದಾನ ಅಗತ್ಯವಿದೆ. ಅಲ್ಲದೇ 1 ಕಿ.ಮೀ ಮಾರ್ಗ ನಿರ್ಮಾಣಕ್ಕೆ 10 ಎಕರೆ ಭೂಮಿ ಅಗತ್ಯವಿದೆ. ಜತೆಗೆ ಒಂದು ರೈಲ್ವೆ ನಿಲ್ದಾಣ ನಿರ್ಮಾಣಗೊಳ್ಳಲು ಕನಿಷ್ಠ 50 ಎಕರೆ ಭೂಮಿ ಅಗತ್ಯವಿದೆ.
Advertisement
ಸಿ.ಕೆ. ಜಾಫರ್ ಷರೀಫ್ ಮತ್ತು ಬಸನಗೌಡ ಪಾಟೀಲ ಯತ್ನಾಳ ಬಳಿಕ, ಕೇಂದ್ರ ರೈಲ್ವೆ ಸಚಿವ ಸ್ಥಾನ ಉತ್ತರ ಕರ್ನಾಟಕಕ್ಕೆ ಲಭಿಸಿದ್ದು, ಈ ಶತಮಾನದ ಬೇಡಿಕೆ ಪೂರ್ಣಗೊಳ್ಳುವ ಆಸೆ ಚಿಗುರೊಡೆದಿದೆ.
Related Articles
Advertisement
33 ಕಿ.ಮೀ ಪೂರ್ಣ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಕೇವಲ ಬಾಗಲಕೋಟೆ ಉಪ ವಿಭಾಗ ವ್ಯಾಪ್ತಿಯ ಖಜ್ಜಿಡೋಣಿ (33 ಕಿ.ಮೀ)ವರೆಗೆ ಪೂರ್ಣಗೊಂಡಿದ್ದು, ಇದಕ್ಕಾಗಿ 400 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೇ 536 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡು, ರೈಲ್ವೆ ಇಲಾಖೆಗೆ ನೀಡಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 280 ಎಕರೆ, ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸುಮಾರು 1600 ಎಕರೆ ಸಹಿತ ಒಟ್ಟು 1884 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದಕ್ಕೆ ರಾಜ್ಯ ಸರ್ಕಾರ ಹಣ ಭರಿಸಬೇಕು. ಆದರೆ, ಕಳೆದ 2013ರಿಂದಲೂ ಈ ಮಾರ್ಗದ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅನುದಾನ ಕೊಟ್ಟಿಲ್ಲ. ಹೀಗಾಗಿ ಭೂಸ್ವಾಧೀನವಾಗಿಲ್ಲ ಎನ್ನಲಾಗಿದೆ.
ತವರು ಜಿಲ್ಲೆಗೂ ಅನುಕೂಲ:
ಪಕ್ಕದ ಬೆಳಗಾವಿಯ ಸಂಸದ ಸುರೇಶ ಅಂಗಡಿ ಕೇಂದ್ರ ರೈಲ್ವೆ ಖಾತೆ ಸಚಿವರಾಗಿ ನೇಮಕಗೊಂಡಿದ್ದಾರೆ. ಅವರ ತವರು ಜಿಲ್ಲೆಗೂ ಈ ಮಾರ್ಗದಿಂದ ಅನುಕೂಲವಿದೆ. ಅಲ್ಲದೇ ಮಹಾರಾಷ್ಟ್ರ ಸಂಪರ್ಕ ಸನಿಹಗೊಳಿಸುವ, ಈ ಭಾಗದಲ್ಲಿ ಹೇರಳವಾಗಿ ಬೆಳೆಯುವ ತೋಟಗಾರಿಕೆ ಬೆಳೆ, ಸುಣ್ಣದ ಕಲ್ಲು, ಸಿಮೆಂಟ್ ಅನ್ನು ಮುಂಬೈ ಮಾರುಕಟ್ಟೆಗೆ ಸಾಗಿಸಲು ಅನುಕೂಲವಾಗುವ ಈ ಮಾರ್ಗ ನಿರ್ಮಾಣ ತ್ವರಿಗತಿಯಲ್ಲಿ ಪೂರ್ಣಗೊಳಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ.
•ಶ್ರೀಶೈಲ ಕೆ. ಬಿರಾದಾರ